Advertisement

ದೇಶಕ್ಕೆ ಅರಿಹಂತ್‌ ಬಲ

06:00 AM Nov 06, 2018 | Team Udayavani |

ನವದೆಹಲಿ: ಪಾಕಿಸ್ತಾನ ಮತ್ತು ಚೀನಾದಿಂದ ಉಂಟಾಗುವ ಅಣ್ವಸ್ತ್ರ ಬೆದರಿಕೆಯನ್ನು ಯಾವುದೇ ರೀತಿಯಲ್ಲಿ ಎದುರಿಸಲು ಭಾರತ ಈಗ ಸರ್ವ ಶಕ್ತಿ ಶಾಲಿಯಾಗಿದೆ.
 
ದೇಶದ ಮೊದಲ ಅಣ್ವಸ್ತ್ರ ಸಿಡಿಸುವ ಸಾಮರ್ಥ್ಯ ಇರುವ ಸಬ್‌ಮರಿನ್‌ ಅರಿಹಂತ್‌ ಮೊದಲ ಗಸ್ತು ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದೆ. ದೇಶದ ರಕ್ಷಣಾ ಕ್ಷೇತ್ರದಲ್ಲಿನ ಈ ಮಹತ್ತರ ಯಶಸ್ಸನ್ನು ನ್ಯೂಕ್ಲಿಯರ್‌ ಕಮಾಂಡ್‌ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಕಟಿಸಿದ್ದಾರೆ. ದೇಶದ ರಕ್ಷಣಾ ಸಾಧನೆಯಲ್ಲಿ ಇದೊಂದು ಐತಿಹಾಸಿಕ ದಿನ. ಅದರಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Advertisement

ಅಣ್ವಸ್ತ್ರಗಳನ್ನು ಮುಂದಿಟ್ಟುಕೊಂಡು ಬೆದರಿಕೆ ಹಾಕುತ್ತಿರುವ ರಾಷ್ಟ್ರಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನ, ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಪರಮಾಣು ಶಸ್ತ್ರಾಸ್ತ್ರ ಸಿಡಿಸುವ ಸಾಮರ್ಥ್ಯ ಇರುವ ಸಬ್‌ಮರಿನ್‌ ಹೊಂದಿರುವ ಬೆರಳೆಣಿಕೆ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದಂತಾಗಿದೆ. ಸದ್ಯ ಅಮೆರಿಕ, ರಷ್ಯಾ, ಫ್ರಾನ್ಸ್‌, ಚೀನಾ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ಬಳಿ ಇಂಥ ಸಬ್‌ಮರಿನ್‌ಗಳು ಇವೆ.

ಮೊದಲ ಬಳಕೆ ನಾವು ಮಾಡಲ್ಲ: 
ಅಣ್ವಸ್ತ್ರವನ್ನು ಭಾರತ ಮೊದಲು ಬಳಕೆ ಮಾಡುವುದಿಲ್ಲ ಎಂಬ ಸಿದ್ಧಾಂತಕ್ಕೆ ಈಗಲೂ ಬದ್ಧವಾಗಿದೆ ಎಂದಿದ್ದಾರೆ ಪ್ರಧಾನಿ. ಈ ಸಬ್‌ಮರಿನ್‌ ದೇಶದ 130 ಕೋಟಿ ಮಂದಿಯ ರಕ್ಷಣೆಗಾಗಿ ಇರುವಂಥ ವ್ಯವಸ್ಥೆ ಎಂದು ಹೇಳಿದ್ದಾರೆ. ಅರಿಹಂತ್‌ಎಂದರೆ ವೈರಿಗಳ ವಿರುದ್ಧ ಜಯಗಳಿಸುವವ ಎಂಬ ಅರ್ಥ ಹೊಂದಿರುವುದಕ್ಕೆ ಸಮನಾಗಿ ಅದು ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ ಪ್ರಧಾನಿ. ಭಾರತ ಹೊಂದಿರುವ ಪರಮಾಣು ಶಸ್ತ್ರಾಸ್ತ್ರ ವ್ಯವಸ್ಥೆ ವಿಶ್ವದ ಶಾಂತಿ ಮತ್ತು ಭದ್ರತೆಗೂ ಅಮೂಲ್ಯ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ. ದೇಶೀಯವಾಗಿಯೇ ಅಭಿವೃದ್ಧಿ ಪಡಿಸಿರುವ ವ್ಯೂಹಾತ್ಮಕವಾಗಿ ದಾಳಿ ನಡೆಸುವ ಪರಮಾಣು ಸಬ್‌ಮೆರಿನ್‌ (ಎಸ್‌ಎಸ್‌ಬಿಎನ್‌) ಇದಾಗಿದೆ ಎಂದೂ ತಿಳಿಸಿದ್ದಾರೆ. 

ಗೊತ್ತೇ ಆಗದು:
ಸಮುದ್ರದ ಆಳದಲ್ಲಿ ಇರುವ ಸಬ್‌ಮರೀನ್‌ನಿಂದ ಒಂದು ನಗರವನ್ನೇ ನಾಶ ಮಾಡಬಲ್ಲ ಕ್ಷಿಪಣಿಯನ್ನು ಉಡಾಯಿಸುವ ಸಾಮರ್ಥ್ಯ ಭಾರತಕ್ಕೆ ಸಿಕ್ಕಿದೆ. ಕಡಿಮೆ ದೂರಕ್ಕೆ ಉಡಾಯಿಸಿ ಅದರಿಂದ ಸಾಧಿಸಲಾಗದ ಹಾನಿಯನ್ನು ಈ ಕ್ಷಿಪಣಿಯಿಂದ ಮಾಡಲು ಸಾಧ್ಯವಿದೆ. ಹಿಂದೂ ಮಹಾ ಸಾಗರದಲ್ಲಿ ಚೀನಾದ ನೌಕಾಪಡೆಯ ಪ್ರಭಾವ ಹೆಚ್ಚುತ್ತಿರುವುದರಿಂದ ಸೋಮವಾರ ಮುಕ್ತಾಯಗೊಂಡ ಯಶಸ್ವೀ ಗಸ್ತು ಮಹತ್ವದ್ದಾಗಿದೆ. ಅರಿಹಂತ್‌ನಿಂದ ಉಡಾಯಿಸಲಾಗುವ ಕ್ಷಿಪಣಿಗಳು 750 ಕಿಮೀ ಮತ್ತು 3,500 ಕಿಮೀ ದೂರದಷ್ಟು, ಛಿಮ್ಮುವ ಸಾಮರ್ಥ್ಯ ಹೊಂದಿದ್ದು, ಅದು ಸಬ್‌ಮರೀನ್‌ನಿಂದ ಉಡಾಯಿಸಲಾಗುವ ಖಂಡಾಂತರ ಕ್ಷಿಪಣಿಗಳಾಗಿವೆ (ಎಸ್‌ಎಲ್‌ಬಿಎಂ). ಅಮೆರಿಕ, ಯು.ಕೆ., ರಷ್ಯಾ, ಚೀನಾಗಳು 5 ಸಾವಿರ ಕಿಮೀ ದೂರದಷ್ಟು ಛಿಮ್ಮುವ ಸಾಮರ್ಥ್ಯದ ಕ್ಷಿಪಣಿಗಳಿವೆ.

Advertisement

ನೆರೆಯ ರಾಷ್ಟ್ರಗಳಲ್ಲಿ:
ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ ಸಬ್‌ಮರೀನ್‌ನಿಂದ ಬಾಬರ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿತ್ತು. 2015ರಲ್ಲಿ ಚೀನಾ ಅತ್ಯಂತ ಶಕ್ತಿಶಾಲಿಯಾಗಿರುವ ಪರಮಾಣು ಸಬ್‌ಮರೀನ್‌ಗಳನ್ನು ಕಾರ್ಯಾರಂಭಗೊಳಿಸಿತ್ತು ಎಂಬ ವರದಿಗಳು ಇವೆ.

ಐಎನ್‌ಎಸ್‌ ಅರಿಹಂತ್‌ ಹೇಗೆ ನೆರವಾಗಲಿದೆ?
– ಅಗ್ನಿ ಖಂಡಾತರ ಕ್ಷಿಪಣಿ ಮತ್ತು ಮಿರಾಜ್‌ 2000ಗಳು ಅಣ್ವಸ್ತ್ರ ಸಿಡಿತಲೆ ಹೊತ್ತೂಯ್ಯುವ ಸಾಮರ್ಥ್ಯ ಹೊಂದಿವೆ. ಆದರೆ ಸಮುದ್ರದಾಳದಿಂದ ಶತ್ರು ರಾಷ್ಟ್ರಗಳ ನೆಲೆ ಛಿದ್ರಗೊಳಿಸುವ ಪರಮಾಣು ಕ್ಷಿಪಣಿ (ಶಿಪ್‌ ಸಬ್‌ಮರೀನ್‌ ಬ್ಯಾಲಿಸ್ಟಿಕ್‌ ಮಿಸೈಲ್‌) ಅಥವಾ ಅದನ್ನು ಉಡಾಯಿಸುವ ಸಾಮರ್ಥ್ಯ ಇರುವ ಸಬ್‌ಮರೀನ್‌ ಕೊರತೆ ಇತ್ತು.
– ತಿಂಗಳುಗಟ್ಟಲೆ ನೀರಿನೊಳಗಿದ್ದುಕೊಂಡೇ ಯುದ್ಧ ಅಥವಾ ಇನ್ನು ಯಾವುದೇ ತುರ್ತು ಪರಿಸ್ಥಿತಿ ವೇಳೆಯಲ್ಲಿ ಅಣ್ವಸ್ತ್ರಗಳನ್ನು ಸಿಡಿಸಲು ನೆರವಾಗುತ್ತದೆ. ಎಲ್ಲಿಂದ ಕ್ಷಿಪಣಿ ಉಡಾವಣೆಯಾಗಿದೆ ಎಂದು ಪತ್ತೆ ಹಚ್ಚಲು ವೈರಿ ರಾಷ್ಟ್ರಗಳಿಗೆ ಅಸಾಧ್ಯ.

ಟೈಮ್‌ಲೈನ್‌
1970- ಅಣ್ವಸ್ತ್ರ ಉಡಾಯಿಸುವ ಸಾಮರ್ಥ್ಯ ಇರುವ ಸಬ್‌ಮರೀನ್‌ ನಿರ್ಮಾಣಕ್ಕೆ ಚಿಂತನೆ
1990ರ ದಶಕ- ಮೂರು ಸಬ್‌ಮರೀನ್‌ ಬ್ಯಾಲಿಸ್ಟಿಕ್‌ ಮಿಸೈಲ್‌ ನಿರ್ಮಾಣ ಕಾರ್ಯ ಶುರು
2009 ಜು.26- 6 ಸಾವಿರ ಟನ್‌ ತೂಕ ಸಾಮರ್ಥ್ಯ ಇರುವ ಐಎನ್‌ಎಸ್‌ ಅರಿಹಂತ್‌ ಸಬ್‌ಮರೀನ್‌ ಅನ್ನು ವಿಶಾಖಪಟ್ಟಣದಲ್ಲಿ ಉದ್ಘಾಟನೆ. ಅದನ್ನು ಅಡ್ವಾನ್ಸ್‌$x ಟೆಕ್ನಾಲಜಿ ವೆಸಲ್‌ (ಎಟಿವಿ) ಯೋಜನೆಯಲ್ಲಿ ನಿರ್ಮಾಣ
2013 ಆ.10- ಐಎನ್‌ಎಸ್‌ ಅರಿಹಂತ್‌ನ 83 ಮೆಗಾ ವ್ಯಾಟ್‌ ಪರಮಾಣು ಸ್ಥಾವರ ಕಾರ್ಯಾರಂಭ
2014 ಡಿಸೆಂಬರ್‌- ಸಮುದ್ರ ಗಸ್ತು ಆರಂಭ. ಅದರಲ್ಲಿ ಕೆ-ಸರಣಿಯ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆಯೂ ಸೇರಿತ್ತು.
2018 ನವೆಂಬರ್‌- ಮೊದಲ ಹಂತದ ಗಸ್ತು ಪೂರ್ಣ. 

ಎಲ್ಲೆಲ್ಲಿ ಪರಮಾಣು ಸಬ್‌ಮರೀನ್‌ ಬಲ?
ಅಮೆರಿಕ- 70+
ರಷ್ಯಾ- 30+
ಯು.ಕೆ – 10-12
ಫ್ರಾನ್ಸ್‌- 10-12
ಚೀನಾ- 5 ಪರಮಾಣು ಮತ್ತು 51 ಸಾಂಪ್ರದಾಯಿಕ 

ಭಾರತ- 13 ಹಳೆಯ‌ ಸಬ್‌ಮರೀನ್‌
1 – ರಷ್ಯಾದಿಂದ ಖರೀದಿಸಿರುವ ಜಲಾಂತರ್ಗಾಮಿ. ಅದಕ್ಕೆ ಪರಮಾಣು ಶಸ್ತ್ರಾಸ್ತ್ರಗಳನ್ನು ಇನ್ನೂ ಸೇರ್ಪಡೆ ಮಾಡಿಲ್ಲ. 
6- ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ  ಸಬ್‌ಮರೀನ್‌ಗಳ ನಿರ್ಮಾಣಕ್ಕೆ ಅನುಮೋದನೆ. ಅದರಲ್ಲಿ ಖಂಡಾಂತರ ಕ್ಷಿಪಣಿಗಳು ಇರುವುದಿಲ್ಲ. 
3- ಶಿಪ್‌ ಸಬ್‌ಮರೀನ್‌ ಬ್ಯಾಲಿಸ್ಟಿಕ್‌ ಮಿಸೈಲ್‌ಗ‌ಳು. 2015ರಲ್ಲಿ ಅವುಗಳ ನಿರ್ಮಾಣಕ್ಕೆ ಒಪ್ಪಿಗೆ
    
ಅರಿಹಂತ್‌ ಮತ್ತು ಅರ್ಗಿಹಾತ್‌
– ಐಎನ್‌ಎಸ್‌ ಅರಿಹಂತ್‌ 2016ರಲ್ಲಿ ನೌಕಾಪಡೆಗೆ ಸೇರ್ಪಡೆ
– ಅರ್ಗಿಹಾತ್‌ ಎಂಬ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಸಬ್‌ಮರೀನ್‌ ಕೆಲ ವರ್ಷಗಳಲ್ಲಿಯೇ ಕಾರ್ಯಾರಂಭ ಮಾಡಲಿದೆ.
– ಎರಡೂ ಹೆಸರುಗಳಿಂದ ಐದು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಸಬ್‌ಮರಿನ್‌ಗಳನ್ನು ಭಾರತ ಹೊಂದಲು ಉದ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next