Advertisement

ವಾಡಿ: ಕಳಪೆ ಊಟ ವಸತಿ ಪ್ರಶ್ನಿಸಿ ಬೀದಿಗಿಳಿದ ವಿದ್ಯಾರ್ಥಿಗಳು

08:04 PM Aug 15, 2022 | Team Udayavani |

ವಾಡಿ: ಹುಳು ಹುಪ್ಪಡಿ ಕಲ್ಲು ಕಸ ತುಂಬಿದ ಅಕ್ಕಿಯಿಂದ ತಯಾರಿಸಿದ ಕಳಪೆ ಊಟ ಹಾಗೂ ಇತರ ಸಮಸ್ಯೆಗಳ ಸರಮಾಲೆಯನ್ನಿಡಿದುಕೊಂಡು ವಿದ್ಯಾರ್ಥಿಗಳು ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ ಪ್ರತಿಭಟಿಸಿದ ಘಟನೆ ನಡೆಯಿತು.

Advertisement

ಪಾಠದ ಕೋಣೆ ಮತ್ತು ವಸತಿ ಕೋಣೆಗಳಿಗೆ ಬಾಗಿಲುಗಳಿಲ್ಲ. ಶೌಚಾಲಯ ಶುಚಿಗೊಳಿಸುವವರಿಲ್ಲ. ಗೋಡೆಗಳಿಂದ ನೀರಿಳಿದು ಮಲಗಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಸಮಸ್ಯೆ ,ಫ್ಯಾನ್ ವ್ಯವಸ್ಥೆ ಇಲ್ಲ. ಸಮಸ್ಯೆಗಳು ಗಮನಕ್ಕೆ ತಂದರೆ ವಾರ್ಡನ್ ಹೆದರಿಸುತ್ತಾರೆ. ಅಂಕಗಳು ಕಡಿಮೆ ಕೊಟ್ಟು ನಿಮಗೆ ಪಾಠ ಕಲಿಸುತ್ತೇನೆ ಎಂದು ಹೆದರಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬಳಿರಾಮ ಚೌಕ್ ಹತ್ತಿರ ಇರುವ ಇಂದಿರಾಗಾಂಧಿ ವಸತಿ ಶಾಲೆಯ ಸುಮಾರು 160 ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಬಾಲಕ ಮತ್ತು ಬಾಲಕಿಯರು ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ ಸ್ವಾತಂತ್ರೋತ್ಸವದ ದಿನವೇ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದನ್ನು ಕಂಡು ಸ್ಥಳೀಯರು ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದ್ದರು.

ನಾವು ಮಲಗುವ ಖಾಸಗಿ ಕಟ್ಟಡದ ವಿಶ್ರಾಂತಿ ಕೋಣೆಗಳಿಗೆ ಬಾಗಿಲಿಲ್ಲ. ಶೌಚಾಲಯಕ್ಕೂ ಬಾಗಿಲು ಅಳವಡಿಸಿಲ್ಲ. ರಾತ್ರಿ ಬೆಳಕಿನ ವ್ಯವಸ್ಥೆಯಿಲ್ಲ. ಭಯದಲ್ಲೇ ಮಲಗುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಕಷ್ಟ ಹೇಳಿಕೊಂಡರೆ, ಊಟ ಸೇರದೆ ನಮ್ಮ ಆರೋಗ್ಯ ಹದಗೆಡುತ್ತಿದೆ. ಮಲಗುವ ಕೋಣೆಗಳು ಸರಿಯಾಗಿಲ್ಲ. ಸ್ನಾನ ಮತ್ತು ಶೌಚಾಲಯಗಳ ನೀರು ಹರಿದು ಪಾಠದ ಕೋಣೆಗಳತ್ತ ಹರಿದು ದುರ್ವಾಸನೆ ಹಬ್ಬುತ್ತದೆ. ಇಂತಹ ಕೆಟ್ಟ ಪರಸ್ಥಿತಿಯಲ್ಲಿ ಅಭ್ಯಾಸ ಅಸಹ್ಯ ಎನ್ನಿಸುತ್ತಿದೆ. ಹುಡಗರು ಮಲಗುವ ಹಾಲ್‌ನಲ್ಲಿ ವಿಪರೀತ ಕಾಂಕ್ರೀಟ್ ಧೂಳಿದೆ. ಉಸಿಕಿನ ಹರಳುಗಳ ಮೇಲೆ ಮಲಗಬೇಕು. ಉತ್ತಮ ಸೌಲಭ್ಯವಿದೆ ಎಂಬ ಕಾರಣಕ್ಕೆ ನಾವಿಲ್ಲಿಗೆ ಬಂದಿದ್ದೇವೆ. ಆದರೆ ಇಲ್ಲಿ ನಮಗೆ ಪ್ರತಿದಿನವೂ ನರಕದ ದರ್ಶನವಾಗುತ್ತಿದೆ. ನಮ್ಮ ಕಷ್ಟ ಯಾರಿಗೆ ಹೇಳಬೇಕು ಅರ್ಥವಾಗುತ್ತಿಲ್ಲ. ಕರದಾಳದಲ್ಲಿ ಸರಕಾರದ ಹೊಸ ಕಟ್ಟಡ ಸಿದ್ಧವಾಗಿದೆ ಅಲ್ಲಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಕಳೆದ ಐದಾರು ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ ನಮಗೆ ಸಂಕಷ್ಟದಿಂದ ಪಾರು ಮಾಡುವವರು ಯಾರೂ ಇಲ್ಲ. ಬೇಸತ್ತು ಬೀದಿಗೆ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಸಾರ್ವಜನಿಕವಾಗಿ ತಮ್ಮ ಗೋಳು ಹೇಳಿಕೊಂಡರು.

ಪಿಎಸ್‌ಐ ಸಂಧಾನ: ಮಕ್ಕಳ ಈ ದಿಢೀರ್ ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್‌ಐ ಮಹಾಂತೇಶ ಜಿ.ಪಾಟೀಲ, ಸಮಸ್ಯೆಗಳನ್ನು ಆಲಿಸಿದರು. ಹೋರಾಟಕ್ಕೆ ಮುಂದಾದ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಈ ಕುರಿತು ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಸಮಸ್ಯೆ ಮುಂದುವರೆದರೆ ನಮ್ಮ ಹೋರಾಟವೂ ಮುಂದುವರೆಯುತ್ತದೆ ಎಂದು ಮಕ್ಕಳು ಇದೇ ವೇಳೆ ಪೊಲೀಸ್ ಅಧಿಕಾರಿಗೆ ಪ್ರತಿಕ್ರಿಯಿಸಿದ ಪ್ರಸಂಗ ನಡೆಯಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next