ಗದಗ: ಬೃಹತ್ ಗೋಪುರ… ಮೆರವಣಿಗೆಯುದ್ದಕ್ಕೂ ಕಲಾಮೇಳಗಳ ಝೇಂಕಾರ… ವಾದ್ಯಮೇಳಗಳನ್ನು ಬಾರಿಸಿದ ಅಧಿಕಾರಿಗಳು.. ಮೆರವಣಿಗೆ ಕಂಡು ಬೆರಗಾದ ಜನ…
ಇದು 2019-20ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ನಿಮಿತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದಲ್ಲಿ ನಡೆದ ‘ಅಕ್ಷರ ಗುಡಿ’ ವೈಭವದ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯ. ಸುಮಾರು 12 ಅಡಿ ಎತ್ತರದ ‘ಅಕ್ಷರ ಗುಡಿ’ ಶಾಲೆಗೆ ನಡಿ ಎಂಬ ಘೋಷ್ಯವಾಕ್ಯದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ನಗರದ ಭೂಮರೆಡ್ಡಿ ವೃತ್ತದಲ್ಲಿರುವ ಜ| ತೋಂಟದಾರ್ಯ ವಿದ್ಯಾಪೀಠದ ಶ್ರೀ ಬಸವೇಶ್ವರ ಶಾಲೆಯಿಂದ, ಗಾಂಧೀ ಸರ್ಕಲ್, ಸ್ಟೇಷನ್ ರೋಡ್, ಟಾಂಗಾಕೂಟಾ, ಬಸವೇಶ್ವರ ವೃತ್ತ, ಮುಳಗುಂದ ನಾಕಾ ಮೂಲಕ ವಕ್ಕಲಗೆಠೀರಿ ಓಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 8ಕ್ಕೆ ತಲುಪಿ ಸಂಪನ್ನಗೊಂಡಿತು.
ಅದ್ಧೂರಿ ಮೆರವಣಿಗೆ: ‘ಅಕ್ಷರ ಗುಡಿ’ ರಥ ಯಾತ್ರೆಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಡೊಳ್ಳು ಕುಣಿತ, ಜಾಂಜ್ ಮೇಳ ಸೇರಿದಂತೆ ವಿವಿಧ ಕಲಾ ತಂಡಗಳ ಹಿಮ್ಮೇಳ ಮೆರವಣಿಗೆಗೆ ಮೆರಗು ನೀಡಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅವಳಿ ನಗರದ ವಿವಿಧ ಶಾಲಾ- ಕಾಲೇಜಿನ ನೂರಾರು ವಿದ್ಯಾರ್ಥಿಗಳು ಶಿಕ್ಷಣದ ಮಹತ್ವ ಸಾರುವ ಜಯಘೋಷಣೆ ಮೊಳಗಿಸಿದರು.
ಅಕ್ಷರ ಗುಡಿ ರಥ ಸಾಗುತ್ತಿದ್ದ ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲಿ ಜನರು ನಿಂತು ಅಚ್ಚರಿಯಿಂದ ನೋಡುತ್ತಿದ್ದರು. ದೂರದಿಂದ ನೋಡಿದವರ ಯಾವುದೋ ಜಾತ್ರೆ, ಪಲ್ಲಕ್ಕಿ ಉತ್ಸವವೆಂದು ಊಹಿಸಿದವರಿಗೆ ಅಕ್ಷರ ಗುಡಿ ಅಚ್ಚರಿ ಮೂಡಿಸಿತು. ಅಕ್ಷರ ಗುಡಿ ಸಾಗಿ ಬರುತ್ತಿದ್ದಂತೆ ಇದು ಶಿಕ್ಷಣ ಇಲಾಖೆ ಪ್ರಚಾರ ರಥವೆಂದು ಉದ್ಗರಿಸುತ್ತಿದರು.
ಇದೇ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಡಿಡಿಪಿಐ ಎನ್.ಎಚ್. ನಾಗೂರ ಡೊಳ್ಳು ಬಾರಿಸಿದರೆ, ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತರೆ ವಾದ್ಯಮೇಳಗಳೊಂದಿಗೆ ಸಾಥ್ ನೀಡಿದರು. ಅಲ್ಲದೇ, ಅಕ್ಷರ ಗುಡಿ ಸಾಗುವ ಮಾರ್ಗದುದ್ದಕ್ಕೂ ಸಾರ್ವಜನಿಕರಿಗೆ ಕರ ಪತ್ರಗಳನ್ನು ವಿತರಿಸಿ, ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಹಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಇಲ್ಲಿನ ಒಕ್ಕಲಗೇರಿ ಸರಕಾರಿ ಪ್ರಾಥಮಿಕ ಶಾಲೆ ನಂ. 8ಕ್ಕೆ ತಲುಪಿ ‘ಅಕ್ಷರ ಗುಡಿ’ ರಥ ಯಾತ್ರೆ ಸಂಪನ್ನಗೊಂಡಿತು. ಈ ವೇಳೆ ಶಾಲೆ ಶಿಕ್ಷಕಿಯರು, ವಿದ್ಯಾರ್ಥಿನಿಯರು ಆರತಿ ಬೆಳಗಿ ಬರಮಾಡಿಕೊಂಡರು.
ಮೆರವಣಿಗೆಯಲ್ಲಿ ರಥ ಎರಡೂ ಕಡೆ ಮಕ್ಕಳು ಹಿಡಿದ್ದಿ ಅಕ್ಷರ ಸಹಿತ ಚತ್ರಿ, ಛಾಮರಗಳು ನೋಡುಗರಿಗೆ ದೇವರ ಜಾತ್ರೆಯಂತೆ ಭಾಸವಾಯಿತು. ಅಲ್ಲದೇ, ಶಿಕ್ಷಣದ ಮಹತ್ವ ಸಾರುವ ಹಿನ್ನೆಲೆ ಗಾಯನದೊಂದಿಗೆ ಸಾಗುತ್ತಿದ್ದ ‘ಅಕ್ಷರ ಗುಡಿ’ ಪ್ರಯೋಗಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.