Advertisement

ರೈತರ ಜತೆ ಡಿಕೆಶಿ ಸಫ‌ಲ ಸಂಧಾನ

06:00 AM Nov 24, 2018 | |

ಬೆಳಗಾವಿ: ಕಬ್ಬಿನ ಬಾಕಿ ಹಣ ಪಾವತಿ ಹಾಗೂ ದರ ನಿಗದಿ ಸಂಬಂಧ ಕಳೆದ ಐದು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸದಸ್ಯರೊಂದಿಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಅಧ್ಯಕ್ಷ ಸಿದಗೌಡ ಮೋದಗಿ, ರೈತ ಮಹಿಳೆ ಜಯಶ್ರೀ ಗುರನ್ನವರ ಅವರಿಗೆ ಸಚಿವರೇ ಎಳನೀರು ಕೊಡುವ ಮೂಲಕ ಸತ್ಯಾಗ್ರಹ ಅಂತ್ಯಗೊಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸುತ್ತಿದ್ದ ರೈತ ಸಂಘದ ಮುಖಂಡರನ್ನು ಭೇಟಿ ಮಾಡಿದ ಸಚಿವ ಶಿವಕುಮಾರ, ಸರ್ಕಾರ ನಿಮ್ಮೊಂದಿಗಿದೆ, ಚಳಿಗಾಲದ ಅಧಿವೇಶನದ ಅರಂಭಕ್ಕೆ ಮುನ್ನ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಮುಖಂಡರು ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್‌, ಸರ್ಕಾರ ಯಾವತ್ತೂ ಸಕ್ಕರೆ ಕಾರ್ಖಾನೆ ಮಾಲೀಕರ ಪರ ಇಲ್ಲ. ನಾವು ಎಂದಿಗೂ ರೈತರನ್ನು ಬಿಟ್ಟು ಕೊಡುವುದಿಲ್ಲ. ಬಾಕಿ ಹಣ ಪಾವತಿ ಹಾಗೂ ದರ ನಿಗದಿ ವಿಷಯವಾಗಿ ಈಗಾಗಲೇ ಮುಖ್ಯಮಂತ್ರಿಗಳು ಚರ್ಚೆ ಮಾಡಿದ್ದಾರೆ. 

ಚಳಿಗಾಲದ ಅಧಿವೇಶನದೊಳಗೆ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು ದರ ನಿಗದಿ ಬಾಕಿ ಹಾಗೂ ಬಾಕಿ ಹಣ ಕೊಡುವ ಮಾತಿನಲ್ಲಿ ತಪ್ಪಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಇದು ದುರದೃಷ್ಟಕರ. ನಿಮ್ಮ ನೋವು ನಮಗೆ ಅರ್ಥವಾಗಿದೆ. ಧೈರ್ಯ ಕಳೆದುಕೊಳ್ಳಬೇಡಿ ಎಂದು ಧೈರ್ಯ ತುಂಬಿದರು.

ಇದಕ್ಕೂ ಮುನ್ನ ಸಚಿವರ ಸಂಧಾನ ಮಾತುಕತೆಗೆ ಒಪ್ಪಿ ಸತ್ಯಾಗ್ರಹ ಅಂತ್ಯಗೊಳಿಸಿ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕೊಟ್ಟ ಹಾಗೂ ಅವರು ಕಬ್ಬು ನುರಿಸಿದ ದಾಖಲೆಗಳಿವೆ. ಆದರೂ ನಾವು ಪ್ರತಿ ವರ್ಷ ದರ ಹಾಗೂ ಬಾಕಿ ಹಣಕ್ಕಾಗಿ ಹೋರಾಟ ಮಾಡಬೇಕಾಗಿದೆ. ಕಾರಣ ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next