Advertisement

ಬಸ್‌ಪಾಸ್‌ಗಾಗಿ ವಿದ್ಯಾರ್ಥಿಗಳ ನೂಕುನುಗ್ಗಲು

03:43 PM Jul 01, 2022 | Team Udayavani |

ಗದಗ: ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಶಾಲಾ-ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಬಸ್‌ಪಾಸ್‌ ಪಡೆಯಲು ಗುರುವಾರ ಪರದಾಡುವಂತಾಯಿತು. ಕಾಲೇಜು ತರಗತಿಗಳನ್ನು ಬಿಟ್ಟು ಉರಿ ಬಿಸಿಲಿನಲ್ಲಿ ಬಸ್‌ಪಾಸ್‌ ಅವಧಿ ವಿಸ್ತರಿಸಲು ಹೆಣಗಾಡಿದರು.

Advertisement

ಹೌದು… ಬಸ್‌ಪಾಸ್‌ ಅವಧಿ ವಿಸ್ತರಣೆ ಮಾಡಿಕೊಳ್ಳಲು ಜೂ.30 ಕೊನೆಯ ದಿನವಾಗಿದ್ದರಿಂದ ಪದವಿ ಪೂರ್ವ, ಪದವಿ, ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ನಿಲ್ದಾಣಕ್ಕೆ ನುಗ್ಗಿದ್ದರಿಂದ ಕೆಲ ಹೊತ್ತು ನೂಕುನುಗ್ಗಲು ಉಂಟಾಗಿತ್ತು.

ಗದಗ ಹೊಸ ಬಸ್‌ ನಿಲ್ದಾಣ ಹಾಗೂ ಬೆಟಗೇರಿ ಬಸ್‌ ನಿಲ್ದಾಣದಲ್ಲಿ ಜಮಾಯಿಸಿದ್ದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‌ಪಾಸ್‌ ನವೀಕರಿಸಲು ಹರಸಾಹಸ ಪಟ್ಟರು. ಗುರುವಾರ ಬಸ್‌ಪಾಸ್‌ ನವೀಕರಣಗೊಳ್ಳದಿದ್ದರೆ ಟಿಕೆಟ್‌ ಪಡೆದು ಸಂಚರಿಸಬೇಕು ಎನ್ನುವ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಪರಿತಪಿಸಿದರು.

ಬಸ್‌ಪಾಸ್‌ ಅವಧಿ ವಿಸ್ತರಣೆಯ ಕುರಿತು ಶಾಲಾ ಆಡಳಿತ ಮಂಡಳಿ ಹಾಗೂ ಸಾರಿಗೆ ಇಲಾಖೆ ಸರಿಯಾದ ಮಾಹಿತಿ ನೀಡಲಿಲ್ಲ. ಏಕಾಏಕಿ ಜೂ.29ರಂದು ಬಸ್‌ ಪಾಸ್‌ ಅವ ಧಿ ವಿಸ್ತರಿಸಲು ಜೂ.30 ಕೊನೆಯ ದಿನ ಎಂಬ ಮಾಹಿತಿ ದೊರೆತಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಗುರುವಾರ ಬಸ್‌ಪಾಸ್‌ ನವೀಕರಣಕ್ಕೆ ಧಾವಿಸಿದರು ಎಂದು ವಿದ್ಯಾರ್ಥಿಗಳು ದೂರಿದರು.

ವಿದ್ಯಾರ್ಥಿಗಳು ಕಳೆದ 2021ರ ಸೆಪ್ಟೆಂಬರ್‌ನಲ್ಲಿ 10 ತಿಂಗಳ ಅವಧಿಗೆ ಬಸ್‌ ಪಾಸ್‌ ಪಡೆದಿದ್ದರು. ಜೂ. 30 ಕೊನೆಯ ದಿನವಾಗಿತ್ತು. ವಿದ್ಯಾರ್ಥಿಗಳು ಬಸ್‌ ಪಾಸ್‌ ಅವಧಿ ವಿಸ್ತರಿಸಿಕೊಳ್ಳಲು ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ್ದರಿಂದ ಬಸ್‌ ನಿಲ್ದಾಣದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಜೂ. 28ರಂದು 50 ವಿದ್ಯಾರ್ಥಿಗಳು, ಜೂ. 29ರಂದು 200 ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ ನವೀಕರಿಸಿ ಕೊಡಲಾಗಿತ್ತು ಎಂದು ಬಸ್‌ ನಿಲ್ದಾಣದ ಅಧಿ ಕಾರಿಗಳು ಮಾಹಿತಿ ನೀಡಿದರು.

Advertisement

ಒಮ್ಮೆಲೆ ಧಾವಿಸಿದ್ದರಿಂದ ಗೊಂದಲ ಸೃಷ್ಟಿ

ಜೂ.25ರಂದು ಪದವಿ ಪೂರ್ವ, ಪದವಿ ಕಾಲೇಜು, ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2 ತಿಂಗಳ ಅವಧಿಗೆ ವಿಸ್ತರಿಸಲು ಆದೇಶಿಸಿತ್ತು. ಇಲ್ಲಿಯವರೆಗೆ ಸುಮ್ಮನಿದ್ದ ವಿದ್ಯಾರ್ಥಿಗಳು ಕಡೆಯ ದಿನವಾದ ಗುರುವಾರ ಒಮ್ಮೆಲೆ ಧಾವಿಸಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಕೂಡಲೇ ಮೇಲಧಿ ಕಾರಿಗಳಿಗೆ ಮಾಹಿತಿ ನೀಡಿದ ನಂತರ ಬಸ್‌ಪಾಸ್‌ ಪಡೆಯಲು ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ. ಮೊದಲಿನ ಪಾಸ್‌ನಲ್ಲೇ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಉದಯವಾಣಿಗೆ ಮಾಹಿತಿ ನೀಡಿದರು.

ಕಾಲೇಜಿನಲ್ಲಿ ಬಸ್‌ಪಾಸ್‌ ಅವಧಿ ವಿಸ್ತರಣೆ ಬಗ್ಗೆ ಮಾಹಿತಿ ಇರಲಿಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಬಸ್‌ಪಾಸ್‌ ಅವಧಿ ವಿಸ್ತರಣೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಗುರುವಾರ ಬೆಳಿಗ್ಗೆ ದ್ವಿತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಬಸ್‌ಪಾಸ್‌ನ್ನು ಎರಡು ತಿಂಗಳ ಅವಧಿಗೆ ವಿಸ್ತರಿಸಬಹುದೆಂದು ಹೇಳಿದ್ದರಿಂದ ಗೊಂದಲ ಉಂಟಾಯಿತು. – ಮನೋಜ್‌ ಕಮ್ಮಾರ, ಸರ್ಕಾರಿ ಡಿಪ್ಲೊಮಾ

ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜುಲೈ 3ರ ವರೆಗೆ ಹಳೆಯ ಬಸ್‌ಪಾಸ್‌ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ಮೂರು ದಿನದೊಳಗಾಗಿ ವಿದ್ಯಾರ್ಥಿಗಳು ಬಸ್‌ಪಾಸ್‌ ನವೀಕರಿಸಿಕೊಳ್ಳಬಹುದಾಗಿದೆ. –ಜಿ. ಶೀನಯ್ಯ, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next