ಸುಬ್ರಹ್ಮಣ್ಯ: ಅಂಗವಿಕಲರಿಗೂ ಸಮಾಜದಲ್ಲಿ ಎಲ್ಲರಂತೆ ಬದುಕು ಸಾಗಿಸ ಬೇಕು ಎನ್ನುವ ಆಸೆ ಇರುತ್ತದೆ. ಅಂಥವರಲ್ಲಿ ಸ್ಫೂರ್ತಿ ತುಂಬುವ ಕಾರ್ಯವನ್ನು ಯೇನೆಕಲ್ಲು ಶಶಾಂಕ ಚಾರಿಟೆಬಲ್ ಸೊಸೈಟಿ ನಡೆಸುತ್ತಿದೆ. ಇಂತಹ ಹೃದಯವಂತಿಕೆಯ ಕಾರ್ಯ ಶ್ಲಾಘನೀಯ ಎಂದು ದ.ಕ. ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕ ದೇವರಾಜ್ ಕೆ.ಎಸ್. ಹೇಳಿದರು.
ಶಶಾಂಕ ಚಾರಿಟೆಬಲ್ ಸೊಸೈಟಿ ಯೇನೆಕಲ್ಲು ಮತ್ತು ವಿಕಲಚೇತನ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆ ಆಶ್ರಯದಲ್ಲಿ ರವಿವಾರ ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಕಾಲೇಜು ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ದಿವ್ಯಾಂಗ ಚೇತನರ ಪ್ರತಿಭಾ ಕಾರಂಜಿ ಸ್ಪರ್ಧೆ ಸ್ಫೂರ್ತಿ-2019 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ, ಅಂಗವಿಕಲರಲ್ಲಿ ವಿಶೇಷ ಪ್ರತಿಭೆ, ಶಕ್ತಿ ಇರುತ್ತದೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ರಾಜ್ಯ ಪ್ರಾ.ಶಾ. ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಮಾತನಾಡಿದರು. ಶಶಾಂಕ ಚಾರಿಟೆಬಲ್ ಸೊಸೈಟಿ ಅಧ್ಯಕ್ಷ ಮುತ್ತಪ್ಪ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಅಂಧ ಕಲಾವಿದ ಮಾಧವ ಚೆಂಬು ಅವರನ್ನು ಸಮ್ಮಾನಿಸಲಾಯಿತು. ನಿರ್ದೇಶಕರಾದ ಸೀತರಾಮ ಎಣ್ಣೆಮಜಲು, ದಿನೇಶ್ ಮಾಸ್ತರ್, ಜಾನಕಿ ಮುತ್ತಪ್ಪ ಉಪಸ್ಥಿತರಿದ್ದರು.
ಉಮೇಶ್ ಕೆ.ಎನ್. ಸ್ವಾಗತಿಸಿ, ಶಿವಪ್ರಸಾದ್ ಮಾದನಮನೆ ವಂದಿಸಿದರು. ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಂಗವಿಕಲರಿಗೆ ವಿವಿಧ ಸ್ಪರ್ಧೆಗಳು ನಡೆದವು.