Advertisement

ಸಾಗರ: ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಮೇಲಿನ ಪ್ರಕರಣ ವಾಪಾಸಿಗೆ ಆಗ್ರಹ

04:24 PM Aug 08, 2022 | Suhan S |

ಸಾಗರ: ಕಾರ್ಗಲ್ ವನ್ಯಜೀವಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಎಸ್. ಕುಂಬಾರ್ ಅವರ ಮೇಲೆ ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು ಮತ್ತು ಅವರನ್ನು ಅದೇ ವಲಯದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಮೋಜಿಣಿದಾರರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎನ್., ಕಾರ್ಗಲ್, ವನ್ಯಜೀವಿ ವಿಭಾಗದ ಉರುಳುಗಲ್ಲು ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಮೋದ್ ರಾತ್ರೋರಾತ್ರಿ ವನ್ಯಜೀವಿ ಪ್ರದೇಶದಲ್ಲಿ ಅಕ್ರಮವಾಗಿ 33 ಕಾಡುಜಾತಿ ಮರ ಕಡಿದವರ ಮೇಲೆ ಅರಣ್ಯ ಮೊಕದ್ದಮೆ ದಾಖಲಿಸಿದ್ದಾರೆ. ಓರ್ವ ಅರಣ್ಯಾಧಿಕಾರಿಯಾಗಿ ಪ್ರಮೋದ್ ಅರಣ್ಯ ಉಳಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮ ತೆಗೆದುಕೊಂಡಿದ್ದಾರೆ. ಆದರೆ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ, ವೈಯಕ್ತಿಕ ದ್ವೇಷದಿಂದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವನ್ನು ಕೆಲವರು ನಡೆಸುತ್ತಿದ್ದಾರೆ ಎಂದು ದೂರಿದರು.

ನಮ್ಮ ಅಧಿಕಾರಿ, ಸಿಬ್ಬಂದಿ ಅನೇಕ ಸೌಲಭ್ಯಗಳ ಕೊರತೆ ನಡುವೆಯೂ ಅರಣ್ಯ ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ. ಜೀವದ ಹಂಗು ತೊರೆದು ಅರಣ್ಯ ಪ್ರದೇಶ ಹಾಗೂ ವನ್ಯಜೀವಿ ಸಂರಕ್ಷಣೆ ಮಾಡುತ್ತಿರುವ ಅಧಿಕಾರಿಗಳನ್ನು ಇಂತಹ ಸುಳ್ಳು ಆರೋಪಗಳನ್ನು ಹೊರಿಸಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಸುತ್ತಿರುವುದನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ. ಕೋಗಾರ್, ಕಾರ್ಗಲ್ ಅರಣ್ಯ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿದ್ದು, ಪಶ್ಚಿಮಘಟ್ಟ ಪ್ರದೇಶವಾಗಿದೆ. ಇಲ್ಲಿ ವನ್ಯಜೀವಿ, ಅಭಯಾರಣ್ಯ ಕಾನೂನು ಅತ್ಯಂತ ಕಟ್ಟುನಿಟ್ಟಿನದ್ದಾಗಿದೆ. ಆದರೆ ತಪ್ಪಿತಸ್ತರ ವಿರುದ್ಧ ಕ್ರಮವೇ ಕೈಗೊಳ್ಳದಂತೆ ಅರಣ್ಯಾಧಿಕಾರಿಗಳ ಕೈ ಕಟ್ಟಿಹಾಕುವ ಪ್ರಯತ್ನ ನಡೆಸಿದರೆ ಅರಣ್ಯ ನಾಶವಾಗುವುದು ಖಚಿತ ಎಂದು ಹೇಳಿದರು.

ತಕ್ಷಣ ಪ್ರಮೋದ್ ಅವರ ಮೇಲೆ ವಿಚಾರಣೆ ನಡೆಸಲು ನೀಡಿರುವ ಆದೇಶ ತಕ್ಷಣ ಹಿಂದಕ್ಕೆ ಪಡೆದು, ವರ್ಗಾವಣೆ ರದ್ದುಗೊಳಿಸಬೇಕು. ಈ ಬಗ್ಗೆ ಆ. 10 ರಂದು ಶಿವಮೊಗ್ಗ ಅರಣ್ಯಾಧಿಕಾರಿಗಳ ಕಚೇರಿಗೆ ನ್ಯಾಯಕ್ಕಾಗಿ ಮನವಿ ಸಲ್ಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ನೌಕರರ ಮೇಲೆ ಅನಗತ್ಯ ಆರೋಪ ಹೊರಿಸಿ ಅವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅಧಿಕಾರಿ ಮತ್ತು ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳಾದ ಅಶೋಕ್, ಕಿರಣ್, ಆನಂದ್, ಸುನಿತಾ, ಮೈಲಾರಪ್ಪ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next