Advertisement

ಶಿಕ್ಷಕಿ ಮುಂದುವರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ 

05:10 PM Sep 02, 2018 | |

ಅಮೀನಗಡ: ಸೂಳೇಭಾವಿ ಸರ್ಕಾರಿ ಪ್ರೌಢ ಶಾಲೆಯ ಹಿಂದಿ ಶಿಕ್ಷಕಿ ಡಾ| ಎಸ್‌.ಸಿ.ರಂಜಣಗಿ ಅವರನ್ನು ಹೆಚ್ಚುವರಿ ಶಿಕ್ಷಕಿ ಎಂದು ಗುರುತಿಸಿ ವರ್ಗಾವಣೆ ಮಾಡುವ ಕ್ರಮ ಖಂಡಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಶನಿವಾರ ಪ್ರತಿಭಟನೆ ನಡೆಸಿದರು. 

Advertisement

ಸೂಳೇಭಾವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 13 ವರ್ಷಗಳಿಂದ ಶಿಕ್ಷಕಿಯಾಗಿರುವ ಡಾ| ರಂಜಣಗಿ ಅವರನ್ನು ನಿಯಮಾನುಸಾರ ಹೆಚ್ಚುವರಿ ಶಿಕ್ಷಕಿ ಎಂದು ಗುರುತಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ನಮಗೆ ನಮ್ಮ ನೆಚ್ಚಿನ ಶಿಕ್ಷಕಿ ಎಸ್‌.ಸಿ.ರಂಜಣಗಿ ಅವರು ಬೇಕು ಎಂದು ಕಣ್ಣೀರಿಟ್ಟರು. ಅಧಿಕಾರಿಗಳು ಅವರನ್ನು ವರ್ಗಾವಣೆ ಮಾಡಬಾರದು. ಇದರಿಂದ ನಮ್ಮ ಕಲಿಕೆಗೆ ತೊಂದರೆಯಾಗುತ್ತದೆ. ಶಾಲೆಯಲ್ಲಿಯೇ ಮುಂದುವರಿಸುವಂತೆ ವಿದ್ಯಾರ್ಥಿಗಳು ಶಾಲೆಯ ಹೊರಭಾಗದಲ್ಲಿ ಕಣ್ಣೀರು ಹಾಕುತ್ತಾ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಮಾತನಾಡಿ, ಡಾ| ರಂಜಣಗಿ ಅವರು ಶಿಕ್ಷಣದ ಜತೆಯಲ್ಲಿ ಸಂಸ್ಕಾರ ಕೂಡಾ ಕಲಿಸಿದ್ದಾರೆ. ಮತ್ತು ಎಲ್ಲ ವಿಷಯಗಳ ಕುರಿತು ಮಾಹಿತಿ ಕೂಡಾ ನೀಡುತ್ತಾರೆ. ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದರು. ಇದೇ ವೇಳೆ ಕೆಲವು ವಿದ್ಯಾರ್ಥಿನಿಯರು ಶಿಕ್ಷಕಿ ಡಾ| ಎಸ್‌.ಸಿ.ರಂಜಣಗಿ ಅವರನ್ನು ತಬ್ಬಿ ಹಿಡಿದುಕೊಂಡು ಗೋಳಿಡುತ್ತಿದ್ದರು. ವಿದ್ಯಾರ್ಥಿಗಳ ದುಃಖಕ್ಕೆ ಶಿಕ್ಷಕಿಯೂ ದು:ಖೀಸುತ್ತಿರುವುದು, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಮಧ್ಯೆ ಇರುವ ಭಾವನಾತ್ಮಕ ಸಂಬಂಧಕ್ಕೆ ಸಾಕ್ಷಿಯಾಗಿತ್ತು. 

ಸ್ಥಳಕ್ಕೆ ಆಗಮಿಸಿದ ಯುವ ಮುಖಂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಬಿಸಿ ಉಪಾಧ್ಯಕ್ಷ ನಾಗೇಶ ಗಂಜಿಹಾಳ ಮಾತನಾಡಿ, ಡಾ| ಎಸ್‌.ಸಿ.ರಂಜಣಗಿ ಶಿಕ್ಷಕಿ ಅವರ ಹೆಚ್ಚುವರಿಯಾಗಿದ್ದು, ನಮಗೂ ಕೂಡಾ ನೋವು ಆಗಿದೆ. ಅವರನ್ನು ಹೆಚ್ಚುವರಿ ಶಿಕ್ಷಕಿಯಂದು ಬೇರೆಡೆ ವರ್ಗಾವಣೆ ಮಾಡುತ್ತಿದ್ದಾರೆ. ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಅವರು ಉತ್ತಮ ಪಾಠ ಮತ್ತು ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಎಲ್ಲರ ಹೃದಯ ಗೆದ್ದಿದ್ದಾರೆ. ನಮ್ಮ ಶಾಲೆಯಲ್ಲಿ 466 ವಿದ್ಯಾರ್ಥಿಗಳಿದ್ದಾರೆ ಎಂಟು ವಿಭಾಗಗಳಿಗೆ 2017-18 ಸಾಲಿನ ಮಕ್ಕಳ ಅಂಕಿ ಅಂಶಗಳನ್ನು ನೋಡಿ ಇಲಾಖೆ ಹೆಚ್ಚುವರಿ ಮಾಡಿದೆ. ಆದರೆ 2018-19 ಸಾಲಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಇದರಿಂದ ಹೆಚ್ಚುವರಿ ಮಾಡಲು ಆಗುವುದಿಲ್ಲ. ಮಾಡಿದರೆ ಅದರಿಂದ ಮಕ್ಕಳಿಗೆ ತೊಂದರೆಯಾಗಲಿದೆ. ಇದೇ ಶಾಲೆಯಲ್ಲಿ ಉಳಿಸಲು ಶಾಸಕರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಇಲ್ಲಿಯೇ ಉಳಿಸಲು ಪ್ರಯತ್ನ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಸ್ಥಳದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಮಹಾಂತಪ್ಪ ಭದ್ರಣ್ಣವರ, ಪ್ರೌಢಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ರಮೇಶ ದುತ್ತರಗಿ, ವಿದ್ಯಾರ್ಥಿಗಳಾದ ರಮೇಶ ಆಲೂರ, ಕಾವ್ಯ ಕಮತಗಿ,ಅಕ್ಷತಾ ಭದ್ರಿ,ವರ್ಷಾ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next