Advertisement

ಲಸಿಕೆ ಪಡೆಯದಿದ್ದರೂ ಸಕ್ಸಸ್‌ಫುಲ್‌ ಸಂದೇಶ!

05:58 PM Dec 02, 2021 | Team Udayavani |

ರಾಯಚೂರು: ಕೋವಿಡ್‌ ಲಸಿಕೆ ಶೇ.100ರಷ್ಟು ಗುರಿ ಸಾಧಿಸಲು ಸರ್ಕಾರ ಆರೋಗ್ಯ ಇಲಾಖೆಗೆ ಹಿಂದೆಯೇ ಗುರಿ ನೀಡಿತ್ತು. ಗುರಿ ತಲುಪಲು ಅಧಿಕಾರಿಗಳು ನಾನಾ ಕಸರತ್ತು ನಡೆಸಿದ್ದರೆ; ಈಗ 2ನೇ ಡೋಸ್‌ ಲಸಿಕೆ ಪಡೆಯದವರಿಗೂ ಸಕ್ಸಸ್‌ಫುಲ್‌ ಸಂದೇಶಗಳು ಬರುತ್ತಿರುವುದು ಅನುಮಾನಕ್ಕೆಡೆ ಮಾಡಿವೆ.

Advertisement

ಲಸಿಕೆ ಗುರಿ ತಲುಪಲು ಜಿಲ್ಲಾಡಳಿತ ನಾನಾ ಪ್ರಯಾಸ ಪಟ್ಟಿದ್ದನ್ನು ನೋಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಲಸಿಕೆ ಪಡೆಯಲು ಜನ ಅಸಹಕಾರ ತೋರಿದ್ದರಿಂದ ಜಿಲ್ಲಾಡಳಿತಕ್ಕೆ ತಲೆ ನೋವಾಗಿತ್ತು. ಇ ದಕ್ಕಾಗಿ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಪಡೆಯುವಂತೆ ಮನವೊಲಿಸುವ ಪರಿಸ್ಥಿತಿ ಬಂದರೆ, ಹೊಲಗಳಿಗೆ ತೆರಳಿ ಅಲ್ಲಿಯೇ ಲಸಿಕೆ ನೀಡಿದ ಘಟನೆಗಳು ನಡೆದವು.

ಈಗ ಮೊದಲನೇ ಡೋಸ್‌ ಪಡೆದವರಿಗೆ 84 ದಿನಗಳು ಮುಗಿಯುತ್ತಿದ್ದಂತೆ 2ನೇ ಡೋಸ್‌ ಪಡೆಯದಿದ್ದರೂ ಸಂದೇಶ ಬರುತ್ತಿವೆ. ನಾವು ಲಸಿಕೆಯನ್ನು ಪಡೆದಿಲ್ಲ. ಆದರೂ ಸಂದೇಶ ಯಾಕೆ ಬಂದಿದೆ ಎಂಬ ಆತಂಕ ಜನರಲ್ಲಿ ಮೂಡುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಮೊದಲನೇ ಡೋಸ್‌ ಲಸಿಕೆ ಶೇ.83ರಷ್ಟು ಜನರಿಗೆ ನೀಡಿದ್ದರೆ, ಶೇ.52ರಷ್ಟು ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ಅಂದರೆ 11,53,451 ಜನರಿಗೆ ಮೊದಲ ಡೋಸ್‌, 6,75,267 ಜನರಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ.

ತಾಂತ್ರಿಕ ದೋಷ ಕಾರಣ?: ಆರೋಗ್ಯ ಇಲಾಖೆ ಅಧಿ ಕಾರಿಗಳ ಪ್ರಕಾರ ಈ ರೀತಿ ಸಂದೇಶ ರವಾನೆಯಾಗುವುದಕ್ಕೆ ತಾಂತ್ರಿಕ ದೋಷ ಕಾರಣ ಎನ್ನುತ್ತಿದ್ದಾರೆ. ಪೋರ್ಟಲ್‌ ಸರಿಯಾಗಿ ಕೆಲಸ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ಮೊದಲ ಡೋಸ್‌ ಹಾಕಿದ 84 ದಿನಗಳ ಬಳಿಕ ಎರಡನೇ ಡೋಸ್‌ ನೀಡಲಾಗುತ್ತದೆ. ಆರಂಭದಲ್ಲಿ ಒಂದರ ಬಳಿಕ ಮತ್ತೂಂದು ಲಸಿಕೆ ನೀಡಲು ಅವಧಿ ಕಡಿಮೆಯಿತ್ತು. ಬಳಿಕ ಆ ಅವ ಧಿಯನ್ನು 84 ದಿನಗಳಿಗೆ ವಿಸ್ತರಿಸಲಾಯಿತು. 84 ದಿನ ಆಗುವವರೆಗೆ ಇಲಾಖೆಯ ಪೋರ್ಟಲ್‌ನಲ್ಲಿ ಹೆಸರು ಸ್ವೀಕರಿಸುತ್ತಿರಲಿಲ್ಲ. ಈಗ ಅದು ಸರಿಯಾಗಿ ಕೆಲಸ ಮಾಡದ ಕಾರಣ ಇಲಾಖೆ ಅ ಧಿಕಾರಿಗಳೇ ಲಸಿಕೆ ಅವಧಿ  ಮುಗಿದವರಿಗೆ ಕರೆ ಮಾಡಿ ತಿಳಿಸುತ್ತಿದ್ದಾರೆ. ಆದರೆ, ಕೆಲವರಿಗೆ ಮಾತ್ರ ನಿಮ್ಮ ಎರಡನೇ ಡೋಸ್‌ ಲಸಿಕೆ ಯಶಸ್ವಿಯಾಗಿದೆ ಎಂಬ ಸಂದೇಶ ಬರುತ್ತಿರುವುದು ಅನುಮಾನಕ್ಕೆಡೆ ಮಾಡಿದಂತಾಗಿದೆ.

ಕಟ್ಟೆಚ್ಚರಕ್ಕೆ ಸೂಚನೆ
ಅಕ್ಕಪಕ್ಕದ ಜಿಲ್ಲೆಗಳಲ್ಲಿ 3ನೇ ಅಲೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದರೆ, ಜಿಲ್ಲೆಯಲ್ಲಿ ಮಾತ್ರ ಯಾವುದೇ ಮುನೆಚ್ಚರಿಕೆ ವಹಿಸಿರಲಿಲ್ಲ. ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ  ಅನಿಲ್‌ ಕುಮಾರ್‌ ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದ್ದು, ಕೂಡಲೇ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಗಡಿ ಭಾಗದ ಏಳು ಚೆಕ್‌ ಪೋಸ್ಟ್‌ಗಳನ್ನು ಮತ್ತೆ ಕಾರ್ಯೋನ್ಮುಖಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಅಲ್ಲದೇ, ಎರಡು ಡೋಸ್‌ ಲಸಿಕೆ ಪಡೆದಿದ್ದು, ಆರ್‌ ಟಿಪಿಸಿಆರ್‌ ಪರೀಕ್ಷೆಗೆ ಒಳಪಟ್ಟವರಿಗೆ ಮಾತ್ರ ಪ್ರವೇಶ ನೀಡಲು ಸೂಚಿಸಿದ್ದು, ರೋಗ ಲಕ್ಷಣಗಳಿದ್ದಲ್ಲಿ ತಪಾಸಣೆ ಮಾಡುವಂತೆ ತಿಳಿಸಲಾಗಿದೆ. ಇನ್ನೂ ವಿವಿಧ ವಸತಿ ನಿಲಯಗಳಲ್ಲಿ ವಾಸಿಸುವ, ಕಾಲೇಜುಗಳಲ್ಲಿ ಓದುತ್ತಿರುವ ಕೇರಳ, ಮಹಾರಾಷ್ಟ್ರದ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಕೋವಿಡ್‌ 19 ಎರಡನೇ ಡೋಸ್‌ ಲಸಿಕೆ ಹಾಕಿಸಿಕೊಳ್ಳದವರಿಗೆ ನಾವೆ ಕರೆ ಮಾಡಿ ತಿಳಿಸುತ್ತಿದ್ದೇವೆ. ಆದರೆ, ಕೆಲವರಿಗೆ ಸಕ್ಸಸ್‌ಫುಲ್‌ ಸಂದೇಶಗಳು ಹೋಗುತ್ತಿರುವ ದೂರುಗಳು ಬಂದಿವೆ. ಇಂಟರ್‌ನೆಟ್‌ ಪೋರ್ಟಲ್‌ ಸಮಸ್ಯೆಯಿಂದ ಈ ರೀತಿ ಸಂದೇಶಗಳು ಹೋಗುತ್ತಿವೆ. ಸಂದೇಶ ಬಂದವರು ಆತಂಕ ಪಡೆದೆ ಸಮೀಪದ ಆರೋಗ್ಯ ಕೇಂದ್ರಗಳಿಗೆ ಹೋಗಿ 2ನೇ ಡೋಸ್‌ ಲಸಿಕೆ ಪಡೆಯಬಹುದು. ಇನ್ನೂ 84 ದಿನಗಳಾಗಿದ್ದರೆ ಕೂಡಲೇ ಲಸಿಕೆ ಪಡೆಯಬೇಕು.
∙ಡಾ| ರಾಮಕೃಷ್ಣ,
ಜಿಲ್ಲಾ ಆರೋಗ್ಯಾಧಿಕಾರಿ

*ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next