Advertisement

ಬತ್ತಿದ ಪುಣ್ಯ ನದಿಗಳು: ವಾರ ಕಳೆದರೆ ನೀರಿಲ್ಲ!

04:39 AM Mar 14, 2019 | Team Udayavani |

ಸುಬ್ರಹ್ಮಣ್ಯ: ಬೇಸಗೆಯ ಬಿರುಬಿಸಿಲು ಹೆಚ್ಚುತ್ತಿದ್ದಂತೆ ನೀರಿನ ಆಗರಗಳು ಬತ್ತುತ್ತಲಿವೆ. ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ನೀರಿನ ಬರ ತಟ್ಟಿದೆ. ಒಂದೆಡೆ ಪುಣ್ಯ ನದಿಗಳು ದಿನದಿಂದ ದಿನಕ್ಕೆ ಬತ್ತುತ್ತಾ ಹೋಗುತ್ತಿದ್ದರೆ, ಇನ್ನೊಂದಡೆ ಅಭಿವೃದ್ಧಿ ಕಾಮಗಾರಿಗಳು ನಡೆಸುವ ಸಂದರ್ಭ ನೀರಿನ ಪೈಪುಗಳು ಒಡೆದು ಹಾನಿಯಾಗುತ್ತಿವೆ. ಪರಿಣಾಮ ಅಲ್ಪ-ಸ್ವಲ್ಪ ನೀರಿನ ಸರಬರಾಜಿನಲ್ಲೂ ವ್ಯತ್ಯಯವಾಗುತ್ತಿದೆ.

Advertisement

ನದಿ, ಹಳ್ಳ ಕೊಳ್ಳಗಳಲ್ಲಿ ನೀರು ಬತ್ತಿ ಹೋಗಿದೆ. ಪಶ್ಚಿಮ ಘಟ್ಟದ ತಪ್ಪಲಿನಿಂದ ಹರಿದು ಬರುವ ಕುಮಾರಧಾರಾ, ದರ್ಪಣ ತೀರ್ಥ ನದಿಗಳಲ್ಲಿ ನೀರು ಬತ್ತಿದೆ. ಕೆಲ ದಿನಗಳ ಮಟ್ಟಿಗೆ ನೀರಿನ ಹರಿವು ಇದ್ದರೂ ವಾರದೊಳಗೆ ನೀರಿನ ಕ್ಷಾಮ ತಲೆದೋರುವ ಮುನ್ಸೂಚನೆ ಇದೆ.

ಕಾಲೇಜಿನಲ್ಲಿ ಕಷ್ಟ
ಕ್ಷೇತ್ರದಲ್ಲಿ ನೀರಿನ ಕೊರತೆ ನೀಗಿಸಲು ದೇವಸ್ಥಾನ ಮತ್ತು ಸ್ಥಳೀಯಾಡಳಿತ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಜಾರಿಗೆ ತಂದಿವೆ. ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿ ವೇಳೆ ನೀರು ಸರಬರಾಜು ಆಗುವ ಪೈಪುಗಳು ಒಡೆದು ನೀರು ಪೋಲಾಗುತ್ತಿದೆ. ಎರಡು ದಿನಗಳಿಂದ ನಗರದಲ್ಲಿ ನೀರಿನ ಸಮಸ್ಯೆ ಕಂಡುಬಂದಿದೆ. ಕಾಶಿಕಟ್ಟೆ ಬಳಿ ಪೈಪು ಒಡೆದು ನೀರಿನ ಸಂಪರ್ಕ ಕಡಿತಗೊಂಡಿದೆ. ಇದರಿಂದ ದೇವಸ್ಥಾನದಿಂದ ನಡೆಸುತ್ತಿರುವ ಕೆಎಸ್‌ ಎಸ್‌ ಕಾಲೇಜಿನಲ್ಲಿ ಬುಧವಾರ ನೀರಿನ ಸಮಸ್ಯೆ ಎದುರಾಯಿತು. ಮಧ್ಯಾಹ್ನ ಹೊತ್ತು ಕಾಲೇಜಿನ ವಿದ್ಯಾರ್ಥಿಗಳು ಕೈ ತೊಳೆಯಲು ನೀರಿಲ್ಲದಂತಾಗಿದೆ. ಮಕ್ಕಳು ದೇವಸ್ಥಾನ, ಹೊಟೇಲ್‌ಗ‌ಳಿಗೆ ಊಟಕ್ಕೆ ತೆರಳಿದ ಸನ್ನಿವೇಶ ಕಂಡುಬಂದಿತು. ಕಾಲೇಜಿಗೆ ಮಧ್ಯಾಹ್ನ ಊಟ ದೇವಸ್ಥಾನದಿಂದ ಸರಬರಾಜಾಗುತ್ತಿದೆ. ಊಟದ ಬಳಿಕ ಕೈ ತೊಳೆಯಲು ನೀರು ಲಭ್ಯವಿಲ್ಲದ ಕಾರಣ ಊಟ ತರುವ ಬದಲು ಮಕ್ಕಳೇ ದೇವಸ್ಥಾನಕ್ಕೆ ಊಟಕ್ಕೆ ತೆರಳಿದರು. ಕಾಲೇಜಿನಲ್ಲಿ ಇತರ ಬಳಕೆಗೂ ನೀರು ಸಿಗದೆ ವಿದ್ಯಾರ್ಥಿಗಳು ಜತೆಗೆ ಉಪನ್ಯಾಸಕರು, ಸಿಬಂದಿ ಸಂಕಷ್ಟ ಅನುಭವಿಸಿದರು.

ರಂಗಪೂಜೆ ಪ್ರಮಾಣ ಕಡಿತ
ಪೈಪು ಒಡೆದು ನೀರಿನ ಸಂಪರ್ಕ ಕಡಿಗೊಂಡಿದ್ದರಿಂದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತಕ್ಕೆ ಒಳಪಟ್ಟ ಕಾಶಿಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕೂಡ ನೀರಿನ ಕೊರೆತೆ ಕಂಡುಬಂದಿದೆ. ಮಂಗಳವಾರ ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಸೇವೆಯಾದ ರಂಗಪೂಜೆಯ ಪ್ರಮಾಣವನ್ನು ನೀರಿಲ್ಲ ಎನ್ನುವ ಕಾರಣಕ್ಕೆ ಕಡಿಮೆ ಮಾಡಲಾಗಿತ್ತು. ಕುಮಾರಧಾರಾ ನದಿಯಲ್ಲಿ ತೀರ್ಥ ಸ್ನಾನಕ್ಕೆ ನೀರಿನ ಕೊರತೆ ಇದ್ದು, ಕೆಲವೇ ದಿನಗಳಲ್ಲಿ ಸ್ನಾನಕ್ಕೂ ನೀರಿಲ್ಲ ಎನ್ನುವ ಸ್ಥಿತಿ ತಲೆದೋರಬಹುದು. ಕ್ಷೇತ್ರಕ್ಕೆ ಬರುವ ಭಕ್ತರ ನೀರಿನ ದಾಹ ತೀರಿಸಲು ದೇವಸ್ಥಾನದ ಅಧಿಕಾರಿಗಳು, ಆಡಳಿತ ಮಂಡಳಿ ಪರದಾಡುವ ದಿನಗಳು ಹತ್ತಿರದಲ್ಲಿವೆ. ಕ್ಷೇತ್ರದಲ್ಲಿ ಬಿಸಿಲ ತಾಪ ಹೆಚ್ಚಿದೆ. ಬಿಸಿಯ ವಾತಾವರಣವಿದೆ. ಭಕ್ತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಹಿಂದೊಮ್ಮೆ ಗಂಭೀರ ಸ್ಥಿತಿ
ಕೆಲ ವರ್ಷಗಳ ಹಿಂದೆ ಬರಗಾಲದ ಭೀಕರತೆ ಕ್ಷೇತ್ರದಲ್ಲಿ ಕಂಡುಬಂದಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಾವಿಯಲ್ಲಿ ನೀರಿನ ಮಟ್ಟ ಕುಸಿತ ಕಂಡುಬಂದಿತ್ತು. ಇದರಿಂದ ತೀರ್ಥ ಬಾಟಲಿಗಳ ಪೂರೈಕೆ ಕೆಲವು ದಿನಗಳವರೆಗೆ ಸ್ಥಗಿತಗೊಳಿಸಲಾಗಿತ್ತು.

Advertisement

ದುರಸ್ತಿ ಕಾರ್ಯ
ನೀರಿನ ಸಮಸ್ಯೆ ಗಂಭೀರ ಹಂತಕ್ಕೆ ತಲುಪುತ್ತಿರುವುದನ್ನು ಮನಗಂಡ ಸ್ಥಳೀಯಾಡಳಿತ ಕಾಶಿಕಟ್ಟೆ ಹಾಗೂ ಇತರೆಡೆಗಳಲ್ಲಿ ಕಾಮಗಾರಿಯಿಂದ ಕೆಟ್ಟಿರುವ ಪೈಪುಗಳ ಮರುಜೋಡಣೆ ಕಾರ್ಯವನ್ನು ಬುಧವಾರ ಸಂಜೆಯಿಂದ ಆರಂಭಿಸಿದ್ದಾರೆ. ಸಿಬಂದಿ ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಭಕ್ತರಿಗೆ ತೊಂದರೆ ಆಗದಂತೆ ಎಚ್ಚರಿಕೆ
ನೀರಿನ ಕೊರತೆಯಿಂದ ಕಾಶಿಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ರಂಗಪೂಜೆ ಸಂಖ್ಯೆ ಕಡಿತ ಮಾಡಿರುವುದು ನಿಜ. ಅಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಸಂಬಂಧಿಸಿದವರಿಗೆ ಸೂಚಿಸಿದ್ದೇವೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದ್ದೇವೆ. ಭಕ್ತರು ನಿರಾಳವಾಗಿ ಕ್ಷೇತ್ರವನ್ನು ಸಂಪರ್ಕಿಸಬಹುದು.
– ರವೀಂದ್ರ ಎಂ.ಎಚ್‌.
ಕಾರ್ಯನಿರ್ವಹಣಾಧಿಕಾರಿ,
ಕುಕ್ಕೆ ಸುಬ್ರಹ್ಮಣ್ಯ ದೇಗುಲ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next