Advertisement

ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮನವಿ ಸಲ್ಲಿಕೆ 

02:38 PM May 30, 2023 | Team Udayavani |

ಮಂಡ್ಯ: ಕೆಎಸ್‌ಆರ್‌ಟಿಸಿ ಬಸ್‌ ಸೌಕರ್ಯವಿಲ್ಲದ ಕಾರಣ, ರಾಗಿಮುದ್ದನಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಮತ್ತು ದಿವ್ಯಾಂಗರಿಗೆ ಅನಾನುಕೂಲವಾಗಿದ್ದು, ತಕ್ಷಣ ಬಸ್‌ ಸೌಲಭ್ಯ ಕಲ್ಪಿಸಿ ನೆರವಾಗಬೇಕು ಎಂದು ಒತ್ತಾಯಿಸಿ, ಜಿಲ್ಲಾಧಿಕಾರಿ ಡಾ.ಎಚ್‌.ಎನ್‌. ಗೋಪಾಲಕೃಷ್ಣ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ನಿಗಮ(ಮಂಡ್ಯ ವಿಭಾಗ)ದ ಸಹಾಯಕ ಸಂಚಾರ ವ್ಯವಸ್ಥಾಪಕಿ ಪುಷ್ಪಲತಾ ಅವರಿಗೆ ಸೋಮವಾರ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು.

Advertisement

ನಗರದ ಕೆಎಸ್‌ಆರ್‌ಟಿಸಿ ಮಂಡ್ಯ ವಿಭಾಗ ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಮತ್ತು ಮುಖಂಡರು ಮನವಿ ನೀಡಿದ್ದಲ್ಲದೇ, ತಕ್ಷಣ ಗ್ರಾಮಕ್ಕೆ ಬಸ್‌ ಸೌಕರ್ಯ ಕಲ್ಪಿಸಿಕೊಡಬೇಕು. ಇನ್ನು ಮುಂದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಒಂದೂವರೆ ಕಿ.ಮೀ.ವರೆಗೂ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿ ನಡೆದುಕೊಂಡು ಬಂದು, ಬಸ್‌ ಅಥವಾ ಇತರೆ ವಾಹನಗಳಲ್ಲಿ ತೆರಳುತ್ತಿದ್ದರು. ಆದರೆ, ಹೆದ್ದಾರಿಯಲ್ಲಿ ಮುಳ್ಳುತಂತಿಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿ, ಬಂದ್‌ ಮಾಡಿರುವ ಹಿನ್ನೆಲೆಯಲ್ಲಿ ರಸ್ತೆ ದಾಟುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಗ್ರಾಮಸ್ಥರಿಗೆ ಅನಾನುಕೂಲ: ಗ್ರಾಮಕ್ಕೆ ಬಸ್‌ ಸಂಪರ್ಕ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನವೂ ಆಗಿಲ್ಲ. ಅಲ್ಲದೆ, ನಿತ್ಯ ಮಂಡ್ಯ ನಗರಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ತೀರಾ ಅನಾನುಕೂಲವಾಗಿದೆ. ದಿವ್ಯಾಂಗರು, ವಯೋವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚಾರಕ್ಕೆ ಹರಸಾಹಸ ಪಡುತ್ತಿ ದ್ದಾರೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದಿರುವ ಕಾರಣ, ಸ್ವಗ್ರಾಮಕ್ಕೆ ತೆರಳುವುದೇ ಕಷ್ಟವಾಗಿದೆ. ಬಸ್‌ ಸೌಕರ್ಯ ಅವಲಂಬಿತರು ಹೈರಾಣಾಗಿದ್ದಾರೆ. ರಸ್ತೆ ದಾಟುವಾಗ ಅಪಘಾತ ಸಂಭವಿಸಿ ಸಾವು ನೋವುಗಳು ಸಂಭವಿಸಿವೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಅದರಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ದಿವ್ಯಾಂಗರಿಗೆ ಬಸ್‌ ಸೌಕರ್ಯ ವ್ಯವಸ್ಥೆ ಅತಿ ಮುಖ್ಯವಾಗಿರುವುದರಿಂದ ಬಸ್‌ ಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ವಿವಿಧ ಸಂಘಟನೆಯ ಮುಖಂಡರಾದ ಎಲ್‌. ಸಂದೇಶ್‌, ಹನಕೆರೆ ಅಭಿ, ಆಡಿಟರ್‌ ಶಂಕರ್‌, ಗ್ರಾಮಸ್ಥರಾದ ಕಿರಣ್‌, ಕೃಷ್ಣೇಗೌಡ, ಅರ್ಜುನ್‌, ವೀರೇಂದ್ರ, ಪುರುಷೋತ್ತಮ್‌, ಪ್ರಸನ್ನ, ಪವನ್‌, ಸೋಮೇಶ್‌, ಕರಣ್‌ ಹಾಜರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next