ಸುಬ್ರಹ್ಮಣ್ಯ: ಹೆದ್ದಾರಿ ಬದಿಯ ಬೃಹತ್ ಮರ ಬುಡ ಸಹಿತ ಉರುಳಿ ಬಿದ್ದಿದ್ದು, ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಆತ ಪಾರಾದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿಯ ವಲಯಾರಣ್ಯ ಕಚೇರಿ ಸಮೀಪ ರವಿವಾರ ಸಂಭವಿಸಿದೆ.
ಪೆರ್ಲಂಪಾಡಿ ಅಜಿತ್ ಅವರು ಬೆಂಗಳೂರಿಗೆ ತೆರಳುವ ವೇಳೆ ಹೆದ್ದಾರಿ ಬದಿಯ ಬೃಹತ್ ಮರ ಉರುಳಿದೆ. ಮರ ಬೀಳುವುದನ್ನು ಗಮನಿಸಿ ಕೂಡಲೇ ಕಾರು ನಿಲ್ಲಿಸಿದ್ದು, ಈ ವೇಳೆ ಬೃಹತ್ ಮರ ಹೆದ್ದಾರಿಗೆ ಉರುಳಿ ಬಿದ್ದಿದ್ದು, ಕಾರು ಚಾಲಕ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಆದರೂ ಕಾರಿಗೆ ಅಲ್ಪ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಮರ ಬಿದ್ದ ಪರಿಣಾಮ ಹೆದ್ದಾರಿ ತಡೆ ಉಂಟಾಗಿದ್ದು, ರಸ್ತೆಯ ಎರಡೂ ಬದಿಯಲ್ಲೂ ವಾಹನಗಳು ಹಲವು ಕಿ.ಮೀ. ಸಾಲುಗಟ್ಟಿ ನಿಂತಿದ್ದವು. ಆ ಬಳಿಕ ಕಾರ್ಯಚರಣೆ ನಡೆಸಿ ಮರ ತೆರವು ಕಾರ್ಯ ನಡೆಸಿ ಸಂಚಾರಕ್ಕೆ ಅನುವು ಮಾಡಲಾಯಿತು. ಸುಬ್ರಹ್ಮಣ್ಯ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ, ಸ್ಥಳೀಯರು ಸಹಕರಿಸಿದರು.