Advertisement

ಹಡಪದ ಸಮಾಜ ಕುಲಶಾಸ್ತ್ರ ಅಧ್ಯಯನ,ನಿಗಮ ಸ್ಥಾಪನೆಗೆ ಕ್ರಮ: ಸಿಎಂ ಬೊಮ್ಮಾಯಿ

07:37 PM Feb 01, 2023 | Team Udayavani |

ವಿಜಯಪುರ : ರಾಜ್ಯದಲ್ಲಿ ಕಾಯಕ ಆಧಾರಿತ ಸಮಾಜಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿದ್ದು, ಅಗತ್ಯ ಅನುದಾನ ಸಹಿತ ಶೀಘ್ರವೇ ಯೋಜನೆ ಜಾರಿಗೆ ತರಲಿದ್ದೇವೆ. ಹಡಪದ ಸಮುದಾಯದ ಕುಲ ಶಾಸ್ತ್ರ ಅಧ್ಯಯನದ ಬಳಿಕ ಸಾಮಾಜಿಕ ನ್ಯಾಯ ಕಲ್ಪಿಸುವ ಹಾಗೂ ಸಮಾಜದ ಅಭಿವೃದ್ಧಿಗೆ ನಿಮಗ ಸ್ಥಾಪಿಸುವ ಕುರಿತು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿದರು.

Advertisement

ಮುದ್ಧೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ, ಹಡಪದ ಅಪ್ಪಣ್ಣ ರಾಜ್ಯ ಮಟ್ಟದ ಜನ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಪೀಠ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 1 ಕೋಟಿ ರೂ. ನೀಡಿದ್ದು, ಇದೀಗ ನಾನು 3 ಕೋಟಿ ರೂ. ನೀಡಿ ಅಡಿಗಲ್ಲು ಹಾಕಿದ್ದೇನೆ. ಭವಿಷ್ಯದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಹಡಪದ ಸಮುದಾಯದ ಕುಲಶಾಶ್ತ್ರ ಅಧ್ಯಯನ ನಡೆಸುವ ಪ್ರಕ್ರಿಯೆ ಪೂರ್ಣಗೊಳಿಸಿ, ಸಾಮಾಜಿಕ ನ್ಯಾಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಕುಂಭಾರ, ಕಂಬಾರ, ಬಡಿಗೇರ, ಹಡಪದ ಸೇರಿದಂತೆ ವೃತ್ತಿ ಆಧಾರಿತ ಕುಲಕಸಬುಗಳಿಗೆ ವಿಶೇಷ ಕಾರ್ಯಕ್ರಮ ರೂಪಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದರು.

ಸಣ್ಣ ಸಮುದಾಯಗಳು ಸಂಘಟಿತವಾದಲ್ಲಿ ಕೆಲವು ಹಿತಾಸಕ್ತಿಗಳು ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಭಯದ ಕಾರಣಕ್ಕೆ ಶೋಷಿತ ಹಾಗೂ ಸಣ್ಣ ಸಮುದಾಯಗಳ ಸಂಘಟನೆ ಆಗದಂತೆ ಬಸವಾದಿ ಶರಣರ ಕಾಲದಿಂದ, ಶತಮಾನದಿಂದಲೂ ವಿರೋಧಿಸುತ್ತಲೇ ಇವೆ. ಆದರೆ ರಾಜ್ಯದಲ್ಲಿ ಮುಕ್ತ ವಾತಾವರಣವಿದ್ದು, ಗುರು ಸಿಕ್ಕಿದ್ದಾರೆ, ಮಠ ಸಿಕ್ಕಿದೆ, ಸಂಘಟನೆ ಸಿಕ್ಕಿದೆ. ಹೀಗಾಗಿ ಸಣ್ಣ ಸಮುದಾಯಗಳ ಧ್ವನಿ ಅಡಗಿಸಲು ಇನ್ನು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಶಿವಶರಣ ಹಡಪದ ಅಪ್ಪಣ ಅವರ ಜನ್ಮಸ್ಥಳ ಮಸಬಿನಾಳ ಹಾಗೂ ಹಡಪದ ಲಿಂಗಮ್ಮ ಅವರ ಜನ್ಮಸ್ಥಳ ರೆಬಿನಾಳ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವ ಬೇಡಿಕೆ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

ಹಡಪದ ಅಪ್ಪಣ್ಣ ಇಲ್ಲದೆ ಬಸವೇಶ್ವರರು ಯಾವ ನಿರ್ಣಯ ಕೈಗೊಳ್ಳುತ್ತಿದ್ದರು. ಸಮಾಜದ ಆಶೋತ್ತರ ಈಡೇರಿಸುವಲ್ಲಿ ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಹೊರಗೆ ವಿರೋಧ ಹಾಗೂ ಒಳಗೆ ಕುತಂತ್ರ ಇರುತ್ತದೆ. ಆದರೆ ರಾಜ್ಯದಲ್ಲಿ ಇನ್ನು ತಳ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ಸಿಗಲಿದೆ ಎಂದರು.

ಹಡಪದ ಅಪ್ಪಣ್ಣ ಪೀಠದ ಅನ್ನದಾನಿ ಭಾರತೀ ಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮುದ್ಧೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರಶ್ರೀ, ಕಾಗಿನೆಲೆ ಗುರುಪೀಠದ ಈಶ್ವರಾನಂದ ಶ್ರೀಗಳು, ಜಿಲ್ಲಾಧಿಕಾರಿ ಡಾ.ವಿ.ಬಿ.ದಾನಮ್ಮನವರ, ಎಸ್ಪಿ ಆನಂದಕುಮಾರ, ಹಡಪದ ಸಮಾಜದ ರಾಜ್ಯಾಧ್ಯಕ್ಷ ಸಿದ್ದರ್ಣಣ ಹಡಪದ, ನಾಗರಾಜ ಸರ್ಜಾಪುರ, ಎಚ್.ಡಿ.ವೈದ್ಯ, ಬಸವರಾಜ ಬೆಳಗಾವಿ, ಚಿದಾನಂದ ಬಸರಕೋಡ, ಸಂತೋಷ ಹಡಪದ, ಶಿವಶಂಕರ ಹಡಪದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಡಪದ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಮನವಿ
ಲಿಂಗಾಯತ ಸಮುದಾಯದ ಒಳಪಂಗಡವಾದರೂ ಹಡಪದ ಸಮುದಾಯವನ್ನು ಸಮಾಜದಲ್ಲಿ ಇನ್ನೂ ಕೀಳಾಗಿ ಕಾಣಲಾಗುತ್ತಿದೆ. ಹೀಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಪ್ರವರ್ಗ 2-ಎ ಗುಂಪಿನಲ್ಲಿರುವ ಹಡಪದ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.- ಅನ್ನದಾನಿ ಭಾರತೀಸ್ವಾಮಿಜಿ ಹಡಪದ ಅಪ್ಪಣ್ಣ ಪೀಠ, ತಂಗಡಗಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next