Advertisement

‘ಸಬ್ ಕಾ ಸಾಥ್’ಜಾರಿಯಾಗಿದ್ದು ಮುಸ್ಲಿಮರ ಬಳಿ ಖಚಿತಪಡಿಸಿಕೊಳ್ಳಿ: ಅರುಣ್ ಸಿಂಗ್

05:11 PM Apr 21, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ಪಕ್ಷವು ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರ ಸಂಬಂಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ನೈತಿಕ ನೆಲೆಗಟ್ಟಿನಲ್ಲಿ ಈಶ್ವರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಅವರು ಆರೋಪಮುಕ್ತರಾಗಿ ಹೊರಬರಲಿದ್ದಾರೆ ಎಂದು ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್  ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರವಾಸದಲ್ಲಿ ಇರುವ ಅವರು, ಪತ್ರಕರ್ತರ ಜೊತೆ ಮಾತನಾಡಿ,ಪ್ರಧಾನಿಯವರು ಮತ್ತು ಕೇಂದ್ರ ಸರಕಾರ ಜಾರಿಗೊಳಿಸಿದ ಎಲ್ಲ ಯೋಜನೆಗಳು ಹಿಂದೂ- ಮುಸ್ಲಿಮರು ಎಂಬ ಭೇದಭಾವವಿಲ್ಲದೆ ಸಮಾಜದ ಎಲ್ಲರನ್ನೂ ತಲುಪುತ್ತಿವೆ. ಆದ್ದರಿಂದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ’ ಅರ್ಥಪೂರ್ಣವಾಗಿ ಜಾರಿಯಾಗಿದೆ. ಮಾಧ್ಯಮದವರು ಮುಸ್ಲಿಮರಿರುವ ಜಾಗಗಳಿಗೆ ತೆರಳಿ ಈ ವಿಷಯವನ್ನು ಖಚಿತಪಡಿಸಿಕೊಳ್ಳಬೇಕು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ತುಷ್ಟೀಕರಣ ನೀತಿ ಅನುಷ್ಠಾನದಲ್ಲಿತ್ತು ಎಂದು ತಿಳಿಸಿದರು.

ಗಲಭೆಕೋರರು, ಹಿಂಸಾ ಪ್ರವೃತ್ತಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಮರ್ಪಕ ತನಿಖೆ ನಡೆಸಿ ಕಠಿಣ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲಿದೆ ಎಂದರು.

ಪಕ್ಷವನ್ನು ಬಲಪಡಿಸಲು ರೋಡ್ ಮ್ಯಾಪ್ ಸಿದ್ಧಗೊಳಿಸಿದ್ದೇವೆ. ಬೂತ್ ಸಮ್ಮೇಳನ, ಮಂಡಲ ಸಮ್ಮೇಳನ ಸೇರಿದಂತೆ ವಿವಿಧ ಹಂತಗಳಲ್ಲಿ ಸಮ್ಮೇಳನಗಳೂ ನಿಗದಿಯಂತೆ ನಡೆಯಲಿವೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿ, ವಿಶ್ವವೇ ಮೆಚ್ಚುವಂಥ ಅಭಿವೃದ್ಧಿ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ಇದೀಗ ಜಾರಿಯಲ್ಲಿದೆ. ಮೋದಿಯವರ ಸರಕಾರ ಈ ದೇಶಕ್ಕೆ ಆರ್ಥಿಕ ಭದ್ರತೆ, ರಕ್ಷಣಾ ಭದ್ರತೆ, ಸಾಮಾಜಿಕ ಭದ್ರತೆ, ಆರೋಗ್ಯ ಭದ್ರತೆ, ರೈತರಿಗೆ ಕೃಷಿ ಭದ್ರತೆ, ಮಹಿಳಾ ಸಬಲೀಕರಣ- ಹೀಗೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸಿ ಅನುಷ್ಠಾನಕ್ಕೆ ತಂದಿದೆ ಎಂದರು.

Advertisement

ನಾಯಕತ್ವವೇ ಇಲ್ಲದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಮುಳುಗುತ್ತಿರುವ ಹಡಗಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ 397 ಜನರು ಸ್ಪರ್ಧಿಸಿ ಠೇವಣಿ ಕಳಕೊಂಡಿದ್ದಾರೆ. ಈಗ ಕರ್ನಾಟಕದಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್, ಮುಂದಿನ ಚುನಾವಣೆ ಬಳಿಕ ಉಸಿರಾಟ ನಿಲ್ಲಿಸಲಿದೆ. ಬಿಜೆಪಿ ಹೆಚ್ಚು ಸಂಖ್ಯೆಯಲ್ಲಿ ಗೆದ್ದು ಸರಕಾರ ರಚಿಸಿದ ಬಳಿಕ ಆ ಪಕ್ಷದಲ್ಲಿ ಬಹಳಷ್ಟು ಜನರು ಉಳಿಯುವರೆಂಬ ನಿರೀಕ್ಷೆ ಇಲ್ಲ ಎಂದು ತಿಳಿಸಿದರು. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಚ್ಚುವರಿ 4 ಸಾವಿರ ರೂಪಾಯಿ ಸೇರಿದಂತೆ ರಾಜ್ಯ ಸರಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ವಿಶೇóಷ ಅನುಮತಿ ಇಲ್ಲದೆ ಯಾರೂ ಮೈಕ್ ಹಾಕುವಂತಿಲ್ಲ. ಅದನ್ನು ಎಲ್ಲರೂ ಪಾಲಿಸಲೇಬೇಕು. ನಿಗದಿತ ಡೆಸಿಬಲ್ ಮಟ್ಟವನ್ನು ಕಾಪಾಡುವ ಮತ್ತು ಅಂಥ ಸೂಚನೆಯನ್ನು ಪಾಲಿಸುವಂತೆ ಮಾಡುವ ಜವಾಬ್ದಾರಿ ಅಧಿಕಾರಿಗಳಿಗೆ ಇದೆ. ಅದು ಅನುಷ್ಠಾನಗೊಳ್ಳುವಂತೆ ಸರಕಾರ ಮಾಡಬೇಕು ಎಂದರು.

ಹುಬ್ಬಳ್ಳಿ ಗಲಭೆ ಹಿಂದೆ ಒಬ್ಬ ಮೌಲ್ವಿಯ ಕೈವಾಡವಿದೆ ಎಂಬ ಮಾಹಿತಿ ಬಂದಿದ್ದು, ತನಿಖೆ ನಡೆಯುತ್ತಿದೆ. ಯಾರೂ ಕೂಡ ಸಂವಿಧಾನಾತೀತರಲ್ಲ. ಯಾರೂ ಕೂಡ ಕಾನೂನಿಗೆ ಅತೀತರಲ್ಲ. ದೇಶದ ಉದ್ದಗಲಕ್ಕೆ ನಡೆದ ಹಲವು ಭಯೋತ್ಪಾದಕ ಕೃತ್ಯಗಳ ಹಿಂದೆ ಮೌಲ್ವಿಗಳ ಕೈವಾಡ ಕಂಡುಬಂದಿದೆ. ತನಿಖೆ ಮಾಡಬಾರದೇನು? ನಿರ್ದೋಷಿಯಾಗಿದ್ದರೆ ಹೊರಬರುತ್ತಾರೆ. ಆದರೆ, ತನಿಖೆಯೇ ತಪ್ಪೆಂದರೆ ಹೇಗೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನವರು ಕೆಲವರನ್ನು ತಲೆ ಮೇಲೆ ಕೂರಿಸಿಕೊಂಡಿರಬಹುದು. ನಾವು ಯಾರನ್ನೂ ತಲೆ ಮೇಲೆ ಕೂರಿಸಿಕೊಂಡಿಲ್ಲ. ಕೂರಿಸಿಕೊಳ್ಳುವುದೂ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next