Advertisement

ವಿದ್ಯಾರ್ಥಿಗಳಿಂದ ನಾಲ್ಕು ದಿನ 48 ವಿಧದ ಪಕ್ಷಿಗಳ ವೀಕ್ಷಣೆ

01:00 AM Feb 21, 2019 | Harsha Rao |

ಕಾಸರಗೋಡು: ಕುಂಬಳೆ ಹೋಲಿ ಫ್ಯಾಮಿಲಿ ಶಾಲಾರಂಭದ ಮೊದಲು ಮೈದಾನಕ್ಕೆ ತೆರಳಿದ ಮಕ್ಕಳು ಆಟವಾಡುವುದರ ಬದಲು ಅತ್ತಿಂದಿತ್ತ ಹಾರಾಡುವ ಬಾನಾಡಿಗಳನ್ನು ಗುರುತಿಸಿದರು. ಸಂಜೆ ಶಾಲೆ ಬಿಟ್ಟ ಬಳಿಕವೂ ಹಕ್ಕಿಗಳ ಹಿಂದೆ ಬಿದ್ದರು. ರಜಾದಿನಗಳಾದ ಶನಿವಾರ ಹಾಗೂ ರವಿವಾರಗಳಂದು  ಶಾಲೆಯ ಸುತ್ತಮುತ್ತ ನಡೆದಾಡಿದರು. ಹೀಗೆ ನಾಲ್ಕು ದಿನಗಳ ಕಾಲ ನಡೆದ ಪಕ್ಷಿ ವೀಕ್ಷಣೆಯಲ್ಲಿ 48 ವಿಧದ ಪಕ್ಷಿಗಳನ್ನು ಗುರುತಿಸಿದರು.

Advertisement

ಅವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಇ-ಬರ್ಡ್‌ ಎಂಬ ಜಾಲ ತಾಣದಲ್ಲಿ ದಾಖಲಿಸಿಕೊಂಡರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೆ. 15ರಿಂದ 18ರ ವರೆಗೆ ಜರಗಿದ ಕ್ಯಾಂಪಸ್‌ ಬರ್ಡ್‌ ಕೌಂಟ್‌ 2019ರಲ್ಲಿ ಕಾಸರಗೋಡು ಜಿಲ್ಲೆಯಿಂದ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಪಕ್ಷಿ ವೀಕ್ಷಕರ ತಂಡ ಮಾತ್ರವೇ ಭಾಗವಹಿಸಿತ್ತು. 27 ಮಕ್ಕಳು ಗಣತಿ ಕಾರ್ಯದಲ್ಲಿ ಪಾಲ್ಗೊಂಡು ಹಕ್ಕಿಗಳ ಬಗೆಗಿನ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಶಾಲೆಯ ಆಟದ ಮೈದಾನ ಹಾಗೂ ಪೊಸ್ತಡ್ಕ ಪ್ರದೇಶದಲ್ಲಿ ಸುತ್ತಾಡಿದ ಪುಟಾಣಿಗಳಿಗೆ ಪಕ್ಷಿ ಪ್ರೇಮಿ ತಂಡದ ಸದಸ್ಯೆ ತನ್ವಿಯ ಮನೆಯವರು ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಿದರು. ಕಾಸರಗೋಡು ಪಕ್ಷಿಪ್ರೇಮಿ ತಂಡದ ಅಧ್ಯಾಪಕ ರಾಜು ಕಿದೂರು ಮಾರ್ಗದರ್ಶನ ನೀಡಿದರು.

ಮುಖ್ಯೋಪಾಧ್ಯಾಯಿನಿ ಸಿ. ಸಿಲ್ವಾ ಕ್ರಾಸ್ತಾ, ರಕ್ಷಕರಾದ ತಾರಾನಾಥ್‌, ಗೋಪಿ, ಅರುಣ್‌ ಮೊದಲಾದವರು ಸಹಕರಿಸಿದರು.

ಮೈಸೂರಿನ ಪಕ್ಷಿ ವೀಕ್ಷಕರ ಭೇಟಿ 
ಬೇಕಲಕೋಟೆ ಪ್ರವಾಸದಲ್ಲಿರುವ ಮೈಸೂರಿನ ಅಂಜಲಿ ಮುಲ್ಲತ್ತಿ ಹಾಗೂ ತಂಡ ಗಣತಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬರ್ಡ್‌ ಕೌಂಟ್‌ ಇಂಡಿಯಾದ ಜಾಲತಾಣದ ಮೂಲಕ ಮಾಹಿತಿ ಪಡೆದ ಅವರು ಮಕ್ಕಳಿಗೆ ಮೈಸೂರಿನ ಹಕ್ಕಿ ಲೋಕವನ್ನು ಪರಿಚಯಿಸಿದರು. ಪುಟಾಣಿ ಪಕ್ಷಿ ವೀಕ್ಷಕರ ಉತ್ಸಾಹಕ್ಕೆ ಬೆಂಬಲವಾಗಿ ಮೈಸೂರು ಸಂದರ್ಶಿಸಲು ತಂಡವು ಆಹ್ವಾನ ನೀಡಿತು.

ಪಕ್ಷಿ ವೈವಿಧ್ಯ  
ಯುರೋಪಿಯನ್‌ ವಲಸೆ ಹಕ್ಕಿಗಳಾದ ಬೂದು ಉಲಿಯಕ್ಕಿ ಮತ್ತು ಹಸಿರು ಉಲಿಯಕ್ಕಿ, ಮರಿಯ ಜತೆಗಿದ್ದ ಕಂಚು ಕುಟಿಗ, ನಿರಂತರವಾಗಿ ಹಾಡುತ್ತಿದ್ದ ಹಳದಿ ಹುಬ್ಬಿನ ಪಿಕಲಾರ, ಸಂತಾನ ಕ್ಷೀಣಿಸುತ್ತಿರುವ ವರ್ಗಕ್ಕೆ ಸೇರಿದ ಹಳದಿ ಟಿಟ್ಟಿಭ, ಭಾಗಿಕ ವಲಸೆಗಾರರಾದ ಹೊನ್ನಕ್ಕಿ, ರಾಜ ಹಕ್ಕಿ, ನೀಲ ಬಾಲದ ಕಳ್ಳಿ ಪೀರ, ಬಿಳಿ ತಲೆ ಕಬ್ಬಕ್ಕಿ, ಕೊಂಕಣ ಪ್ರದೇಶದಲ್ಲಿ ಮಾತ್ರವೇ ಗೂಡುಕಟ್ಟುವ ಬಿಳಿ ಹೊಟ್ಟೆಯ ಮೀನು ಗಿಡುಗ, ಒಣಗಿದ ಮರದಲ್ಲಿ ಅವಿತು ಕುಳಿತ್ತಿದ್ದ ಕಂದು ನೊಣ ಹಿಡುಕ ಇವೇ ಮೊದಲಾದ ಅತ್ಯಪೂರ್ವ ಪಕ್ಷಿಗಳ ಚಲನವಲನಗಳನ್ನು ವೀಕ್ಷಿಸುವ ಸೌಭಾಗ್ಯ ಮಕ್ಕಳಿಗೆ ದೊರಕಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next