ಬೆಂಗಳೂರು: 2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿ ಪಟ್ಟಿ ರದ್ದು ಕೋರಿರುವ ಪಿಐಎಲ್ ಹಾಗೂ ತಕರಾರು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದರ ಬಗ್ಗೆ ಸಿಐಡಿ ವರದಿ ಬಿಟ್ಟು ಬೇರೆ ಪೂರಕ ದಾಖಲೆಗಳಿದ್ದರೆ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿದೆ.
ಈ ಪ್ರಕರಣದ ಅರ್ಜಿಗಳ ವಿಚಾರಣೆಯನ್ನು ಸೋಮವಾರ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿತು.
ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿಐಡಿ ವರದಿಯ ನೀಡಿದೆ ಎಂದು ವಾದ ಸರಿ, ಆದರೆ, ಭ್ರಷ್ಟಾಚಾರ ಹೇಗೆ ನಡೆದಿದೆ ಎಂಬುದಕ್ಕೆ ನಿಖರತೆಯಿಲ್ಲ. ಹೀಗಾಗಿ ಸಿಐಡಿ ವರದಿ ಹೊರತುಪಡಿಸಿ ಬೇರೆ ಪೂರಕ ದಾಖಲೆಗಳು ಸಾಕ್ಷ್ಯಾಧಾರಗಳು ಇದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು.
ಜೊತೆಗೆ ಭ್ರಷ್ಟಾಚಾರದ ಬಗ್ಗೆ ದೂರು ನೀಡಿರುವ ಡಾ. ಮೈತ್ರಿಯಾ ಹಾಗೂ ಕೆಪಿಎಸ್‌ಸಿ ಸದಸ್ಯೆ ಮಂಗಳಾ ಶ್ರೀಧರ್ ನಡುವೆ ದೂರವಾಣಿ ಕರೆಗಳ ವಿನಿಮಯವಾಗಿದೆ. ಆದರೆ, ಯಾರು ಮೊದಲು ಕರೆ ಮಾಡಿದರು ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಡಾ. ಮೈತ್ರಿಯಾ ದೂರವಾಣಿ ಕರೆಗಳ ವಿವರ ನೀಡುವಂತೆ ಮೈತ್ರಿಯಾ ಹಾಗೂ ಅವರ ಪರ ವಕೀಲರಿಗೆ ಮೌಖೀಕ ಸೂಚನೆ ನೀಡಿತು.
ನೇಮಕಾತಿ ಪಟ್ಟಿ ರದ್ದು ಸಂಬಂಧ ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ, ಈ ಅರ್ಜಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯಾಪ್ತಿಗೆ ಪರಿಗಣನೆಯಾಗಲಿದೆಯೇ ಎಂಬುದರ ಬಗ್ಗೆ ಮೆರಿಟ್ ಆಧಾರದಲ್ಲಿ ವಾದ ಮಂಡಿಸಿ.ಜೊತೆಗೆ ರಾಜ್ಯಸರ್ಕಾರಕ್ಕೆ ಕೆಪಿಎಸ್‌ಸಿ ನೇಮಕಾತಿ ರದ್ದುಗೊಳಿಸುವ ಅಧಿಕಾರವಿದೆಯೇ? ಈ ಬಗ್ಗೆ ಸುಪ್ರೀಂಕೋರ್ಟ್ ಸೇರಿದಂತೆ ಇನ್ನಿತರೆ ಹೈಕೋರ್ಟ್‌ಗಳು ತೀರ್ಪು ನೀಡಿವೆಯೇ ಎಂದು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ಹರ್ಯಾಣ ಸರ್ಕಾರ ಒಮ್ಮೆ ರದ್ದುಪಡಿಸಿದೆ, ರಾಜ್ಯಸರ್ಕಾರಕ್ಕೆ ನೇಮಕಾತಿ ಪಟ್ಟಿ ರದ್ದುಗೊಳಿಸುವ ಅಧಿಕಾರವಿದೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಸಂವಿಧಾನಾತ್ಮಕ ಸ್ವಾಯತ್ತ ಸಂಸ್ಥೆಯಾದ ಕೆಪಿಎಸ್‌ಸಿ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡುವ ಬಗ್ಗೆ ಆದೇಶ ಹೊರಡಿಸಬಹುದು.
ಆದರೆ, ನೇಮಕಾತಿ ರದ್ದುಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಪ್ರಕರಣದಲ್ಲಿ 2014ರಲ್ಲಿ ರಾಜ್ಯಸರ್ಕಾರ ತೆಗೆದುಕೊಂಡಿದ್ದ ನಿರ್ಧಾರ ನೇಮಕಾತಿ ರದ್ದು ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಅ.31 ಮಂಗಳವಾರಕ್ಕೆ ಮುಂದೂಡಿತು.