Advertisement

ಸುಬ್ರಹ್ಮಣ್ಯ: ತಿಂಗಳಲ್ಲಿ ದೇಗುಲದ 4 ಹಸುಗಳ ಸಾವು

06:00 AM Jun 03, 2018 | |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ನಾಲ್ಕು ಹಸುಗಳು ತಿಂಗಳಲ್ಲಿ ಮೃತಪಟ್ಟಿದ್ದು, ಆತಂಕ ಸೃಷ್ಟಿಯಾಗಿದೆ. ಆನೆಗೆ ಸುಸಜ್ಜಿತ ವಿಶ್ರಾಂತಿ ತಾಣವನ್ನು ಕಲ್ಪಿಸಿರುವ ದೇಗುಲ ಆಡಳಿತ ಮಂಡಳಿ ಹಸುಗಳಿಗೆ ಸೂಕ್ತ ಗೋಶಾಲೆ ಹಾಗೂ ಮೇವು ಒದಗಿಸುವಲ್ಲಿ ವಿಫ‌ಲವಾಗಿರುವುದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ.


ದೇಗುಲದ 65 ವರ್ಷಗಳ ಹಿಂದಿನ ಹಟ್ಟಿ.

Advertisement

ಸುಬ್ರಹ್ಮಣ್ಯ ರಾಜ್ಯದ ನಂ.1 ಸಿರಿವಂತ ದೇಗುಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದಿಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆ ಬದಿಯಲ್ಲಿ ಪಾಳುಬಿದ್ದ ಕಟ್ಟಡದಲ್ಲೇ ಹಸುಗಳನ್ನು ಇಡಲಾ ಗಿದೆ. ತಿಂಗಳ ಹಿಂದೆ ಇಲ್ಲಿ 13 ಜಾನುವಾರುಗಳಿದ್ದವು. ಶುಕ್ರವಾರ ಮತ್ತೂಂದು ಹಸು ಮೃತಪಟ್ಟಿದ್ದು, ತಿಂಗಳ ಅವಧಿಯಲ್ಲಿ 4 ದನಗಳು ಸಾವನ್ನಪ್ಪಿದಂತಾಗಿದೆ. ಈಗ 4 ಹಸು, 3 ಕರು, 2 ಹೋರಿಗಳಿವೆ. ದಿನಕ್ಕೆ ಒಂದು ಲೀಟರ್‌ ಹಾಲು ದೊರಕುತ್ತಿದ್ದು, ದೇವರ ಪೂಜೆಗೆ ಬಳಸಲಾಗುತ್ತಿದೆ. ಆದರೆ, ಈಗ ದೇವರ ಅಭಿಷೇಕಕ್ಕೂ ಹಾಲಿನ ತತ್ವಾರ ಬಂದಿದೆ.

ಕಾರಣವೇನು?
ಜಾನುವಾರುಗಳ ಶಾರೀರಿಕ ಕ್ರಿಯೆಯಲ್ಲಿ ಏರು ಪೇರಿನಿಂದ ಸರಣಿ ಸಾವು ಸಂಭವಿಸುತ್ತಿದೆ ಎನ್ನಲಾಗಿದೆ. ಅಲ್ಪ ಪ್ರಮಾಣದ ಹಿಂಡಿ, ನೀರು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಒಣಹುಲ್ಲನ್ನೇ ನೀಡಲಾಗುತ್ತಿದೆ. ಇದರಿಂದ ರಾಸುಗಳ ದೇಹದ ಉಷ್ಣಾಂಶ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಚಡಪಡಿಸು ವಿಕೆ, ಹೆಚ್ಚು ನೀರು ಸೇವನೆ, ನಾಲಗೆ ಹೊರಚಾಚಿ ಉಸಿರಾಡುವುದು, ತೇಕುವುದು, ಅನಿಯಮಿತ ಬೆದೆ, ಕಡಿಮೆ ಹಾಲಿನ ಉತ್ಪಾದನೆ, ರೋಗ ನಿರೋಧಕ ಶಕ್ತಿ ಕ್ಷೀಣ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿವೆ. ಇಬ್ಬರು ಸಿಬಂದಿ ಗೋವುಗಳ ಆರೈಕೆ ಮಾಡುತ್ತಿದ್ದಾರೆ. 

ಹಸುಗಳ ಉತ್ತಮ ಆರೋಗ್ಯಕ್ಕೆ ಕೊಟ್ಟಿಗೆ ಸಮರ್ಪಕ ನಿರ್ವಹಣೆ, ಯಥೇತ್ಛವಾಗಿ ಶುದ್ಧ ನೀರು, ಹಸಿ ಮೇವನ್ನೂ ಪೂರೈಸಬೇಕು. ಎಣ್ಣೆ ಕಾಳುಗಳ ಹಿಂಡಿ, ಬೇಳೆ ಕಾಳು ಒದಗಿಸಬೇಕು. ಆದರೆ ಇದ್ಯಾವುದೂ ಇಲ್ಲಿ ನೀಡಲಾಗುತ್ತಿಲ್ಲ. ದೇಗುಲಕ್ಕೆ ಎಕ್ರೆಗಟ್ಟಲೆ ಕೃಷಿ ಭೂಮಿ ಇದ್ದರೂ ಹಸಿಹುಲ್ಲು ಒದಗಿಸುತ್ತಿಲ್ಲ ಎಂಬ ಟೀಕೆಗೆ ಗುರಿಯಾಗಿದೆ. ದೇಗುಲದ ವತಿಯಿಂದ ಕ್ಷೇತ್ರದಲ್ಲಿ ನೂರಾರು ಅಭಿವೃದ್ಧಿ ಕಾರ್ಯಗಳನ್ನು ಕೈ ಗೆತ್ತಿಕೊಳ್ಳಲಾಗಿದೆ. ಆದರೆ ಸುಸಜ್ಜಿತ ಗೋ ಶಾಲೆ ನಿರ್ಮಾಣವಾಗಿಲ್ಲ. ನೂತನ ಗೋಶಾಲೆ ನಿರ್ಮಾಣಕ್ಕೆ ಇತ್ತೀಚೆಗಷ್ಟೆ 39.04 ಲಕ್ಷ ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ಅನು ಮೋದನೆಗೆ ಕಳಿಸಲಾಗಿದೆ. ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ಕೈಕಂಬ ಬಳಿ 7.61 ಎಕ್ರೆ ಭೂಮಿ ಕಾದಿರಿಸಿದ್ದು, ದೇಗುಲದ ಹೆಸರಿನಲ್ಲಿ ಆರ್‌ಟಿಸಿ ಆಗಿದೆ. ಅಂದು ಆಡಳಿತ ಮಂಡಳಿ ಆ ಭೂಮಿಗೆ ಬೇಲಿ ನಿರ್ಮಿಸಲು ಮುಂದಾಗಿತ್ತು. ಆದರೆ ಜಿಲ್ಲಾಡಳಿತದ ನಿರಾಸಕ್ತಿ, ಅರಣ್ಯ ಇಲಾಖೆಯ ಅಸಹಕಾರದಿಂದ ಅದು ನನೆಗುದಿಗೆ ಬಿದ್ದಿದೆ ಎಂದು ಹೇಳಲಾಗಿದೆ.

ಶೀಘ್ರ ಪರಿಹಾರ
ದೇಗುಲದ ವತಿಯಿಂದ ಸುಸಜ್ಜಿತ ಗೋಶಾಲೆ ನಿರ್ಮಿಸಲು ಆಡಳಿತ ಮಂಡಳಿ ನಿರ್ಣಯಿಸಿದ್ದು, ಅಂದಾಜುಪಟ್ಟಿಯನ್ನೂ ಸಿದ್ಧಪಡಿಸಿದೆ. ಇದಕ್ಕೆ ಮಂಜೂರಾತಿ ದೊರೆತ ತತ್‌ಕ್ಷಣ ನಿರ್ಮಿಸಲಾಗುವುದು. ಬಳಿಕ ಎಲ್ಲವೂ ಸರಿಯಾಗಲಿದೆ.
ನಿತ್ಯಾನಂದ ಮುಂಡೋಡಿ,  ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ

Advertisement

ಒಣಹುಲ್ಲನ್ನೇ ಕೊಡಬಾರದು
ಒಣಹುಲ್ಲನ್ನಷ್ಟೇ  ನೀಡುವುದರಿಂದ ಅಜೀರ್ಣಗೊಂಡು ಹಸುಗಳು ಅಸ್ವಸ್ಥವಾಗುತ್ತವೆ. ಸಾವಿಗೂ ಕಾರಣವಾಗುತ್ತವೆ. ಹಸಿ ಹುಲ್ಲನ್ನೂ ಜತೆಗೆ ನೀಡುವುದರಿಂದ ಪೌಷ್ಟಿಕಾಂಶ ದೊರತು ದೈಹಿಕ ಸಮತೋಲನ ಕಾಪಾಡಲು ಸಾಧ್ಯ.
ಡಾ| ವೆಂಕಟಾಚಲಪತಿ  ಪಶು ವೈದ್ಯಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next