ಸುಬ್ರಹ್ಮಣ್ಯ : ಇಲ್ಲಿಗೆ ಸಮೀಪದ ನಾಲ್ಕೂರು, ಯೇನೆಕಲ್ಲು, ಬಳ್ಪ ಭಾಗದ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕಾಳ್ಗಿಚ್ಚು ಹತ್ತಿಕೊಂಡಿದ್ದು, ಅರಣ್ಯ ಇಲಾಖೆ ಬೆಂಕಿ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ.
ನಾಲ್ಕೂರು, ಯೇನೆಕಲ್ಲು ಗ್ರಾಮಕ್ಕೆ ಹೊಂದಿಕೊಂಡಿರುವ ತುಂಬತ್ತಾಜೆ, ವಲ್ಪಾರೆ, ಚಾರ್ಮತ ಪ್ರದೇಶದಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ಸಂಜೆ ವೇಳೆ ಬೆಂಕಿ ನಿಯಂತ್ರಣಕ್ಕೆ ಬಂದಿದ್ದರೂ ಬುಧವಾರ ಮತ್ತೆ ತೀವ್ರವಾಗಿ ಹಬ್ಬಿದೆ. ಅರಣ್ಯ ಇಲಾಖೆ, ಶೌರ್ಯ ವಿಪತ್ತು ಘಟಕ, ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಸ್ಥಳೀಯ ನೂರಾರು ಜನರು ಬೆಂಕಿ ನಂದಿಸುವಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಕಾಳ್ಗಿಚ್ಚು ಭಾರೀ ಪ್ರಮಾಣದಲ್ಲಿರುವುದರಿಂದ ಹಾಗೂ ಬೆಂಕಿಯ ತೀವ್ರತೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸಂಜೆ ವೇಳೆಗೆ ಕಾಳ್ಗಿಚ್ಚನ್ನು ಬಹುತೇಕ ನಿಯಂತ್ರಿಸಲಾಗಿದೆ. ಆದರೆ ರಾತ್ರಿ ವೇಳೆ ಗಾಳಿಗೆ ಒಣ ಮರ, ಪೊದೆಗಳಿಗೆ ಮತ್ತೆ ಬೆಂಕಿ ತಗಲಿ ತೀವ್ರಗೊಳ್ಳುವ ಆತಂಕ ಸ್ಥಳೀಯರದ್ದು.
ಸುಮಾರು ನೂರಾರು ಎಕ್ರೆ ವ್ಯಾಪ್ತಿಯಲ್ಲಿ ಅರಣ್ಯ ಹೊತ್ತಿ ಉರಿದಿದೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಪಂಜ ಹಾಗೂ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಓಟೆ ಬಿದಿರು ಹೆಚ್ಚಿರುವ ಅರಣ್ಯ ಇದಾಗಿದ್ದು, ಬಿದಿರಿಗೆ ಬೆಂಕಿ ತಗುಲಿದ್ದರಿಂದಲೇ ತೀವ್ರತೆ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.