Advertisement

ಅಮ್ಮನ ಹೆಜ್ಜೆಯಲ್ಲೇ ಯಶ ಕಂಡ ಮಗಳು!

09:16 AM May 08, 2022 | Team Udayavani |

“ಮದ್ವೆ ಆಯ್ತಲ್ಲ, ಇನ್ನೇನು. ಮಗು ಮಾಡಿಕೊಂಡು ಅರಾಮಾಗಿ ಇದ್ಬಿಟ್ಟು”, “”ಮಗು ಆಯ್ತಲ್ಲ, ಕೆಲಸ ಎಲ್ಲ ಬಿಟ್ಬಿಟ್ಟು ಅರಾಮವಾಗಿ ಮನೆಯಲ್ಲಿರು”, “”ಅಯ್ಯೋ ವಯಸ್ಸಿಗೆ ಬಂದಿರೋ ಮಗಳಿದ್ದರೂ ಅವಳದ್ದೇನ್ರೀ, ಇನ್ನೂ ಓದು, ವೇದಿಕೆ ಎಂದ್ಕೊಂಡು” ಇದೆಲ್ಲ ಪ್ರತಿ ಹೆಣ್ಣು ತನ್ನ ಜೀವನದಲ್ಲಿ ಕೇಳಿರುವ ಮಾತು. ಮದುವೆಯಾಗಿ, ಮಗುವಾದರೆ ಆ ಮಗುವಲ್ಲೇ ಬದುಕು ಕಂಡು, ತಮ್ಮ ಬದುಕನ್ನು ಮೂಲೆಗಟ್ಟಿ ಬಿಡಬೇಕೆಂಬುದು ಅನೇಕರ ಮನದಾಳ. ಆದರೆ ಎಲ್ಲ ಅಡೆತಡೆಗಳನ್ನು ದಾಟಿ ಇಂದು ನಮ್ಮ ನಿಮ್ಮೊಂದಿಗೆ ಹೆಮ್ಮೆಯಿಂದ ಸಾಧನೆ ಮಾಡಿ ನಿಂತ ತಾಯಂದಿರು ಅನೇಕರಿದ್ದಾರೆ. ಅಂಥವರಲ್ಲಿ ಕೆಲ ಅಮ್ಮ-ಮಗಳ ಜೋಡಿಯ ಪರಿಚಯ ಇಲ್ಲಿದೆ.

Advertisement

ಲೀನಾ, ಭಕ್ತಿ ಶರ್ಮಾ

ಬದುಕನ್ನೇ ಈಜಿ ಸಾಧನೆಯ ದಡ ಹತ್ತಿರುವ ಜೋಡಿ ಈ ಲೀನಾ ಮತ್ತು ಭಕ್ತಿ ಶರ್ಮಾ ಅವರದ್ದು. ಇಂಗ್ಲಿಷ್‌ ಚಾನೆಲ್‌ನ್ನು ಒಟ್ಟಿಗೆ ಈಜಿದ ಮೊದಲ ತಾಯಿ-ಮಗಳು ಎನ್ನುವ ಹೆಗ್ಗಳಿಕೆಯೂ ಇವರ ಪಾಲಿನದ್ದೇ. ಉದಯ್‌ಪುರದವರಾದ ಲೀನಾ ಚಿಕ್ಕ ವಯಸ್ಸಿನಿಂದ ಬೇರೆ ಬೇರೆ ಈಜುಗಾರರನ್ನು ನೋಡಿ, ಆಸೆಯಿಂದ ಈಜು ಕಲಿತರಂತೆ. ಮಗಳು ಭಕ್ತಿ, ಚಿಕ್ಕ ವಯಸ್ಸಿನಿಂದಲೇ ಅಮ್ಮನಂತೆಯೇ ನೀರಲ್ಲಿ ಈಜಲಾರಂಭಿಸಿದ್ದರು. ಪ್ರತೀ ಹೆಜ್ಜೆಯಲ್ಲೂ ಅಮ್ಮನನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು, ಈಜಿನ ತರಬೇತಿ ಪಡೆದರು. ಮಗಳು ಒಂದು ಹಂತಕ್ಕೆ ಬಂದ ಅನಂತರ ಇವರಿಬ್ಬರೂ ಸೇರಿಕೊಂಡು ಹಲವು ಸಾಹಸಗಳಿಗೆ ಕೈ ಹಾಕಿದ್ದಾರೆ. ಹಾಗೆಯೇ ಆ ಎಲ್ಲ ಸಾಹಸದಲ್ಲೂ ಜಯಭೇರಿ ಬಾರಿಸಿಕೊಂಡು ನಗುಮೊಗದೊಂದಿಗೆ ಮನೆಗೆ ಮರಳಿದ್ದಾರೆ ಕೂಡ. ಅಮ್ಮನ ತರಬೇತಿಯಲ್ಲೇ ಬೆಳೆದ ಮಗಳು ಭಕ್ತಿ 2015ರಲ್ಲಿ ಅಂಟಾರ್ಟಿಕ ಸಾಗರದಲ್ಲಿ 1 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ 52 ನಿಮಿಷಗಳಲ್ಲಿ 1.4 ಮೈಲು ಈಜಿ ಹೊಸದೊಂದು ದಾಖಲೆ ಬರೆದಿದ್ದಾರೆ ಕೂಡ. ಬ್ರಿಟನ್‌ನ ಈಜುಗಾರ ಲೈನ್ನೆ ಕಾಕ್ಸ್‌ರ ದಾಖಲೆಯನ್ನೂ ಅವರು ಮುರಿದಿದ್ದಾರೆ. ಮಗಳ ಈ ಸಾಧನೆಯನ್ನು ತನ್ನ ಸಾಧನೆಯೆನ್ನುವಷ್ಟೇ ಸಂಭ್ರಮಿಸಿದ್ದಾರೆ ತಾಯಿ ಲೀನಾ.

ಜಯ ಶಿವಕುಮಾರ್‌ ಮತ್ತು ಶ್ವೇತಾ

Advertisement


ಜಯ ಶಿವಕುಮಾರ್‌ ಕುಟುಂಬ ತಕ್ಕ ಮಟ್ಟಿಗೆ ನಡೆಯುತ್ತಿದೆ ಎನ್ನುವಾಗಲೇ ಅವರ ಪತಿ ಅಸುನೀಗಿದ್ದರು. ಆಗಿನ್ನೂ 24 ವರ್ಷದವಳಾಗಿದ್ದ ಮಗಳು ಶ್ವೇತಾ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಹೋಗಲೇ ಬೇಕಾಗಿ ಬಂದಿತ್ತು. ಒಂದೆರೆಡು ವರ್ಷ ಮಾಧ್ಯಮದ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡಿದ್ದ ಶ್ವೇತಾಗೆ ತನ್ನಲ್ಲಿರುವ ಫ್ಯಾಷನ್‌ ಆಸಕ್ತಿ ಬಗ್ಗೆ ತಿಳಿವಳಿಕೆ ಮೂಡಿತ್ತು. 25 ವರ್ಷಗಳಿಂದ ಟೈಲರಿಂಗ್‌ ಮಾಡಿ ಜೀವನ ಸಾಗಿಸುತ್ತಿದ್ದ ಜಯಾ ಕೂಡ ಮಗಳ ಬೆನ್ನೆಲುಬಾಗಿ ನಿಂತರು. “”ನಿನ್ನ ಆಸಕ್ತಿಯಲ್ಲದ ಕೆಲಸವನ್ನು ನೀ ಮಾಡಬೇಡ. ಆಸಕ್ತಿಯಿರುವಲ್ಲೇ ಸಾಧಿಸು” ಎಂದು ಹುರಿದುಂಬಿಸಿದರು. ಆಗ ಆರಂಭವಾಗಿದ್ದೇ ಅಮ್ಮ ಮಗಳ “”ವೈ ಸೋ ಬ್ಲೂ” ಆನ್‌ಲೈನ್‌ ಫ್ಯಾಷನ್‌ ಮಳಿಗೆ. ಮಗಳ ಆಸಕ್ತಿ, ಹಿತಾಸಕ್ತಿಯಂತೆ ಅಮ್ಮ ಬಟ್ಟೆ ಹೊಲಿದುಕೊಡಲಾರಂಭಿಸಿದರು. ಚಿಕ್ಕ ವಯಸ್ಸಿನಲ್ಲಿ ಮಗಳಿಗೆ ಅಲಂಕರಿಸಲೆಂದು ಮಾಡುತ್ತಿದ್ದ ತರಹೇವಾರು ಉಡುಗೆಯ ಜ್ಞಾನವೆಲ್ಲವೂ ಈ ಉದ್ಯಮದಲ್ಲಿ ಬಳಕೆಗೆ ಬಂದಿತ್ತು. ಮಹಾರಾಷ್ಟ್ರದ ಥಾಣೆಯಲ್ಲಿರುವ ಮನೆಯ ಒಂದು ಕೋಣೆಯಲ್ಲೇ ಆರಂಭವಾದ ಈ ಅಮ್ಮ ಮಗಳ ಫ್ಯಾಷನ್‌ ಮಳಿಗೆ ಮುಂದೆ ದೊಡ್ಡ ಮಟ್ಟಿಗೆ ಹೆಸರು ಮಾಡಿತು. ಸಾಕಷ್ಟು ಗ್ರಾಹಕರು ನಮಗೆ ಇದೇ ರೀತಿಯಲ್ಲಿ ಬಟ್ಟೆ ಬೇಕೆಂದು ಹೇಳಿ ಮಾಡಿಸಿಕೊಳ್ಳುವವರೂ ಇದ್ದಾರೆ.

ಮಾಲಾ ದತ್ತಾ ಮತ್ತು ಶ್ರೇಯಾ ಮಿಶ್ರಾ


ರಕ್ಷಣ ಸಚಿವಾಲಯದ ಕೆಲಸದಲ್ಲಿದ್ದ ಮಾಲಾ ದತ್ತಾ ತಮ್ಮ 56ನೇ ವಯಸ್ಸಿನಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ ಪದವಿ ಪಡೆದರು. ವಿಶೇಷವೆಂದರೆ ಅವರ ಜತೆಯಲ್ಲೇ ಅವರ 28 ವರ್ಷದ ಮಗಳು ಶ್ರೇಯಾ ಮಿಶ್ರಾ ಕೂಡ ಪಿಎಚ್‌.ಡಿ ಪದವಿ ತಮ್ಮದಾಗಿಸಿಕೊಂಡಿದ್ದರು. ಸ್ನಾತಕೋತ್ತರ ಪದವಿ ಮುಗಿಸಿದ ಅನಂತರ ದಶಕಗಳ ಕಾಲ ಓದಿನತ್ತ ತಲೆ ಹಾಕದ ಮಾಲಾ, 2012ರಲ್ಲಿ ತಮ್ಮ ಕಿರಿ ಮಗಳು ದ್ವಿತೀಯ ಪಿ.ಯು. ವಿದ್ಯಾಭ್ಯಾಸದಲ್ಲಿದ್ದಾಗ ಮಗಳಿಗಾಗಿ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದರು. ಅದೇ ವೇಳೆ ಅವರ ಬಾಲ್ಯದ ಆಸೆ ನೆರವೇರಿಸಿಕೊಳ್ಳಲೆಂದು ಪಿಎಚ್‌.ಡಿಗೆ ನೋಂದಣಿ ಮಾಡಿಕೊಂಡಿದ್ದರು. ಅದಾದ ಮೇಲೆ ಸಚಿವಾಲಯದಿಂದ ಅನುಮತಿ ಪಡೆದು, ಓದಿನತ್ತ ಹೆಚ್ಚಿನ ಗಮನ ಹರಿಸಿದ್ದರು. ವಿಶ್ವ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರೇಯಾ ಕೂಡ ದಿಲ್ಲಿ ವಿಶ್ವವಿದ್ಯಾನಿಲಯದಲ್ಲೇ ಪಿಎಚ್‌.ಡಿಗೆ ನೋಂದಣಿ ಮಾಡಿಕೊಂಡಿದ್ದರು. ತಾವಿಬ್ಬರೂ ಒಂದೇ ವರ್ಷದಲ್ಲಿ ಪಿಎಚ್‌.ಡಿ ಪಡೆಯಲು ಅವಕಾಶವಿದೆ ಎಂದು ಗೊತ್ತಾದಾಕ್ಷಣ ತಾಯಿ-ಮಗಳಿಬ್ಬರೂ ಅದರತ್ತ ಹೆಚ್ಚಿನ ಗಮನ ಕೊಟ್ಟು ಕೆಲಸ ಮಾಡಿದ್ದಾರೆ. 2019ರಲ್ಲಿ ಈ ಜೋಡಿಗೆ ವಿವಿಯು ಪಿಎಚ್‌.ಡಿ ಪ್ರದಾನಿಸಿ, ಒಟ್ಟಿಗೆ ಪಿಎಚ್‌.ಡಿ ಪಡೆದ ಮೊದಲ ಅಮ್ಮ-ಮಗಳು ಎಂದು ಘೋಷಿಸಿದೆ.

ಆಡ್ರೆ ಮಾಬೆನ್‌ ಮತ್ತು ಏಮಿ ಮೆಹ್ತಾ


ಮೈಸೂರು ಮೂಲದ ಆಡ್ರೆ ಮಾಬೆನ್‌ ತಮ್ಮ ಮಗಳೊಂದಿಗೆ ಮಾಡಿದ ವಿಶ್ವ ದಾಖಲೆಯನ್ನು ಯಾರೂ ಮರೆಯುವಂತಿಲ್ಲ. ಭಾರತದ ಮೊದಲ ಮೈಕ್ರೋ ಲೈಟ್‌ ಏರ್‌ಕ್ರಾಫ್ಟ್ ಫ್ಲೆçಯಿಂಗ್‌ ಇನ್‌ಸ್ಟ್ರಕ್ಟರ್‌ ಎನ್ನುವ ಹೆಸರು ಪಡೆದಿರುವ ಆಡ್ರೆ ಮಾಬೆನ್‌ 2017ರಲ್ಲಿ ತಾವು 41 ವರ್ಷದವರಾಗಿದ್ದಾಗ ತಮ್ಮ 19 ವರ್ಷದ ಮಗಳು ಏಮಿ ಮೆಹ್ತಾರೊಂದಿಗೆ ಸಣ್ಣದೊಂದು ಹೆಲಿಕಾಪ್ಟರ್‌ನಲ್ಲಿ 80 ದಿನಗಳ ಕಾಲ ಹಾರಾಟ ನಡೆಸಿ, 21 ರಾಷ್ಟ್ರಗಳನ್ನು ಸುತ್ತಿ ಬಂದಿದ್ದಾರೆ. ವಿಶೇಷವೆಂದರೆ ವಿಮಾನ ಹಾರಾಟದಲ್ಲೇ ವಿಶೇಷ ತರಬೇತಿಗಳನ್ನು ಪಡೆದಿರುವ ಆಡ್ರೆ ಒಮ್ಮೆ ಬೆಂಗಳೂರಿನಿಂದ ನಾಗಪುರಕ್ಕೆ ಹಾಗೂ ಅಲ್ಲಿಂದ ಮತ್ತೆ ಬೆಂಗಳೂರಿಗೆ ಮರಳುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆ ಸ್ಪರ್ಧೆಯಲ್ಲಿ 5 ದಿನಗಳಲ್ಲಿ ಬರೋಬ್ಬರಿ 2,400 ಕಿ.ಮೀ. ದೂರವನ್ನು ಏಕಾಂಗಿಯಾಗಿ ಕ್ರಮಿಸಿದ ಏಕೈಕ ಮಹಿಳಾ ಪೈಲಟ್‌ ಅವರಾಗಿದ್ದರು. ಆಡ್ರೆ ಚಿಕ್ಕ ವಯಸ್ಸಿನಿಂದಲೂ ಮಗಳು ಏಮಿಗೆ ಹಾರಾಟದ ಪರಿಚಯ ಮಾಡಿಕೊಟ್ಟಿದ್ದಾರೆ. ಅಮ್ಮನಿಗೆ ಎಂದೆಂದಿಗೂ ಸಾಥ್‌ ಕೊಡಲು ಸಿದ್ಧವೆನ್ನುವ ಏಮಿ ವಿಶ್ವ ದಾಖಲೆ ನಿರ್ಮಾಣದಲ್ಲೂ ಅಮ್ಮನೊಂದಿಗಿದ್ದರು. ಆಡ್ರೆ ಅವರಿಗೆ ಲಿಮ್ಕಾ ಅವಾರ್ಡ್‌ ಸೇರಿ ಅನೇಕ ಪ್ರಶಸ್ತಿ ಲಭಿಸಿವೆ.

ಶಕುಂತಲಾ ಠಾಕೂರ್‌, ಸೌಮ್ಯಾ ಪಾಂಡ್ಯಾ ಠಾಕೂರ್‌


ರಸ್ತೆಯಲ್ಲಿರುವ ಜೀಬ್ರಾ ಕ್ರಾಸಿಂಗ್‌ಗೆ ಬೆಲೆ ಕೊಡುವ ಚಾಲಕರು ಎಷ್ಟಿದ್ದಾರೆ? ಅದೇ ಜೀಬ್ರಾ ಕ್ರಾಸಿಂಗ್‌ನ್ನು 3ಡಿ ವಿನ್ಯಾಸದಲ್ಲಿ ಮಾಡಿದರೆ? ಹೌದು. ಮಾಮೂಲಿ ಜೀಬ್ರಾ ಕ್ರಾಸಿಂಗ್‌ಗಿಂತ ಹೆಚ್ಚು ಪರಿಣಾಮಕಾರಿಯಾಗುವುದು 3ಡಿ ಜೀಬ್ರಾ ಕ್ರಾಸಿಂಗ್‌. ವಿದೇಶಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಈ 3ಡಿ ಜೀಬ್ರಾ ಕ್ರಾಸಿಂಗ್‌ನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು ಅಹ್ಮದಾಬಾದ್‌ನ ಅಮ್ಮ ಮಗಳಾದ ಶಕುಂತಲಾ ಠಾಕೂರ್‌ ಮತ್ತು ಸೌಮ್ಯಾ ಪಾಂಡ್ಯಾ ಠಾಕೂರ್‌. ಮೂಲತಃ ಕಲೆಯ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ಸೌಮ್ಯಾ, ತಮ್ಮ ನಗರದಲ್ಲಿ ಇಂತದ್ದೊಂದು ಪ್ರಯತ್ನ ಮಾಡಿದರು. ಅದಕ್ಕೆ ಜತೆಯಾದ ಅಮ್ಮ ಶಕುಂತಲಾ, ಮಗಳೊಂದಿಗೆ ರಸ್ತೆಗಿಳಿದು, ರಸ್ತೆಯಲ್ಲಿ ಬಣ್ಣ ಬಳಿಯಲಾರಂಭಿಸಿದರು. ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಯಿತೆಂದರೆ ಆ ರಸ್ತೆಯಲ್ಲಿ ಸಂಚರಿಸುವ ಚಾಲಕರು, ಈ 3ಡಿ ಜೀಬ್ರಾ ಕ್ರಾಸಿಂಗ್‌ ನೋಡಿದಾಕ್ಷಣ ತಮ್ಮ ವಾಹನದ ವೇಗವನ್ನು ಕಡಿಮೆ ಮಾಡಲಾರಂಭಿಸಿದರು. ಈ 3ಡಿ ಜೀಬ್ರಾ ಕ್ರಾಸಿಂಗ್‌ ವಿಚಾರ ದೇಶಾದ್ಯಂತ ಹರಡಿ, ಹಲವು ನಗರಗಳಲ್ಲಿ ಇದನ್ನು ಅಳವಡಿಸಿಕೊಳ್ಳಲಾಯಿತು ಕೂಡ.

Advertisement

Udayavani is now on Telegram. Click here to join our channel and stay updated with the latest news.

Next