Advertisement

ಸಾಧಿಸುವ ಛಲವೇ ಯಶಸ್ಸಿನ ಗುಟ್ಟು

01:00 AM Feb 18, 2019 | Team Udayavani |

ಉಡುಪಿ: ಆಕೆ ನಕ್ಕರೆ ಹಾಲು ಬೆಳದಿಂಗಳು. ಮಾತು ಅರಳು ಹುರಿದಂತೆ. ಈಕೆ ಮಿಸೆಸ್‌ ಸೌತ್‌ ಇಂಡಿಯಾ 2019, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉಡುಪಿ ಮೂಲದ ಡಾ| ಪದ್ಮಾ ಗಡಿಯಾರ್‌. ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆ ತೋರಿದ ಇವರು ಆ.1ರಿಂದ 7ರ ವರೆಗೆ ಮೆಕ್ಸಿಕೋದಲ್ಲಿ ನಡೆಯಲಿರುವ “ಮಿಸೆಸ್‌ ಯೂನಿವರ್ಸ್‌’ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ. 

Advertisement

ಗುರುವಾರ ಉಡುಪಿಗೆ ಆಗಮಿಸಿದ ಇವರೊಂದಿಗೆ “ಉದಯವಾಣಿ’ ನಡೆಸಿದ ಕಿರು ಸಂದರ್ಶನವಿದು.

– ಮಾಡೆಲಿಂಗ್‌ ಕ್ಷೇತ್ರಕ್ಕೆ ಪಾದಾರ್ಪಣೆ ಹೇಗಾಯಿತು?
ಚಿಕ್ಕಂದಿನಲ್ಲೇ ಆಸಕ್ತಿ ಇತ್ತು. ಮದುವೆಯ ಅನಂತರ ಇದಕ್ಕೆ ಸಹಕಾರ ಸಿಕ್ಕಿತು. ಬರೀ ಆಕಾಶಕ್ಕೆ ಲಗ್ಗೆಯಿಡುವ ಕನಸು ಕಾಣಬಾರದು. ಅದಕ್ಕಿಂತ ದೂರವಿರುವ ನಕ್ಷತ್ರವನ್ನು ನಮ್ಮದಾಗಿಸುವ ಕನಸು ಕಾಣಬೇಕು. ಇದೇ ನನ್ನ ಯಶಸ್ಸಿಗೆ ಕಾರಣ.

– ಮಾಡೆಲಿಂಗ್‌ ಕ್ಷೇತ್ರದಲ್ಲಿ ಮೈಬಣ್ಣವೇ ಮುಖ್ಯ ಎಂದು ನಿಮಗೆ ಅನಿಸುತ್ತಾ?
ಖಂಡಿತ ಇಲ್ಲ. ಸೌಂದರ್ಯವನ್ನು ಕೇವಲ ಮೈಬಣ್ಣದಿಂದ ಅಳೆಯಲು ಸಾಧ್ಯವಿಲ್ಲ. ಕಪ್ಪು ಬಣ್ಣದ ರೂಪದರ್ಶಿಯರು ಕೂಡ ಮಾಡೆಲಿಂಗ್‌ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.

– ಈ ಕ್ಷೇತ್ರದಲ್ಲಿ ನೀವು ತುಂಬಾ ಒತ್ತಡ ಎದುರಿಸಿದ್ದೀರಾ?
 ಅತಿ ಒತ್ತಡ ನಾನು ಎದುರಿಸಿಲ್ಲ. ಈ ಕ್ಷೇತ್ರದಲ್ಲಿ ತುಂಬಾ ಸ್ಪರ್ಧೆಯಿದೆ ನಿಜ. ಮಾಡೆಲಿಂಗ್‌ನ ಆರಂಭದ ದಿನಗಳಲ್ಲಿ ನಾನೂ ಕಷ್ಟಪಟ್ಟಿದ್ದೇನೆ. ನನಗೆ ಪ್ರೋತ್ಸಾಹ ನೀಡಿದ್ದು ನನ್ನ ಪತಿ ಹಾಗೂ ಸಹೋದರಿ. 

Advertisement

– ಮಹಿಳಾ ಸಶಕ್ತೀಕರಣಕ್ಕೆ ನಿಮ್ಮ ನಡೆ ಏನು?
ಮಹಿಳೆಯರು ಮನಸ್ಸು ಮಾಡಿದರೆ ಜಗವನ್ನೇ ಗೆಲ್ಲಬಹುದು. ಮಹಿಳೆಯರು ಬಹುಮುಖ ಪ್ರತಿಭಾನ್ವಿತರು. ಅವರಿಗೆ ಹಲವಾರು ಕೆಲಸಗಳನ್ನು ಒಂದೇ ಸಲ ಮಾಡುವ ಸಾಮರ್ಥ್ಯ ಇದೆ. ಕುಟುಂಬ ನೋಡುವುದರೊಂದಿಗೆ ಸಂಪಾದನೆಯನ್ನೂ ಮಾಡಬಲ್ಲರು.  

– ನಿಮ್ಮ ಸೌಂದರ್ಯದ ರಹಸ್ಯವೇನು?
ಪ್ರತೀದಿನ ಒಂದರಿಂದ ಒಂದೂವರೆ ಗಂಟೆಗಳ ಕಾಲ ವ್ಯಾಯಾಮ ಮಾಡುತ್ತೇನೆ. ಅಲ್ಲದೆ ಜಿಮ್‌, ಆಹಾರ ಪಥ್ಯ ಕೂಡ ಮಾಡುತ್ತಿದ್ದೇನೆ.

– ಮಹಿಳೆಯರು ಸಮಯ ಹೊಂದಿಸು ವುದು ಹೇಗೆ?
ಮಹಿಳೆಯರಿಗೆ ಸಮಯ, ಶಕ್ತಿ, ಶಿಸ್ತು, ಧೈರ್ಯ, ದೃಢ ನಿರ್ಧಾರ ಅತೀ ಅಗತ್ಯ. ಸಾಧನೆ ಮಾಡುವ ಛಲ ಮನಸ್ಸಿನಲ್ಲಿ ಹೊಂದಬೇಕು. ಇಂತಹ ಮಹಿಳೆಯರಿಗೆ ಪ್ರೋತ್ಸಾಹವೂ ಬೇಕು. 

– ಪ್ರೋತ್ಸಾಹವೆಂದರೆ ಯಾವ ರೀತಿಯದ್ದು?
ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಶ್ರಮಪಟ್ಟು ದುಡಿಯುತ್ತಿದ್ದಾರೆ. ಕುಟುಂಬ, ಖಾಸಗಿ ಜೀವನವನ್ನು ಸರಿದೂಗಿಸಿಕೊಂಡು ಜೀವನ ಸಾಗಿಸುತ್ತಾರೆ. ಇವರಿಗೆ ಮನೆಯವರ, ಗಂಡನ ಪ್ರೋತ್ಸಾಹ ಸಿಗಬೇಕು. ಬಹುತೇಕರು ಇಂತಹ ಸ್ಪರ್ಧೆಗಳಿಗೆ ಹೋಗಲು ಹಿಂಜರಿಯುತ್ತಾರೆ. ಇಂತಹ ಕೀಳರಿಮೆ ಬಿಟ್ಟರೆ ಯಶಸ್ಸು ನಮ್ಮದಾಗುತ್ತದೆ.  

– ಸಿನೆಮಾದಲ್ಲಿ ನಟಿಸುವ ಯೋಚನೆ ಇದೆಯೇ?
ಖಂಡಿತ ಇದೆ. ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ. ಒಳ್ಳೆಯ ಕಥೆ, ನಿರ್ದೇಶಕರು, ನಟರು ಸಿಕ್ಕಿದರೆ ನಟಿಸುತ್ತೇನೆ. ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಬಾಲಿವುಡ್‌ ಮತ್ತು ಹಾಲಿವುಡ್‌ನ‌ಲ್ಲೂ ನಟಿಸಲು ಸಿದ್ಧಳಿದ್ದೇನೆ. ಪ್ರಸ್ತುತ ದಂತ ವೈದ್ಯರು ಸೇರಿದಂತೆ ವೈದ್ಯರಿಗಾಗಿ ಪುಸ್ತಕವನ್ನು ಬರೆಯುತ್ತಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next