ಸುಬ್ರಹ್ಮಣ್ಯ : ಬೇಸಗೆ ಪ್ರಖರಗೊಳ್ಳುತ್ತಿದ್ದಂತೆ ನೀರಿನ ಹಾಹಾಕಾರ ಕೇಳಿ ಬರಲಾರಂಭಿಸಿದೆ. ಹತ್ತು ವರ್ಷಗಳಿಂದ ಜಲಸಮೃದ್ಧಿಯಿಂದ ಕೂಡಿದ್ದ ಯೇನೆಕಲ್ಲಿನ ಬಚ್ಚನಾಯಕ ದೈವಸ್ಥಾನ ಸಮೀಪದ ಅತಿಶಯ ಕ್ಷೇತ್ರ ಶ್ರೀ ಕಾಪುಕಯ ಕಿಂಡಿ ಅಣೆಕಟ್ಟಲ್ಲಿ ಈ ಬಾರಿ ನೀರಿನ ಕೊರತೆ ಬೇಗನೆ ಕಂಡುಬಂದಿದೆ.
10 ವರ್ಷಗಳ ಹಿಂದೆ ಆರಂಭಗೊಂಡ ಜಲ ಕ್ರಾಂತಿಯ ಪರಿಣಾಮ ಈ ಗ್ರಾಮದಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಬಂದಿರಲಿಲ್ಲ. ಕಾರಣ ಇಲ್ಲಿ ಹರಿಯುವ ನದಿಗೆ ಸಣ್ಣ ನೀರಾವರಿ ಇಲಾಖೆ ಹತ್ತು ವರ್ಷಗಳ ಹಿಂದೆ ಕಾಪುಕಯ ಎನ್ನುವಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿತ್ತು. ಅನಂತರದ ದಿನಗಳಲ್ಲಿ ಪ್ರತಿ ವರ್ಷ ಬೇಸಗೆಯಲ್ಲಿ ಹಲಗೆ ಜೋಡಿಸಿ ನೀರು ಸಂಗ್ರಹಿಸುವ ಕೆಲಸವನ್ನು ಪರಿಸರದ ಸ್ಥಳೀಯರು ನಡೆಸುತ್ತಿದ್ದರು. ಪರಿಣಾಮ ಸಮೃದ್ಧವಾಗಿ ನೀರು ಸಂಗ್ರಹಗೊಂಡು ಬೇಸಗೆಯಲ್ಲಿ ಕುಡಿಯಲು, ಕೃಷಿಗೆ ಬಳಕೆಯಾಗುತ್ತಿತ್ತು.
ಪ್ರತಿ ವರ್ಷ ಅಣೆಕಟ್ಟ ನಿರ್ಮಿಸಿ ನೀರು ಸಂಗ್ರಹಿಸಿಡುವ ಯತ್ನದಲ್ಲಿ ಹಲಗೆ ಜೋಡಣೆ, ಮಣ್ಣು ತುಂಬಿಸುವುದು ಮತ್ತಿತರ ಕೆಲಸ ಕಾರ್ಯಗಳಲ್ಲಿ ಪೂಜಾರಿಮನೆ, ಬಾನಡ್ಕ, ನೆಕ್ರಾಜೆ ಪರಿಸರದ ಕೃಷಿಕರು ತೊಡಗಿಸಿಕೊಳ್ಳುತ್ತಿದ್ದಾರೆ. ಬೇಸಗೆ ಕಾಲದಲ್ಲಿ ಯಾವುದೇ ನೀರಿನ ಸಮಸ್ಯೆ ಇಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಣೆಕಟ್ಟ ನಿರ್ಮಿಸಿದ ಬಳಿಕ ಸುತ್ತಮುತ್ತಲಿನಲ್ಲಿ ಅಂತರ್ಜಲ ಏರಿಕೆ ಕಂಡಿದೆ. ಇದು ಬೇಸಗೆಯಲ್ಲಿ ಕುಡಿಯಲು ಮತ್ತು ಕೃಷಿಗೆ ಬೇಕಾಗುವ ನೀರನ್ನು ಪೂರೈಸುತ್ತದೆ.
ಸ್ಥಳೀಯರಿಂದ ಹಲಗೆ ಜೋಡಣೆ
ಡಿಸೆಂಬರ್ ಮತ್ತು ಜನವರಿ ಆರಂಭದ ದಿನಗಳಲ್ಲಿ ನೀರಿನ ಹರಿವು ಗಮನಿಸಿ ಇಲ್ಲಿಯ ಅಣೆಕಟ್ಟೆಗೆ ಹಲಗೆ ಜೋಡಿಸುವ ಕೆಲಸ ನಡೆಯುತ್ತದೆ. ಈ ಬಾರಿ ಜನವರಿ ತಿಂಗಳಲ್ಲಿ ನಡೆದಿದೆ. ಸ್ಥಳೀಯ ಹತ್ತಿಪ್ಪತ್ತು ಫಲಾನುಭವಿಗಳು ಸೇರಿಕೊಂಡು ಈ ಬಾರಿಯೂ ಈ ಕೆಲಸ ನಡೆಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ಸಹಭಾಗಿತ್ವದಲ್ಲಿ ಹಲಗೆ ಜೋಡಿಸುವ ಕಾರ್ಯ ನಡೆಯಬೇಕಿದೆ. ಇಲ್ಲಿಯವರು ಅದನ್ನು ನಂಬಿ ಕುಳಿತುಕೊಳ್ಳುವುದಿಲ್ಲ. ಸ್ಥಳೀಯ ದೇವಸ್ಥಾನ ಮತ್ತು ದೈವಸ್ಥಾನದ ಆಡಳಿತ ಮಂಡಳಿ ಸಹಕಾರ ಪಡೆದು ತಾಪತ್ರಯದ ಮುನ್ಸೂಚನೆ ದೊರೆತ ತತ್‌ಕ್ಷಣ ಹಲಗೆ ಜೋಡಿಸುವ ಮತ್ತು ಇತರೆ ಕಾರ್ಯ ಶುರುವಿಟ್ಟುಕೊಳ್ಳುತ್ತಾರೆ.
ಬೇಸಗೆಯ ತರುವಾಯ ಮಳೆಯ ಮುನ್ಸೂಚನೆ ದೊರೆತ ಸಂದರ್ಭ ಹಲಗೆ ಯನ್ನು ಅವರೇ ತೆಗೆಯುತ್ತಾರೆ. ಕಿಂಡಿ ಅಣೆಕಟ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ನೀರನ್ನು ಹಿಡಿದಿಟ್ಟು ಬಳಸುತ್ತ ಬಂದಿರುವ ಇಲ್ಲಿಯವರ ಕಾರ್ಯ ಶ್ಲಾಘನೀಯ ಮತ್ತು ಮಾದರಿ ಆಗಿದೆ. ಆದರೆ ಈ ಬಾರಿ ನೀರಿನ ಸಂಗ್ರಹ ಕಡಿಮೆ ಇರುವುದು ಸ್ಥಳೀಯರನ್ನು ಚಿಂತೆಗೀಡು ಮಾಡಿದೆ. ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದರಿಂದ ಕೆಬ್ಬೋಡಿ, ಮಾದನಮನೆ, ನೆಕ್ರಾಜೆ, ಕಡೆಂಬಿಳ, ಪೂಜಾರಿಮನೆ, ಬಾನಡ್ಕ ಮೊದಲಾದ ಕಡೆಗಳ 300ಕ್ಕೂ ಅಧಿಕ ಮನೆಗಳಿಗೆ ಪ್ರಯೋಜನವಾಗಿದೆ. ಬೇಸ ಗೆಯ ಬಹುತೇಕ ಅವಧಿ ನೀರಿನ ಕೊರತೆ ಎನ್ನುವುದೇ ಇಲ್ಲಿ ತನಕ ಬಂದಿರಲಿಲ್ಲ. ನದಿಯ ಎರಡೂ ಬದಿಯಲ್ಲಿ ವಾಸವಿರುವ ಮನೆಗಳಿಗೆ ಸಂಪರ್ಕ ರಸ್ತೆಯಾಗಿ ಅಣೆಕಟ್ಟು ನೆರವಾಗುತ್ತಿದೆ.
ಇದೇ ಮೊದಲು
ಪ್ರತೀ ವರ್ಷ ನೀರು ಸಂಗ್ರಹದಿಂದ ಅಂತರ್ಜಲ ಮಟ್ಟ ಏರಿಕೆ ಜತೆಗೆ ಕೃಷಿ ಭೂಮಿಗೆ ನೀರು ಹಾಯಿಸಲು ಸಾಕಷ್ಟು ನೀರು ಸಿಗುತ್ತಿತ್ತು. ದೇವರ ಮೀನುಗಳಿಗೆ ಇಲ್ಲಿ ತನಕ ನೀರಿನ ಕೊರತೆ ಆಗಿರಲಿಲ್ಲ. ಈ ಬಾರಿ ಇದೆ ಮೊದಲ ಬಾರಿಗೆ ನೀರು ಸಂಗ್ರಹ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿ ಹಾಗೂ ಮತ್ಸ್ಯ ಸಂಕುಲಕ್ಕೆ ಅಪಾಯ ಉಂಟಗುವ ಭೀತಿ ಎದುರಾಗಿದೆ.
– ಹರೀಶ್ ಬಾನಡ್ಕ ದೇವಸ್ಥಾನ ಮತ್ತು
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ
ಮತ್ಸ್ಯ ಸಂಕುಲ ಅಪಾಯದಲ್ಲಿ
ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಉಳ್ಳಾಕುಲು, ಉಳ್ಳಾಲ್ತಿ, ಬಚ್ಚನಾಯಕ, ಕೋಟಿನಾಯಕ ದೈವಸ್ಥಾನ ಪಕ್ಕದಲ್ಲೆ ಇದ್ದು ಅತಿಶಯ ಕ್ಷೇತ್ರ ಶ್ರೀ ಕಾಪುಕಯದಲ್ಲಿ ಮತ್ಸ್ಯ ತೀರ್ಥ ಗುಂಡಿ ಇದೆ. ಇಲ್ಲಿ ಬೇಸಗೆ ಅವಧಿಯಲ್ಲಿ ಸಹಸ್ರಾರು ದೇವರ ಮೀನುಗಳು ಕಂಡುಬರುತ್ತವೆ. ಈ ಬಾರಿ ನೀರು ಸಂಗ್ರಹ ಕಡಿಮೆಗೊಂಡಿರುವುದರಿಂದ ಮೀನುಗಳಿಗೂ ನೀರಿನ ಕೊರತೆ ಉಂಟಾಗಿದೆ. ಮತ್ಸ್ಯ ಸಂಕುಲ ಅಪಾಯದ ಅಂಚಿನಲ್ಲಿದೆ. ಮುಂದಿನ ಕೆಲ ದಿನಗಳಲ್ಲಿ ಜಾತ್ರೆ ಮತ್ತು ನೇಮ ನಡೆಯಲಿದೆ. ನೀರಿಲ್ಲದ ಕಾರಣ ಮತ್ಸ್ಯ ಪ್ರಿಯರಿಗೆ ನಿರಾಶೆ ಕಾದಿದೆ.
ಬಾಲಕೃಷ್ಣ ಭೀಮಗುಳಿ