Advertisement

ಶಿಕ್ಷಕರ ಜವಾಬ್ದಾರಿ ನಿಭಾಯಿಸಿದ ವಿದ್ಯಾರ್ಥಿಗಳು

01:58 PM Nov 15, 2019 | Suhan S |

ಅಕ್ಕಿಆಲೂರು: ಪಟ್ಟಣದ ಶ್ರೀ ಚನ್ನವೀರೇಶ್ವರ ಪ್ರಸಾದ ನಿಲಯ ಸೇವಾ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷವಾಗಿ ಮಕ್ಕಳೇ ಶಿಕ್ಷಕರ ಸರದಿಯಲ್ಲಿ ನಿಂತು ಆಟ-ಪಾಠಗಳಲ್ಲಿ ತೊಡಗಿಕೊಂಡು ಸಂಭ್ರಮಿಸಿದರು.

Advertisement

ಪಟ್ಟಣದ ಜಿಡಿಜಿ ಗುರುಕುಲದಲ್ಲಿ ಗುರುವಾರ ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರ 130ನೇ ಜಯಂತಿ ಅಂಗವಾಗಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಶಾಲೆಯಲ್ಲಿ ಬೆಳಗ್ಗೆಯಿಂದಲೇ ಮಕ್ಕಳು ಶಿಕ್ಷಕರಾಗಿ ಪಾಠ ಮಾಡಿ, ಆಟೋಟಗಳಲ್ಲಿ ತೊಡಗಿಕೊಂಡು ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸಿದರು.

ಪ್ರಾರ್ಥನೆಯಲ್ಲಿ ಶಿಕ್ಷಕರನ್ನು ಸರದಿ ಸಾಲಿನಲ್ಲಿ ನಿಲ್ಲಿಸುವುದು, ಪಾಠದ ಕೋಣೆಗಳಲ್ಲಿ ಪಾಠ ಮಾಡುವುದು, ಆಟಗಳನ್ನು ಆಡಿಸುವುದು ಹೀಗೆ ಇಡೀ ದಿನ ಶಿಕ್ಷಕರ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಶಾಲೆಯ ಮಕ್ಕಳು ಗಮನ ಸೆಳೆದರು. ನಂತರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗುರುಕುಲದ ಅಧ್ಯಕ್ಷ ನಾಗರಾಜ ಪಾವಲಿ, ಆಧುನಿಕ ದಿನಗಳಲ್ಲಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಎಲ್ಲ ರೀತಿಯ ತರಬೇತಿಗಳನ್ನು ನೀಡಬೇಕಾದ್ದು  ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದೆ.

ಮುಂದಿನ ಬದಲಾವಣೆಗಳಿಗೆ ವೇಗವಾಗಿ ಹೊಂದಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ಎಲ್ಲ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪಾಲಕರು ಮನೆಯಲ್ಲಿ ಮಕ್ಕಳಿಗೆ ಉತ್ತೇಜನ ನೀಡಬೇಕಿದೆ. ಎಲ್ಲ ಕ್ಷೇತ್ರಗಳ ಕುರಿತು ಮಕ್ಕಳಿಗೆ ಅರಿವು ಇದ್ದಾಗ ಮಾತ್ರ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮಕ್ಕಳು ಶಕ್ತರಾಗುತ್ತಾರೆ ಎಂದರು.

ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗಾಗಿ ವಿಶೇಷ ಆಟಗಳು ನಡೆದವು. ಈ ಸಂದರ್ಭದಲ್ಲಿ ಗುರುಕುಲದ ಗೌರವ ಕಾರ್ಯದರ್ಶಿ ಮಹೇಶ ಸಾಲವಟಗಿ, ನಿರ್ದೇಶಕ ಮಂಡಳಿಯ ಸಿದ್ಧಲಿಂಗೇಶ ತುಪ್ಪದ, ಅಶೋಕ ಸಣ್ಣವೀರಪ್ಪನವರ, ಆಡಳಿತಾಧಿ ಕಾರಿ ಸುರೇಂದ್ರ ಕರೆಮ್ಮನವರ, ಮುಖ್ಯೋಪಾಧ್ಯಾಯ ವಿಜಯ ಪರಶಿಕ್ಯಾತಣ್ಣನವರ, ಶಿಕ್ಷಕರಾದ ರಮೇಶ ಮಡಿವಾಳರ, ಜ್ಯೋತಿ ಯಳ್ಳೂರ, ಸುಶ್ಮಿತಾ ಶೆಟ್ಟಿ, ನಸೀಮ್‌ ಕುಂದಗೋಳ, ಪ್ರವೀಣ ಕಟಗಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next