ತಿರುವನಂತಪುರಂ: ಕೇರಳದ ಕೊಚಿಯಲ್ಲಿ ಪೆಟ್ ಶಾಪ್ ನಿಂದ ಸುಮಾರು 15,000 ರೂಪಾಯಿ ಮೌಲ್ಯದ ನಾಯಿ ಮರಿಯನ್ನು ಕಳ್ಳತನ ಮಾಡಿರುವ ಆರೋಪದಲ್ಲಿ ಉಡುಪಿ ಮೂಲದ ಇಬ್ಬರನ್ನು ಬಂಧಿಸಿರುವ ಘಟನೆ ಕೇರಳದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಬಂಧಿತರನ್ನು ಉಡುಪಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ನಿಖಿಲ್ ಮತ್ತು ಶ್ರೇಯಾ ಎಂದು ಗುರುತಿಸಲಾಗಿದೆ. ಬಂಧಿತ ವಿದ್ಯಾರ್ಥಿಗಳಿಂದ ನಾಯಿ ಮರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಲಯಾಳಂ ಮನೋರಮಾ ವರದಿ ಮಾಡಿದೆ.
ಬೈಕ್ ನಲ್ಲಿ ಕೊಚಿಗೆ ಆಗಮಿಸಿದ್ದ ಇಬ್ಬರು ನಾಯಿ ಮರಿಯನ್ನು ಕದ್ದೊಯ್ದಿದ್ದರು. ಬಳಿಕ ಇಬ್ಬರನ್ನು ಉಡುಪಿಯ ನಿವಾಸದಲ್ಲಿ ಬಂಧಿಸಲಾಯ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಚಿತ್ರ ಕಳ್ಳತನ:
Related Articles
ಈ ವಿಚಿತ್ರ ಕಳ್ಳತನ ಶನಿವಾರ ಸಂಜೆ 7ಗಂಟೆಗೆ ನಡೆದಿತ್ತು. ಈ ಮೊದಲೇ ಮಾತುಕತೆ ನಡೆಸಿದಂತೆ ಬೆಕ್ಕು ಮಾರುವ ನೆಪದಲ್ಲಿ ಇಬ್ಬರು ಬೈಕ್ ನಲ್ಲಿ ನೆಟ್ಟೂರ್ ಗೆ ಬಂದಿದ್ದರು. ಆಗ ಅಂಗಡಿಯಲ್ಲಿದ್ದ ಸಿಬಂದಿಯ ಗಮನವನ್ನು ಬೇರೆಡೆ ಸೆಳೆದಿದ್ದು, ಈ ಸಂದರ್ಭದಲ್ಲಿ ಯುವತಿ ಗೂಡಿನಲ್ಲಿದ್ದ ನಾಯಿ ಮರಿಯನ್ನು ತೆಗೆದು ನಿಖಿಲ್ ಹೆಲ್ಮೆಟ್ ಒಳಗೆ ಹಾಕಿದ್ದಳು. ನಂತರ ಅಲ್ಲಿಂದ ಹೊರಟು ಹೋಗಿದ್ದರು.
ಅಂಗಡಿ ಮಾಲೀಕರು ಇತ್ತೀಚೆಗೆ ಎಡಪ್ಪಲ್ಲಿ ಎಂಬಲ್ಲಿಂದ ಖರೀದಿಸಿದ್ದ ಮೂರು ನಾಯಿ ಮರಿಗಳಲ್ಲಿ ಕದ್ದ ನಾಯಿಮರಿಯೂ ಒಂದಾಗಿದೆ. ಎರಡು ನಾಯಿ ಮರಿಗಳನ್ನು ಅಲಪ್ಪುಳದ ವ್ಯಕ್ತಿಯೊಬ್ಬರು ಖರೀದಿಸುವುದಾಗಿ ತಿಳಿಸಿದ್ದರು. ಆ ವ್ಯಕ್ತಿ ನಾಯಿ ಮರಿ ಖರೀದಿಸಲು ಬಂದಾಗ ಕಳವು ಘಟನೆ ಬೆಳಕಿಗೆ ಬಂದಿದ್ದು, ಮಾಲೀಕರು ಸಿಸಿಟಿವಿ ಪರಿಶೀಲಿಸಿದ್ದರು.
ಸಿಸಿಟಿವಿಯಲ್ಲಿ ನಿಖಿಲ್ ಮತ್ತು ಶ್ರೇಯಾ ನಾಯಿ ಮರಿ ಕಳವು ಮಾಡಿರುವುದು ಪತ್ತೆಯಾಗಿತ್ತು. ಕೂಡಲೇ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ತನಿಖೆಯ ನಂತರ ಕೇರಳ ಪೊಲೀಸರು ಇಬ್ಬರನ್ನು ಉಡುಪಿಯಲ್ಲಿ ಬಂಧಿಸಿರುವುದಾಗಿ ವರದಿ ತಿಳಿಸಿದೆ.