Advertisement

ಉಪ ನೋಂದಣಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ

03:33 PM Dec 03, 2022 | Team Udayavani |

ಗುಂಡ್ಲುಪೇಟೆ: ಪಟ್ಟಣ ತಾಲೂಕು ಕಚೇರಿಯಲ್ಲಿರುವ ಉಪ ನೋಂದಣಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು, ಹಣ ನೀಡಿದರಷ್ಟೇ ಆಸ್ತಿ ನೋಂದಣಿ ಕೆಲಸ ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಕೂಡ ತಾಲೂಕು ಮತ್ತು ಜಿಲ್ಲಾಡಳಿತ ಏಕೆ ಚಕಾರ ಎತ್ತುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ.

Advertisement

ಗುಂಡ್ಲುಪೇಟೆ ತಾಲೂಕು ಕೇರಳ ಮತ್ತು ತಮಿಳುನಾಡು ಗಡಿ ಹಂಚಿಕೊಂಡಿರುವ ಹಿನ್ನೆಲೆ ನೆರೆ ರಾಜ್ಯದ ಬಂಡವಾಳ ಶಾಹಿಗಳು ಇಲ್ಲಿ ಅಧಿಕ ಪ್ರಮಾಣದಲ್ಲಿ ಜಮೀನು ಖರೀದಿಸುತ್ತಿದ್ದಾರೆ.

ಇವರನ್ನೆ ಟಾರ್ಗೆಟ್‌ ಮಾಡುವ ಮಧ್ಯವರ್ತಿಗಳು ಇಲ್ಲಸಲ್ಲದ ದಾಖಲಾತಿಗಳ ನೆಪವೊಡ್ಡಿ ಮನಬಂದಂತೆ ಹಣ ಕೀಳುತ್ತಿದ್ದಾರೆ. ಇದಕ್ಕೆ ಬಗ್ಗದಿದ್ದರೆ ಕೆಲಸ ಸಲೀಸಾಗಿ ನಡೆಯುವುದಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಹಣವಿಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ: ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ಹಣವಿಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಕಚೇರಿ ಮುಂದೆ ನಿಯಮಗಳ ನಾಮಫ‌ಲಕವನ್ನು ಕೇವಲ ನಾಮಕಾವಸ್ಥೆಗೆ ಮಾತ್ರ ಹಾಕಲಾಗಿದ್ದು, ನಾಮಫ‌ಲಕದ ನಿಯಮಗಳಲ್ಲಿ ಒಂದೂ ಪಾಲನೆಯಾಗುತ್ತಿಲ್ಲ. ಕೆಲ ಮದ್ಯವರ್ತಿಗಳ ಅಧಿಕಾರಿಗಳ ಮುಂದೆ ಹೋಗಿ ಹಣ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದ್ದು, ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ಹೀಗಿದ್ದರೂ ಸಹ ಇದಕ್ಕೆ ಬ್ರೇಕ್‌ ಹಾಕುವ ಕೆಲಸವನ್ನು ಮೇಲಾಧಿಕಾರಿಗಳು ಮಾಡುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ಧಾರೆ.

ನಾಮಫ‌ಲಕಕ್ಕೂ ವ್ಯವಹಾರಕ್ಕೂ ಸಂಬಂಧವಿಲ್ಲ: ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಮದ್ಯವರ್ತಿಗಳು ರಾಜಾ ರೋಷವಾಗಿ ಓಡಾಡುತ್ತಿದ್ದಾರೆ. ಅಲ್ಲದೆ ಕಚೇರಿಯ ಅಭಿಲೇ ಖಾಲಾಯ ಕೊಠಡಿಗೂ ತೆರಳುತ್ತಿದ್ದಾರೆ ಎಂದರೆ ಅಧಿಕಾರಿಗಳ ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ. ದಾಖಲೆಗಳನ್ನು ಕೌಂಟರ್‌ನಲ್ಲಿ ನೀಡಿ ಟೋಕನ್‌ ಪಡೆದು ಸರತಿಗಾಗಿ ಕಾಯುವಂತೆ ನೋಟಿಸ್‌ ಬೋರ್ಡ್ ನಲ್ಲಿದೆ. ನೋಂದಣಿಗೆ ಸಂಬಂಧಪಟ್ಟವರು ಮಾತ್ರ ಕಚೇರಿಯಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ ಎಂದು ನಾಮಫ‌ಲಕದಲ್ಲಿದೆ.

Advertisement

ಆದರೆ ನೋಟಿಸ್‌ ಬೋರ್ಡಿಗೂ ನಡೆಯುವ ವ್ಯವಹಾರಕ್ಕೂ ಸಾಮ್ಯತೆಯೇ ಇಲ್ಲ. ಆಸ್ತಿ ನೋಂದಣಿ ಜೊತೆಗೆ ಮಾರಾಟ ಮಾಡಿದವರು ಇಂತಿಷ್ಟು ಸರ್ಕಾರಿ ಶುಲ್ಕ ಕಟ್ಟಲೇಬೇಕು. ಈ ವೇಳೆ ಮಧ್ಯವರ್ತಿಗಳಿಗೆ ಲಂಚ ನೀಡದಿದ್ದರೆ ಆಸ್ತಿಯ ಒಟ್ಟು ಮೌಲ್ಯದಲ್ಲಿ ಏರುಪೇರು ಮಾಡಿ ಹಣ ಹೆಚ್ಚು ಕಟ್ಟುವಂತೆ ಮಾಡುತ್ತಾರೆ. ಲಂಚ ನೀಡಿದರೆ ಯಾವುದೇ ಅಡೆತಡೆ ಇಲ್ಲದೆ ಸಲೀಸಾಗಿ ಕೆಲಸವಾಗುತ್ತದೆ. ಇಷ್ಟೆಲ್ಲ ಮಧ್ಯವರ್ತಿಗಳ ದರ್ಬಾರ್‌ ನಡೆಯುತ್ತಿದ್ದರೂ ಕೂಡ ತಾಲೂಕು ದಂಡಾಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂದು ಪಟ್ಟಣದ ನಿವಾಸಿ ವೆಂಕಟೇಶ್‌ ಆಕ್ರೋಶ ಹೊರಹಾಕಿದ್ದಾರೆ.

ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ಮಧ್ಯವರ್ತಿಗಳ ಜೊತೆಗೆ ಅಧಿಕಾರಿಗಳು ಶಾಮೀಲಾಗಿರುವ ಹಿನ್ನೆಲೆ ಲಂಚಾವತಾರ ತಾಂಡವವಾಡುತ್ತಿದೆ. ಹಣ ನೀಡದಿದ್ದರೆ ಸಾರ್ವಜನಿಕರ ಕೆಲಸಗಳು ಸಲೀಸಾಗಿ ನಡೆಯುವುದಿಲ್ಲ. ಕೆಲ ಮಧ್ಯವರ್ತಿಗಳು ಕೇರಳ ಮತ್ತು ತಮಿಳುನಾಡಿ ನವರನ್ನೇ ಟಾರ್ಗೆಟ್‌ ಮಾಡಿ ಹೆಚ್ಚಿನ ಹಣ ವಸೂಲಿ ದಂಧೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಕೂಡಲೇ ಬ್ರೇಕ್‌ ಹಾಕುವ ಕೆಲಸ ಮಾಡಬೇಕು. -ಎನ್‌.ಕುಮಾರ್‌, ಪುರಸಭೆ ಸದಸ್ಯ

ಮಧ್ಯವರ್ತಿಗಳ ಹಾವಳಿ ಕುರಿತು ಯಾವುದೇ ದೂರ ಬಂದಿಲ್ಲ. ಅದಾಗ್ಯೂ ಕಂಡು ಬಂದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು. ‌-ಸಿ.ಜಿ.ರವಿಶಂಕರ್‌, ತಹಶೀಲ್ದಾರ್‌, ಗುಂಡ್ಲುಪೇಟೆ 

-ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next