Advertisement

ಯಶಸ್ವಿ ನಾಯಕ, ಸಾಧನೆಗೆ ಇರಲಿ ಐದು ಮಂತ್ರ

03:35 PM Aug 01, 2018 | |

ಸಂಸ್ಥೆ ಯಾವುದೇ ಇರಬಹುದು. ಅಲ್ಲಿ ಯುವಕರ ಪಾತ್ರಮಹತ್ವದ್ದಾಗಿರುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶಗಳು ನೂರಾರು ಇರುತ್ತವೆ. ತಮಗೆ ಸಿಗುವ ಅವಕಾಶಗಳನ್ನು ಬಳಸಿಕೊಂಡು, ಸಮರ್ಥವಾಗಿ ಮುನ್ನಡೆದರೆ ಮಾತ್ರ ಯಶಸ್ವಿ ನಾಯಕನಾಗಲು ಸಾಧ್ಯವಿದೆ. 

Advertisement

ದೇಶದ ಬಹುತೇಕ ಪ್ರತಿಷ್ಠಿತ ಕಂಪೆನಿಗಳ ಉನ್ನತ ಸ್ಥಾನ  ಯುವಕರ ಪಾಲಾಗುತ್ತಿವೆ ಎಂಬುದು ಗಮನಾರ್ಹವಾದ ವಿಚಾರ. ಇದಕ್ಕೆ ಕಾರಣ ಯುವಕರಲ್ಲಿ ಕಾಣಬಹುದಾದ ನವೀನತೆ, ಹೊಸತನದ ಆಲೋಚನೆ ಜತೆಗೆ ನಾಯಕತ್ವ. ಇಂದು ನಾಯಕತ್ವ ಎಂಬ ಪರಿಕಲ್ಪನೆ ಬಹುವಿಸ್ತೃತವಾಗಿ ಚರ್ಚೆಯಾಗುತ್ತಿದೆ. ಶಿಕ್ಷಣ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಪಡದುಕೊಳ್ಳಬೇಕಾದರೆ ನಾಯಕತ್ವ ಎಂಬುದು ಬಹುಮುಖ್ಯ. ಆದರೆ ಆ ಸ್ಥಾನ ಪಡೆಯಲು ನಮ್ಮಲ್ಲಿ ತಾಳ್ಮೆ, ಪರಿಶ್ರಮ ಅಗತ್ಯವಾಗಿ ಇರಬೇಕಾದ ಗುಣಗಳು.

ಪ್ರತಿಯೊಂದು ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸುವವನೇ ನಿಜವಾದ ನಾಯಕ ಎಂಬ ಬ್ರೇನ್‌ ಟ್ರೇಸಿ ಅವರ ಮಾತಿನಂತೆ, ನಾಯಕತ್ವ ಎಂಬುದು ಕೇವಲ ಒಂದು ಹುದ್ದೆಯಲ್ಲ ಅದೊಂದು ಜವಾಬ್ದಾರಿ. ಒಂದು ಕಂಪೆನಿ ಅಥವಾ ಸಂಸ್ಥೆಯಲ್ಲಿ ಸಿಕ್ಕಿರುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯ. ಎಲ್ಲರನ್ನೂ ಸೇರಿಸಿಕೊಂಡು ಮುನ್ನಡೆಯಬೇಕಾದ್ದರಿಂದ ನಾಯಕನಿಗೆ ಅದೊಂದು ದೊಡ್ಡ ಸವಾಲು. ಅದಕ್ಕಾಗಿ ನಾಯಕನಲ್ಲಿರುವ ಗುಣ ಅಥವಾ ಮಂತ್ರ ಕೂಡ ಆತನ ಯಶಸ್ಸಿಗೆ ಕಾರಣವಾಗುತ್ತದೆ. ನಾಯಕನಾಗಲು ಇಚ್ಛೆಯುಳ್ಳವರು ಅಥವಾ ನಾಯಕ ಸ್ಥಾನದಲ್ಲಿರುವವರು ಪ್ರಮುಖವಾಗಿ ಐದು ಗುಣಗಳನ್ನು ಹೊಂದಿರಲೇಬೇಕು. ಹಾಗಿದ್ದರೆ ಮಾತ್ರ ಆತ ಯಶಸ್ವಿ ನಾಯಕನಾಗಬಲ್ಲ.

ಮಿತಿಗಳನ್ನು ತಿಳಿಯಿರಿ
ಮನುಷ್ಯನಿಗೆ ಸಾಧ್ಯವಾಗದ ಕೆಲಸ ಯಾವುದೂ ಇಲ್ಲ. ಹಾಗಂತ ಅಸಾಧ್ಯವಾದ ಕೆಲಸಗಳೂ ಇವೆ. ಕಾರ್ಯಕ್ಷಮತೆ ಹಾಗೂ ಸಾಮರ್ಥ್ಯಕ್ಕನುಗುಣವಾಗಿ ಈ ವ್ಯಾಪ್ತಿಗೆ ಸೇರ್ಪಡೆಗೊಳ್ಳುತ್ತದೆ. ನಾಯಕರಾದವರೂ ಕೂಡ ತಮ್ಮ ವ್ಯಾಪ್ತಿ, ಮಿತಿ ಮೀರಿದ ಕೆಲಸಗಳನ್ನು ಸ್ವೀಕರಿಸಬಾರದು. ಸವಾಲುಗಳನ್ನು ಸ್ವೀಕರಿಸುವ ಮುಂಚೆ ನಾವು ಪರಿಪೂರ್ಣವಾಗಿ ಹೋಂವರ್ಕ್‌ ಮಾಡಿಕೊಳ್ಳಬೇಕು.

ಟೀಂ ವರ್ಕ್‌ ಇರಲಿ
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ನಾಯಕತ್ವದಲ್ಲಿ ಗುರಿಯನ್ನು ತಲುಪಬೇಕಾದರೆ ನಾವು ತಂಡ, ತಂಡವಾಗಿ ಕೆಲಸ ನಿರ್ವಹಿಸಬೇಕು. ಆಗ ಹೊಸ ಹೊಸ ಆಲೋಚನೆ, ತಂತ್ರ ಗಳ ಮೂಲಕ ಯಶಸ್ಸು ಸಾಧಿಸಬಹುದು. ನಾಯಕರಾದವರೂ ಒಂದು ಜವಾಬ್ದಾರಿಯುತ ತಂಡವನ್ನು ಕಟ್ಟಬೇಕಾಗುತ್ತದೆ.

Advertisement

ಆತ್ಮ ವಿಮರ್ಶೆ ಅಗತ್ಯ
ನಾಯಕರಾಗುವವರಿಗೂ ಇರಬೇಕಾದ ಬಹುಮುಖ್ಯವಾದ ಗುಣವೆಂದರೆ ಆತ್ಮವಿಮರ್ಶೆ. ಸೋಲು- ಗೆಲುವುಗಳ ಬಗ್ಗೆ ನೈಜವಾದ ವಿಮರ್ಶೆ ಪ್ರತಿಯೊಬ್ಬರಿಗೂ ಅಗತ್ಯ. ಇದರಿಂದ ಮುಂದಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸೋಲು, ಗೆಲುವಿನಿಂದ ಪಾಠ ಕಲಿಯಬಹುದು.

ಉತ್ತಮ ಕೇಳುಗರಾಗಿ
ಯಾರು ಉತ್ತಮ ಕೇಳುಗನಾಗುತ್ತಾನೋ, ಆತ ಉದಾತ್ತ ಚಿಂತನೆ ಮಾಡುತ್ತಾನೆ ಎಂಬಂತೆ ನಾಯಕರು ಉತ್ತಮ ಕೇಳುಗನಾಗಿರಬೇಕು. ಕೆಲಸದ ಬಗ್ಗೆ ಯಾರೋ ನೀಡುವ ಸಲಹೆ, ಸಹಕಾರ ಹಾಗೂ ಚಿಂತನೆಗಳನ್ನೂ ನಾವು ವಿನಮ್ರವಾಗಿ ಸ್ವೀಕರಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಇದು ಕೂಡ ಯಶಸ್ವಿಗೆ ಕಾರಣವಾಗುತ್ತದೆ.

ಇಷ್ಟೇ ಅಲ್ಲದ ಒಬ್ಬ ಉತ್ತಮ ನಾಯಕನಾಗಬೇಕಾದರೆ ಅವನಲ್ಲಿ ಸಮಯ ಪಾಲನೆಯಲ್ಲಿ ಶಿಸ್ತು, ಪ್ರಮಾಣಿ ಕತೆ, ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವ ಗುಣ, ನಿರ್ದಿಷ್ಟ ಗುರಿ, ಇನ್ನೊಬ್ಬರಿಗೂ ಪ್ರೋತ್ಸಾಹ ನೀಡುವ ಗುಣಗಳನ್ನು ಹೊಂದಿರಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ಯಶಸ್ಸಿ ನಾಯಕರಾಗಲು ಸಾಧ್ಯವಿದೆ.

ಮುಕ್ತ ಕಲಿಕೆಯಿರಲಿ
‘ಜ್ಞಾನ ಎಂಬ ಬೆಳಕು ಯಾವ ಮಾರ್ಗದಿಂದ ಬಂದರೂ, ಅದನ್ನು ಸ್ವೀಕರಿಸಿ’ ಎಂದು ಮಹಾತ್ಮಾ ಗಾಂಧಿ ಹೇಳುತ್ತಾರೆ. ಅದಕ್ಕಾಗಿ ನಮ್ಮಲ್ಲಿ ಮುಕ್ತತೆ ಅವಶ್ಯ. ಅಂತೆಯೇ, ನಾಯಕರಾದವರೂ ಕಲಿಕೆ ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ಮಕ್ತವಾದ ನೀತಿಯನ್ನು ಅನುಸರಿಸಬೇಕು. ತಂಡದ ಸದಸ್ಯರ ಅಭಿಪ್ರಾಯಗಳನ್ನೂ ಪರಿಗಣಿಸಿ, ಅದರಲ್ಲಿ ಒಳ್ಳೆಯ ಅಂಶಗಳಿದ್ದರೆ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. 

ವಿನಯತೆ
ವಿನಯತೆ ಮನುಷ್ಯನ ನಡವಳಿಕೆ ಹಾಗೂ ಮನೋಭಾವನೆಯನ್ನು ಬಿಚ್ಚಿಡುತ್ತದೆ. ವಿನಯ ಇದ್ದಲ್ಲಿ ಅವಕಾಶಗಳೇ ಬಾಗಿಲು ತೆರೆಯುತ್ತವೆ. ನಾಯಕತ್ವ
ರೂಢಿಸಿಕೊಳ್ಳಬೇಕಾದರೆ ನಮ್ಮಲ್ಲಿ ವಿನಯತೆ ಬಹಳ ಮುಖ್ಯ. ಒಳ್ಳೆಯ ಮಾತು, ನಡತೆ ಕೂಡ ನಾಯಕರಿಗೆ ಇರಬೇಕಾದ ಅಂಶಗಳಲ್ಲಿ ಒಂದು.  

ಶಿವ ಸ್ಥಾವರಮಠ

Advertisement

Udayavani is now on Telegram. Click here to join our channel and stay updated with the latest news.

Next