Advertisement
ಕೋವಿಡ್ ಲಾಕ್ ಡೌನ್ ನಲ್ಲಿ ಭವಿಷ್ಯದ ಕನಸು ಕಾಣುತ್ತಿದ್ದ ಎಷ್ಟೋ ಮಂದಿಯ ಕನಸುಗಳು ನುಚ್ಚುನೂರಾಗಿದೆ. ಆಗಷ್ಟೇ ಶಿಕ್ಷಣ ಮುಗಿಸಿ ಕೆಲಸಕ್ಕಾಗಿ ಕಾಯುತ್ತಾ ಕೂತ ವಿದ್ಯಾರ್ಥಿಗಳ ಪಾಡು ಒಂದೆಡೆಯಾದರೆ, ಸಂಸಾರ ನಿಭಾಯಿಸಲು ಸಾಕಾಗುತ್ತಿದ್ದ ದುಡಿಮೆಯೂ ಲಾಕ್ ಡೌನ್ ನಿಂದ ಕಳೆದುಕೊಂಡ ಎಷ್ಟೋ ಜನ ದಿಕ್ಕು ದೆಸೆ ಕಾಣದೆ ನಾಳೆಯ ಭರವಸೆಯಲ್ಲಿ ಇದ್ದಾರೆ.
Related Articles
Advertisement
ಚೆನ್ನಾಗಿಯೇ ಸಾಗುತ್ತಿದ್ದ ಬದುಕಿನಲ್ಲಿ ಅನಿರೀಕ್ಷಿತ ತಿರುವೊಂದು ಬಂದು ಬಿಡುತ್ತದೆ. ರೇವನ್ ಕೆಲಸ ಮಾಡುತ್ತಿದ್ದ ಕಂಪೆನಿ ಮುಚ್ಚಿ ಹೋಗುತ್ತದೆ. ಆ ಬಳಿಕದ ದಿನಗಳು ಕಷ್ಟಕರವಾದ ಪರಿಸ್ಥಿತಿಯಲ್ಲಿ ರೇವನ್ ಸಣ್ಣ ಹೊಟೇಲ್ ನಲ್ಲಿ ಕೆಲಸ ಮಾಡುತ್ತಾರೆ. ದಿನ ಕಳೆದಂತೆ ಗಳಿಸಿದ ಹಣವನ್ನು ಉಳಿಸಿ ಒಂದು ಜಾಗವನ್ನು ಬಾಡಿಗೆ ರೂಪದಲ್ಲಿ ಪಡೆದು ಅಲ್ಲಿ ಒಂದು ಪುಟ್ಟ ಗೂಡಂಗಡಿ ತೆರೆದು ತಿಂಡಿ, ಚಹಾ ಸಿಗುವ ಹೋಟೆಲ್ ನ್ನಾಗಿ ಮಾಡುತ್ತಾರೆ. ತನ್ನದೇ ಸ್ವಂತ ಕನಸಿಗೆ ಬಣ್ಣ ಬಳಿಯುವ ಕೆಲಸದಲ್ಲಿ ನಿರತರಾಗುತ್ತಾರೆ. ಆದರೆ ಬಹುಬೇಗ ಕನಸಿನ ಬಣ್ಣ ಮಾಸಿ ಹೋಗುತ್ತದೆ.
ಕೋವಿಡ್ ಪ್ರಕರಣಗಳು ಹೆಚ್ಚಾದ ಕಾರಣ ಲಾಕ್ ಡೌನ್ ಘೋಷಣೆಯಾಗುತ್ತದೆ. ಲಾಕ್ ಡೌನ್ ನಿಧಾನವಾಗಿ ತೆರೆವಾದಾಗ, ಕೆಲ ಕಂಪೆನಿ, ಬ್ಯಾಂಕ್ ಗಳ ಉದ್ಯೋಗಿಗಳು ಆರೋಗ್ಯ ರಕ್ಷಣೆ ಕಾರಣದಿಂದ ಹತ್ತಿರದ ಚಹಾದಂಗಡಿಗಳಿಗೆ ಬಾರದೇ ಇರುವುದನ್ನು ರೇವನ್ ಗಮನಿಸುತ್ತಾರೆ. ಈ ಕಾರಣದಿಂದ ರೇವನ್ ಅವರಿಗೆ ತನ್ನ ಚಹಾದ ರುಚಿಯನ್ನು ತೋರಿಸಲು ಆ ರಸ್ತೆಯ ಬಳಿ ಹೋಗಿ, ಕಂಪೆನಿಯ ಉದ್ಯೋಗಿಗಳಿಗೆ ಉಚಿತವಾಗಿ ಚಹಾವನ್ನು ನೀಡಲು ಶುರು ಮಾಡುತ್ತಾರೆ. ಥರ್ಮಸ್, ಸುರಕ್ಷಿತ ಕೈಗವಚ, ಸ್ಯಾನಿಟೈಸರ್ ನ್ನು ಬಳಸಿಕೊಂಡು, ಪ್ರತಿದಿನದಂತೆ 2 ತಿಂಗಳು ನಿರಂತರವಾಗಿ ಚಹಾವನ್ನು ನೀಡಿ ಆ ಯೋಜನೆಯನ್ನು ಅಲ್ಲಿಗೆ ನಿಲ್ಲಿಸುತ್ತಾರೆ.
ಮುಂದೆ ರೇವನ್ ಬದುಕಿನ ಹೊಸ ಅಧ್ಯಾಯ ಆರಂಭವಾಗುತ್ತದೆ. ದಿನಕಳೆದಂತೆ ರೇವನ್ ಅವರಿಗೆ ನಾನಾ ಕಂಪೆನಿಗಳಿಂದ ಉದ್ಯೋಗಿಗಳಿಗೆ ಚಹಾವನ್ನು ನೀಡಲು ಕರೆ ಬರುತ್ತದೆ. ಸಣ್ಣ ಕಪ್ ಚಹಾಕ್ಕೆ 6 ರೂಪಾಯಿ, ದೊಡ್ಡ ಕಪ್ ಚಹಾಕ್ಕೆ 10 ರಂತೆ ದರವನ್ನು ನಿಗದಿ ಮಾಡುತ್ತಾರೆ. ಪ್ರತಿದಿನ 700 ಕಪ್ ಚಹಾವನ್ನು ಮಾರುತ್ತಾರೆ. ಆರ್ಥಿಕ ಸ್ಥಿತಿ ಸುಧಾರಣೆಯಾದ ಬಳಿಕ ತಮ್ಮ ಚಹಾ ಸರ್ವಿಸ್ ಗೆ ‘ಅಭಿಮನ್ಯು’ಯೆಂದು ಹೆಸರಿಡುತ್ತಾರೆ.