ಈ ಬಾರಿ ಕನ್ನಡಕ್ಕೆ ಬರೋಬ್ಬರಿ ಹದಿಮೂರು ರಾಷ್ಟ್ರಪ್ರಶಸ್ತಿಗಳು ದೊರೆತಿರುವುದು ದಾಖಲೆ. ಇದು ಸಹಜವಾಗಿಯೇ ಕನ್ನಡಿಗರಿಗೆ ಖುಷಿ ಹೆಚ್ಚಿಸಿದೆ. ಪ್ರಶಸ್ತಿ ಪುರಸ್ಕಾರ ಅಂದರೆ, ತಂತ್ರಜ್ಞರಿಗೆ ಅದು ಬಲು ದೂರ ಎಂಬ ಮಾತಿದೆ. ಈ ಬಾರಿ ಕನ್ನಡದ “ಕೆಜಿಎಫ್’ ಚಿತ್ರಕ್ಕೆ ಸಾಹಸ ನಿರ್ದೇಶನದ ಮಾಡಿದ ವಿಕ್ರಮ್ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಈ ಗೌರವ ಸಾಹಸ ನಿರ್ದೇಶಕ ವಿಕ್ರಮ್ ಅವರಿಗೆ ಇನ್ನಿಲ್ಲದ ಸಂಭ್ರಮಕ್ಕೆ ಕಾರಣವಾಗಿದೆ.
ಹೌದು, ಸ್ಟಂಟ್ ಮಾಸ್ಟರ್ ವಿಕ್ರಮ್ ಅವರು ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಗೊಂಡಿದ್ದಾರೆ. ಆ ಖುಷಿಯಲ್ಲಿ ಒಂದಷ್ಟು ಮಾತನಾಡಿದ್ದಾರೆ. “ನಾನು ಈ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ನಾನು ಕಳೆದ 2003 ರಿಂದಲೂ ಫೈಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಿಗೆ ಫೈಟರ್ ಆಗಿ ಕೆಲಸ ಮಾಡಿದ್ದೇನೆ. ಕನ್ನಡದ “ಅಕಿರ’ ಚಿತ್ರದ ಮೂಲಕ ನಾನು ಸಾಹಸ ನಿರ್ದೇಶಕನಾಗಿ ಗುರುತಿಸಿಕೊಂಡೆ. ಆ ಚಿತ್ರದ ನಾಯಕ ಅನೀಶ್ ತೇಜೇಶ್ವರ್ ಕೊಟ್ಟ ಅವಕಾಶದಿಂದ ಇಂದು ನಾನು, ಯಶಸ್ವಿ ಸಾಹಸ ನಿರ್ದೇಶಕರಾಗಲು ಕಾರಣವಾಗಿದೆ’ ಎಂದು ಹೇಳುತ್ತಾರೆ ವಿಕ್ರಮ್.
ಈ ಹಿಂದೆ ವಿಕ್ರಮ್ “ಉಗ್ರಂ’ ಚಿತ್ರದ ದೃಶ್ಯವೊಂದಕ್ಕೆ ಸಣ್ಣದ್ದೊಂದು ಫೈಟ್‌ನ ಬಿಟ್ ಸಂಯೋಜಿಸಿದ್ದರಂತೆ. ಸಾಹಸ ನಿರ್ದೇಶಕ ರವಿವರ್ಮ ಅವರು, ಆ ಚಿತ್ರದ ಸ್ಟಂಟ್ ಮಾಸ್ಟರ್ ಆಗಿದ್ದರು. ಅವರು ಬಿಝಿ ಇದ್ದ ಕಾರಣ, ವಿಕ್ರಮ್ ಸಣ್ಣದ್ದೊಂದು ಸಾಹಸ ದೃಶ್ಯ ನಿರ್ದೇಶಿಸಿದ್ದರಂತೆ. ಅದನ್ನು ಪ್ರಶಾಂತ್ ನೀಲ್ ಅವರು ಸೂಕ್ಷ್ಮವಾಗಿ ಗಮನಿಸಿದ್ದರು. ಹಾಗಾಗಿ, ಅವರು “ಕೆಜಿಎಫ್’ ಚಿತ್ರಕ್ಕೆ ಸ್ಟಂಟ್ ಮಾಸ್ಟರ್ ಆಗುವ ಅಕವಾಶ ಕಲ್ಪಿಸಿಕೊಟ್ಟರಂತೆ.
“ಆ ಚಿತ್ರಕ್ಕೆ ಕೆಲಸ ಮಾಡಿದ್ದನ್ನು ಗುರುತಿಸಿದ ಪ್ರಶಸ್ತಿ ಆಯ್ಕೆ ಸಮಿತಿ ನನ್ನ ಕೆಲಸ ಮೆಚ್ಚಿಕೊಂಡಿದೆ. ನಾನು ಈವರೆಗೆ 90 ಚಿತ್ರಗಳಿಗೆ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದೇನೆ. “ಕೆಜಿಎಫ್’ ನನ್ನ 45 ನೇ ಚಿತ್ರ. ಸದ್ಯಕ್ಕೆ ಒಂದಷ್ಟು ಬಿಝಿ ಇದ್ದೇನೆ. “ಕೆಜಿಎಫ್-2′ ಚಿತ್ರಕ್ಕೆ ಇನ್ನೂ ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುತ್ತಿಲ್ಲ. ಹಾಗಾಗಿ, ಕರೆ ಬಂದಿಲ್ಲ. ಬಂದರೆ, ಖಂಡಿತವಾಗಿಯೂ ನಾನು ಇನ್ನಷ್ಟು ಹೆಚ್ಚು ಎಫರ್ಟ್ ಹಾಕಿ ಕೆಲಸ ಮಾಡುತ್ತೇನೆ’ ಎನ್ನುತ್ತಾರೆ ವಿಕ್ರಮ್.