Advertisement

ಹದಗೆಟ್ಟ ಸಬ್ಲಾಡಿ ರಸ್ತೆ ಅಭಿವೃದ್ಧಿಗೆ ಕೂಡಿ ಬಾರದ ಕಾಲ

10:49 PM Jan 22, 2021 | Team Udayavani |

ಕುಂದಾಪುರ: ತಲ್ಲೂರಿನಿಂದ ಸಬ್ಲಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಕಳೆದ ಹಲವು ವರ್ಷಗಳಿಂದ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಹೊಂಡಮಯವಾಗಿದ್ದು, ಇನ್ನೂ ಈ ರಸ್ತೆಯ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲ. ಈ ರಸ್ತೆಗೆ ದಶಕದಿಂದ ಹಿಂದೆ ಡಾಮರು  ಕಾಮಗಾರಿಯಾಗಿದ್ದು, ಆ ಬಳಿಕ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

Advertisement

ಹಟ್ಟಿಯಂಗಡಿ ಗ್ರಾ.ಪಂ. ಹಾಗೂ ತಲ್ಲೂರು ಗ್ರಾ.ಪಂ.ಗಳೆರಡರ ವ್ಯಾಪ್ತಿಗೂ ಸಂಬಂಧಪಡುವ ರಸ್ತೆ ಇದಾಗಿದ್ದು, ತಲ್ಲೂರು ಗ್ರಾ.ಪಂ. ಕಚೇರಿ ಬಳಿಯಿಂದ ಸುಮಾರು 2 ಕಿ.ಮೀ. ಅಂತರವಿದೆ. ಅನೇಕ ಕಡೆಗಳಲ್ಲಿ ರಸ್ತೆಯ ಮಧ್ಯೆ ಡಾಮರೆಲ್ಲ ಕಿತ್ತು ಹೋಗಿ, ಗುಂಡಿಗಳಾಗಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.

ದಶಕದ ಹಿಂದೆ ಕಾಮಗಾರಿ :

ಈ ಸಬ್ಲಾಡಿ ರಸ್ತೆ ಈ ಹಿಂದೆ ಅಭಿವೃದ್ಧಿಯಾಗಿದ್ದು ಸುಮಾರು 10 ವರ್ಷಗಳ ಹಿಂದೆ. ಆಗ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಈ ರಸ್ತೆಯ ಡಾಮರು ಹಾಗೂ ಕೆಲವೆಡೆಗಳಲ್ಲಿ ಕಾಂಕ್ರೀಟ್‌ ಕಾಮ ಗಾ ರಿಗೆ 1 ಕೋ.ರೂ. ಅನುದಾನ ಮಂಜೂರಾಗಿತ್ತು. 2 ಕಿ.ಮೀ. ವ್ಯಾಪ್ತಿಯ ಈ ರಸ್ತೆಯಲ್ಲಿ ಸುಮಾರು 200-250 ಮೀ.ವರೆಗೆ ಕಾಂಕ್ರೀಟ್‌, ಉಳಿದೆಡೆಗಳಲ್ಲಿ ಆಗ ಡಾಮರು ಕಾಮಗಾರಿ ಮಾಡಲಾಗಿತ್ತು.

100ಕ್ಕೂ ಮಿಕ್ಕಿ ಮನೆ :

Advertisement

ತಲ್ಲೂರು ಪಂಚಾಯತ್‌ ಕಚೇರಿ ಬಳಿಯಿಂದ ಸಬ್ಲಾಡಿಯವರೆಗೆ, ಅಲ್ಲಿಂದ ಪಾರ್ಥಿಕಟ್ಟೆ ಮಾರ್ಗಕ್ಕೂ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಸಬ್ಲಾಡಿ ಭಾಗದಲ್ಲಿ 100 ಕ್ಕೂ ಮಿಕ್ಕಿ ಮನೆಗಳಿದ್ದು, ಅವರೆಲ್ಲ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಪ್ರತಿ ನಿತ್ಯ ನೂರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ.

 

ಸಬ್ಲಾಡಿ ರಸ್ತೆಯು ಅಭಿವೃದ್ಧಿಯು ದುರಸ್ತಿಯಾಗದೇ ಹಲವು ವರ್ಷಗಳೇ ಕಳೆದಿವೆ. 10 ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. ಆ ಬಳಿಕ ಇಲ್ಲಿಯವರೆಗೆ ಯಾವುದೇ ಡಾಮರು   ಅಥವಾ ಕಾಂಕ್ರೀಟ್‌ ಕಾಮಗಾರಿ ಆಗಿಲ್ಲ. ಈ ಬಾರಿಯಾದರೂ ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಮಂಜೂರಾಗಲಿ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಸಂತೋಷ್‌ ಶೆಟ್ಟಿ ಸಬ್ಲಾಡಿ, ಸ್ಥಳೀಯ ಗ್ರಾ.ಪಂ. ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next