Advertisement

ಮೋದಿ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ: ಡಾ.ಸುಬ್ರಮಣಿಯನ್ ಸ್ವಾಮಿ

05:54 PM Nov 26, 2022 | Team Udayavani |

ಮಡಿಕೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಪ್ರಧಾನಿಯಾಗಿ ಕೈಗೊಂಡ ಕೆಲವೊಂದು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ. ಕೆಲವು ವಿಚಾರಗಳಲ್ಲಿ ದಿಟ್ಟ ಹೆಜ್ಜೆ ಇಡುತ್ತಿಲ್ಲವೆಂದು ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

Advertisement

ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವು ವಿಚಾರಗಳ ಬಗ್ಗೆ ಬಿಗಿ ನಿರ್ಧಾರಗಳನ್ನು ಮೋದಿ ಕೈಗೊಂಡಿಲ್ಲ ಎಂಬ ಅಸಮಾಧಾನವಿದೆ. ಹೀಗಿದ್ದರೂ ದೇಶದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಬೆಂಬಲದಿಂದ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಸುಬ್ರಹ್ಮಣ್ಯ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಅಧಿಕಾರಸ್ಥರು ತಪ್ಪು ನಿರ್ಧಾರ ಕೈಗೊಂಡಾಗ ತಿಳಿದಿದ್ದೂ ಯಾಕೆ ನೀವು ಮೌನವಾಗಿದ್ದೀರಿ ಎಂದು ಜನರು ಪ್ರಶ್ನಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ಬಗ್ಗೆ ಶ್ಲಾಘಿಸುವುದು, ಟೀಕಿಸುವುದು ಒಳ್ಳೆಯ ಲಕ್ಷಣ. ತಪ್ಪು ತೀರ್ಮಾನಗಳ ಕುರಿತಂತೆ ಹಲವು ಬಾರಿ ಪ್ರಧಾನಿಗೆ ತಾನು ಪತ್ರ ಬರೆದಿದ್ದೇನೆ. ಆದರೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಸದ್ಯದಲ್ಲಿಯೇ ಸೋನಿಯಾ – ರಾಹುಲ್ ಗಾಂಧಿ ಜೈಲಿಗೆ ಹೋಗುತ್ತಾರೆ:

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಡಾ.ಸುಬ್ರಹ್ಮಣ್ಯ ಸ್ವಾಮಿ, ಯಾರು ಭಾರತವನ್ನು ಒಡೆದರೋ ಅವರೇ ತಾವು ಮಾಡಿದ ಕೃತ್ಯಕ್ಕೆ ಪ್ರಾಯಶ್ಚಿತವಾಗಿ “ಭಾರತ್ ಜೋಡೋ”ಎಂದು ತಾವೇ ಒಡೆದ ಭಾರತವನ್ನು ಜೋಡಿಸಲು ಹೊರಟಂತಿದೆ. ರಾಹುಲ್ ಗಾಂಧಿಗೆ ಮಾತ್ರ ಭಾರತ ಒಡೆದಂತೆ ಕಾಣುತ್ತಿದೆಯೇ ವಿನಃ ನಿಜವಾದ ಭಾರತ ಒಗ್ಗಟ್ಟಿನ ಭಾರತವಾಗಿದೆ, ಎಲ್ಲೂ  ಒಡೆದ ಭಾರತದಂತಿಲ್ಲ ಎಂದು ಹೇಳಿದರು. ಸದ್ಯದಲ್ಲಿಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯಂಗ್ ಇಂಡಿಯಾ ಪ್ರಕರಣದಲ್ಲಿ ಜೈಲು ಸೇರಲಿದ್ದಾರೆ ಅವರು ಭವಿಷ್ಯ ನುಡಿದರು.

Advertisement

ಇದನ್ನೂ ಓದಿ: ಕೆಲಸ ಕಳೆದುಕೊಂಡು ತಲೆ ಮೇಲೆ ಕೈಯಿಟ್ಟುಕೊಂಡಿದ್ದವರು ʼವಡಾ ಪಾವ್‌ʼ ಮಾರಿ ಕೋಟ್ಯಧಿಪತಿಯಾದರು

ಮುಂದಿನ ವರ್ಷ ಪ್ರತ್ಯೇಕ ಕೊಡವ ಲ್ಯಾಂಡ್ ಘೋಷಣೆ: ಡಾ.ಸುಬ್ರಮಣಿಯನ್ ಸ್ವಾಮಿ ವಿಶ್ವಾಸ

ಮಡಿಕೇರಿ: ಕೊಡವ ಸ್ವಾಯತ್ತ ನಾಡಿನ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್ನಲ್ಲಿ ವಾದ ಮಂಡಿಸಿ ಜೂನ್ ಅಥವಾ ಜುಲೈ ಅಂತ್ಯದೊಳಗೆ ಕೊಡವ ಲ್ಯಾಂಡ್ ಬೇಡಿಕೆಗೆ ನ್ಯಾಯಾಲಯದಿಂದ ಸ್ಪಂದನೆ ದೊರಕುವಂತೆ ಮಾಡುವುದಾಗಿ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಭರವಸೆ ನೀಡಿದ್ದಾರೆ.

ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೊಡವರಿಗೆ ಸ್ವಾಯತ್ತ ನಾಡು ಕೇಳಲು ಸಂವಿಧಾನಾತ್ಮಕವಾಗಿ ಎಲ್ಲಾ ಹಕ್ಕಿದೆ. ಕೊಡವ ಸ್ವಾಯತ್ತ ನಾಡಿನ ಬೇಡಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವೆ, ಇದಕ್ಕಾಗಿ ವಕೀಲರನ್ನು ಕೂಡ ನಿಯೋಜಿಸಿರುವೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ತಾನು ಕೊಡವ ಸ್ವಾಯತ್ತ ನಾಡಿನ ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದ್ದರು. ಆದರೆ 2 ವರ್ಷ ಕಳೆದರೂ ಅವರು ಏನನ್ನೂ ಮಾಡಲಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಸಿಎನ್‌ಸಿ ಬೇಡಿಕೆ ಬಗ್ಗೆ ತಿಳುವಳಿಕೆ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ನಲ್ಲಿ ತಾನೇ ಕೊಡವರ ಬೇಡಿಕೆ ಪರ ವಾದ ಮಂಡಿಸುವೆ ಎಂದೂ ಸುಬ್ರಹ್ಮಣ್ಯ ಸ್ವಾಮಿ ತಿಳಿಸಿದರು.

ಮುಂದಿನ ಕೊಡವ ನ್ಯಾಷನಲ್ ಡೇ ವೇಳೆಗೆ ಪ್ರತ್ಯೇಕ ಕೊಡವ ಹೋಂ ಲ್ಯಾಂಡ್ ನೊಂದಿಗೆ ಸಂಭ್ರಮಿಸೋಣ. ಕೊಡವ ಲ್ಯಾಂಡ್ ಬೇಡಿಕೆ ನ್ಯಾಯುತವಾಗಿದೆ. ಸಿಎನ್‌ಸಿಯ ಬೇಡಿಕೆಗಳು, ಸುಪ್ರೀಂ ಕೋರ್ಟ್ನ ಮೂಲಕ ಈಡೇರುವ ವಿಶ್ವಾಸವಿದೆ. ಪ್ರತ್ಯೇಕ ರಾಜ್ಯ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಈ ಬೇಡಿಕೆ ಈಗ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next