ಸುಬ್ರಹ್ಮಣ್ಯ: ಸರಣಿ ರಜೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಸಮೀಪವಿರುವ ಕುಮಾರಪರ್ವತ ಚಾರಣಕ್ಕೆ ಶುಕ್ರವಾರ ಚಾರಣಿಗರ ದಂಡೇ ಹರಿದು ಬಂದಿದೆ.
ಚಾರಣ ಮಾತ್ರವಲ್ಲದೇ ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರಮುಖ ದೇಗುಲಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು ಶ್ರೀ ದುರ್ಗಾಪರಮೇಶ್ವರೀ, ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮುಕಾಂಬಿಕಾ ಸಹಿತ ಬಹುತೇಕ ಹೆಚ್ಚಿನ ದೇವಸ್ಥಾನಗಳಿಗೆ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದಿದ್ದಾರೆ.
ಕುಮಾರ ಪರ್ವತ ಚಾರಣಕ್ಕೆ ವರ್ಷಂಪ್ರತಿ ಈ ಸಮಯದಲ್ಲಿ ಹೆಚ್ಚಿನ ಚಾರಣಿಗರು ಆಗಮಿಸುತ್ತಾರೆ. ಶುಕ್ರವಾರದಿಂದ ರವಿವಾರದ ವರೆಗೆ ಸರಣಿ ರಜೆ ಇರುವುದರಿಂದ ಪ್ರಸ್ತುತ ಭಾರೀ ಸಂಖ್ಯೆಯ ಚಾರಣಿಗರು ಕುಮಾರ ಪರ್ವತ ಚಾರಣಕ್ಕೆ ಆಗಮಿಸಿದ್ದಾರೆ. ಸುಬ್ರಹ್ಮಣ್ಯದ ದೇವರಗದ್ದೆ ಪ್ರವೇಶ ದ್ವಾರದ ಬಳಿ ಶುಕ್ರವಾರ ಭಾರೀ ದಟ್ಟನೆ ಕಂಡುಬಂತು.
ಸಾಮಾನ್ಯ ರಜೆ ದಿನಗಳಿಂದಲೂ ಹೆಚ್ಚಿನ ಚಾರಣಿಗರು ಆಗಮಿಸಿದ್ದರಿಂದ ದಟ್ಟಣೆ ಉಂಟಾಗಿದೆ. ಅರಣ್ಯ ಇಲಾಖೆ ಸಿಬಂದಿ ತಪಾಸಣೆ ನಡೆಸಿಯೇ ತೆರಳಲು ಅವಕಾಶ ನೀಡಿದ್ದಾರೆ.
ಮುಂದಿನ ಎರಡು ದಿನವೂ ಹೆಚ್ಚಿನ ಚಾರಣಿಗರ ಆಗಮನದ ನಿರೀಕ್ಷೆ ಅಂದಾಜಿಸಲಾಗಿದೆ.