Advertisement

ಸುಬ್ರಹ್ಮಣ್ಯ: ಗಾಳಿ ಮಳೆಗೆ ಉರುಳಿದ ಮರಗಳು

06:00 AM Jun 03, 2018 | Team Udayavani |

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ಸಂಜೆ ವೇಳೆಗೆ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆಯಾಗಿದ್ದು ಹಲವು ಕಡೆ ಮನೆಗಳ ಮೇಲೆ ಮರ ಉರುಳಿ ಬಿದ್ದಿದೆ. ಅಡಿಕೆ ಮರ, ರಬ್ಬರ್‌ ಹಾಗೂ ವಿದ್ಯುತ್‌ ಕಂಬಗಳು ಧರಾಶಾಯಿಯಾಗಿ ಅಪಾರ‌ ನಷ್ಟ ಸಂಭವಿಸಿದೆ.

Advertisement

ಸುಬ್ರಹ್ಮಣ್ಯ ಸಮೀಪದ ಯೇನೆಕಲ್ಲು ಗ್ರಾಮದ ಮಾಣಿಬೈಲು ನಿವಾಸಿ ಕೃಷ್ಣ ನಾಯ್ಕ ಅವರ ಮನೆ ಮೇಲೆ ಬೃಹತ್‌ ಗಾತ್ರದ ಮರ ಉರುಳಿಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದೆ. ಮರ ಬೀಳುವ ವೇಳೆ ಮನೆಯ ಒಳಗಡೆ ಮೂವರು ಇದ್ದರು. ಘಟನೆಯಲ್ಲಿ ಕೃಷ್ಣ ನಾಯ್ಕ ಮತ್ತು ಅವರ ಪತ್ನಿ ಜಯಂತಿ ಅವರಿಗೆ ಅಲ್ಪ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಗಾಯಾಳುಗಳನ್ನು ತತ್‌ಕ್ಷಣ ಸ್ಥಳಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಘಟನೆಯಲ್ಲಿ ಮನೆಯ ಗೋಡೆ, ಛಾವಣಿಗೆ ಅಳವಡಿಸಿದ ಪೀಠೊಪಕರಣ ಗೃಹೋಪಯೋಗಿ ವಸ್ತುಗಳಿಗೆ ಹಾನಿ ಆಗಿದೆ. ಘಟನಾ ಸ್ಥಳಕ್ಕೆ ಸುಳ್ಯ ತಹಶೀಲ್ದಾರ್‌ ಕುಂಞಮ್ಮ, ಕಂದಾಯ ನಿರೀಕ್ಷಕ ಹರೀಶ್‌, ಸುಬ್ರಹ್ಮಣ್ಯಗ್ರಾ.ಪಂ. ಪಿಡಿಒ ಯು.ಡಿ. ಶೇಖರ್‌, ಕಾರ್ಯದರ್ಶಿ ಮೋನಪ್ಪ ಡಿ., ಗ್ರಾ.ಪಂ. ಸದಸ್ಯರಾದ ರಾಜೇಶ್‌ ಎನ್‌.ಎಸ್‌., ಹರಿಣಿ ಭೇಟಿ ನೀಡಿ ಪರಿಶೀಲಿಸಿದರು. ಸುಬ್ರಹ್ಮಣ್ಯಪಿಡಿಒ ಅವರು ತಾತ್ಕಾಲಿಕ ಪರಿಹಾರ ವಾಗಿ ಸ್ಥಳದಲ್ಲೇ 5,000 ರೂ. ಧನ ಸಹಾಯ ನೀಡಿದರು. ಮನೆ ಸಂಪೂರ್ಣ ಹಾನಿಯಾಗಿರುವುದರಿಂದ ಮನೆ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಅಧಿಕಾರಿಗಳು ಕುಟುಂಬಕ್ಕೆ ನೀಡಿದರು.

ಕಲ್ಮಡ್ಕ: ಮನೆ ಮೇಲೆ ಉರುಳಿದ ಮರ
ಕಲ್ಮಡ್ಕ ಗ್ರಾಮದ ಕುಳೈತ್ತೋಡಿಯಲ್ಲಿ ರಮೇಶ ಅವರ ಮನೆ ಮೇಲೆ ಆಲದ ಮರ ಉರುಳಿ ಬಿದ್ದು ಭಾರೀ ನಷ್ಟ ಸಂಭವಿಸಿದೆ. ಘಟನೆ ವೇಳೆ ಮನೆಯೊಳಕ್ಕೆ ಪತ್ನಿ ಮೋಹಿನಿ ಮತ್ತು ಮಕ್ಕಳಿದ್ದರು. ಮರ ಬೀಳುವ ಸುಳಿವು ಅರಿತ ರಮೇಶ ತತ್‌ಕ್ಷಣ ಪತ್ನಿ ಮತ್ತು ಮಕ್ಕಳನ್ನು ಹೊರಕ್ಕೆ ಎಳೆದೊಯ್ದಿದ್ದು ಅಂಗಳಕ್ಕೆ ತಲುಪುತ್ತಿದ್ದಂತೆ ಮರ ಮನೆ ಮೇಲೆ ಬಿದ್ದಿದೆ.

ಯೇನೆಕಲ್ಲು  ಗ್ರಾಮದ ನಿವಾಸಿ ಯತೀಶ್‌ ಕಲ್ಲಾಜೆ ಅವರ ಮನೆ ಸಮೀಪದ ಕೊಟ್ಟಿಗೆ ಮೇಲೆ ತೆಂಗಿನ ಮರ ಉರುಳಿ ಬಿದ್ದರೆ ಸುಬ್ರಹ್ಮಣ್ಯ ದೇಗುಲದ ತ್ಯಾಜ್ಯ ಘಟಕಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಶ್ರೀ ಸುಬ್ರಹ್ಮಣ್ಯ ದೇಗುಲದ ತೋಟದ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ.

Advertisement

ಹರಿಹರ ಪಳ್ಳತ್ತಡ್ಕ ಗ್ರಾಮದ ಶಾಂತಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮನೆಯ ಗೋಡೆ ಹಾಗೂ ಛಾವಣಿಗೆ ಹಾನಿಯಾಗಿದೆ. ಪಕ್ಕದ ಗ್ರಾಮದ ಕಿರಿಭಾಗ ಬಳಿ ಸೇತುವೆಗೆ ಅಡ್ಡಲಾಗಿ ದೊಡ್ಡ ಗಾತ್ರದಮರ ಉರುಳಿಬಿದ್ದು ಸೇತುವೆಗೆ ಭಾಗಶಃ ಹಾನಿಯಾಗಿದೆ. ಈ ಭಾಗದ ಅನೇಕ ಮಂದಿ ಕೃಷಿಕರ ತೋಟಗಳಲ್ಲಿ ಅಡಿಕೆ ಮರಗಳು ನೆಲಕಚ್ಚಿದ್ದು ಅಪಾರ ಹಾನಿ ಸಂಭವಿಸಿದೆ. ರಬ್ಬರ್‌ ಗಿಡಗಳು ನೆಲಸಮಗೊಂಡಿವೆ.ಹಲವು ಕಡೆ ಮರ ಬಿದ್ದು ವಿದ್ಯುತ್‌ ತಂತಿ ತುಂಡಾಗಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next