ಹುಮನಾಬಾದ: ಸರ್ಕಾರದ ವಿವಿಧ ಯೋಜನೆಗಳಿಗೆ ಶಾಲಾ ಮಕ್ಕಳ ಹಾಜರಾತಿ ಲಭ್ಯವಾಗುತ್ತಿದ್ದು, ಲಸಿಕೆ ಪಡೆದುಕೊಳ್ಳಲು ಮಾತ್ರ ಮಕ್ಕಳ ಹಾಜರಾತಿ ಕೊರತೆ ಉಂಟಾಗುತ್ತದೆ. ಇದರಿಂದ ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತಕ್ಕೆ ತಲೆನೋವು ಉಂಟು ಮಾಡಿದ್ದು, ಅನೇಕ ಅನುಮಾನಕ್ಕೆ ಆಸ್ಪದ ನೀಡುತ್ತಿದೆ.
15 ರಿಂದ 18 ವರ್ಷದ ಮಕ್ಕಳಿಗೆ ಕೊವೀಡ್ ಲಸಿಕೆ ಹಾಕುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತ ನಿರಂತರ ಪ್ರಯತ್ನ ನಡೆಸುತ್ತಿದ್ದರು ಕೂಡ ಸೂಕ್ತ ಫಲ ದೊರೆಯುತ್ತಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಶಾಲೆಗಳಿಗೆ ಭೇಟಿನೀಡಿದ ಸಂದರ್ಭದಲ್ಲಿ ಮಕ್ಕಳ ಹಾಜರಾತಿ ಕೊರತೆ ಇರುವುದು ಗೊತ್ತಾಗುತ್ತಿದ್ದು, ಹಾಗಾದರೆ ಮಕ್ಕಳು ಶಾಲೆಗೆ ಬರುತ್ತಿಲ್ವೆ ಎಂಬ ಅನುಮಾನ ಶುರುವಾಗಿದೆ.
ಯಾವ ಕಾರಣಕ್ಕೆ ಮಕ್ಕಳ ಹಾಜರಾತಿ ಕೊರತೆ ಇದೆ? ಲಸಿಕೆಗೆ ಹೆದರಿ ಮಕ್ಕಳು ಬರುತ್ತಿಲ್ವಾ ಎಂದು ಇದರ ಮೂಲ ಹುಡುಕುವ ನಿಟ್ಟಿನಲ್ಲಿ ಇದೀಗ ತಹಸೀಲ್ದಾರ ಡಾ। ಪ್ರದೀಪಕುಮಾರ ಹಿರೇಮಠ ನೇತೃತ್ವದ ಅಧಿಕಾರಿಗಳ ತಂಡ ಬುಧುವಾರ ಪಟ್ಟಣದ ಬಿ.ಆರ್.ಸಿ ಕಚೇರಿಯಲ್ಲಿ ಸಭೆ ನಡೆಸಿ ಖುದ್ದು ಶಾಲೆಗಳ ಭೇಟಿಗೆ ಮುಂದಾಗಿದ್ದಾರೆ.
ಅನೇಕ ಅನುಮಾನಗಳು: ವಿವಿಧ ಶಾಲೆಗಳಲ್ಲಿ ನಿಜವಾಗಿಯೂ ಮಕ್ಕಳ ದಾಖಲೆ ಸರಿಯಾಗಿದ್ದರೆ ಯಾವ ಕಾರಣಕ್ಕೆ ಮಕ್ಕಳ ಶಾಲೆಗಳಲ್ಲಿ ಲಭ್ಯವಾಗುತ್ತಿಲ್ಲ. ಬಿಸಿ ಊಟಕ್ಕೆ ಇರುವ ಹಾಜರಾತಿ ಮಕ್ಕಳ ಲಸಿಕೆಪಡೆದುಕೊಳ್ಳುವಲ್ಲಿ ಯಾಕೆ ಇಲ್ಲ? ಶಾಲೆಗೆ ಹಾಜರಾಗದ ಮಕ್ಕಳ ಮನೆಗಳಿಗೆ ತೆರಳಿ ಪಾಲಕರೊಂದಿಗೆ ಮಾತನಾಡಿ ಶಾಲಾ ಮುಖ್ಯ ಶಿಕ್ಷಕರು ಲಸಿಕೆ ಕೊಡಿಸುವ ಕಾರ್ಯ ಯಾಕೆ ಮಾಡುತ್ತಿಲ್ಲ? ಎಂದು ಹತ್ತಾರು ಪ್ರಶ್ನೆಗಳು ಇದೀಗ ಅಧಿಕಾರಿಗಳಿಗೆ ಉದ್ಭವಿಸುತ್ತಿವೆ.
ಲಸಿಕ ಕೊಡಿಸಿ-ಕಾರಣ ಪತ್ತೆ: ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ ಡಾ। ಪ್ರದೀಪಕುಮಾರ ಹಿರೇಮಠ, ಶಾಲೆಗೆ ಹಾಜರಾಗದ ಮಕ್ಕಳನ್ನು ಪತ್ತೆ ಹಚ್ಚಿ ಮೊದಲು ಅವರಿಗೆ ಲಸಿಕೆ ನೀಡುವ ಕೆಲಸ ಮಾಡಲಾಗುವುದು. ಮಕ್ಕಳ ಪಾಲಕರು ಖುದ್ದು ಮುಂದೆ ಬಂದು ಮಕ್ಕಳಿಗೆ ಲಸಿಕೆ ಕೊಡಿಸಬೇಕು. ಯಾವುದೇ ತಪ್ಪು ಸಂದೇಶಗಳಿಗೆ ಒಳಗಾಗಬಾರದು. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮುಖ್ಯವಾಗಿದ್ದು, ಶಿಕ್ಷಣ ಇಲಾಖೆ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಅಲ್ಲದೆ, ವಿವಿಧ ಆರೋಪಗಳ ಕುರಿತು ಕೂಡ ಪತ್ತೆ ಹಚ್ಚುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಶಾಲೆಗಳಿಗೆ ಭೇಟಿ: ತಹಸೀಲ್ದಾರ್ ಡಾ। ಪ್ರದೀಪಕುಮಾರ ಹಿರೇಮಠ, ತಾಪಂ ಇಒ ಮುರಗೆಪ್ಪ, ನೋಡಲ್ ಅಧಿಕಾರಿ ಡಾ। ಗೋವಿಂದ್, ಕ್ಷೇತ್ರಶಿಕ್ಷಣಾಧಿಕಾರಿ ಶಿವಗೊಂಡಪ್ಪ ಸೇರಿದಂತೆ ಇತರೆ ಅಧಿಕಾರಿಗಳ ತಂಡ ವಿವಿಧ ಶಾಲೆಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇರುವುದು ಕೂಡ ಅಧಿಕಾರಿಗಳಿಗೆ ಕಂಡು ಬಂತು. ಮಕ್ಕಳು ದಿನಾಲು ಶಾಲೆಗೆ ಬರುತ್ತಿಲ್ಲ ಎಂದು ಮುಖ್ಯ ಶಿಕ್ಷಕರು ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಹಾಗಾದರೇ, ಮಕ್ಕಳ ವಿಳಾಸಪಡೆದು ಮಕ್ಕಳ ಮನೆಗಳಿಗೆ ಭೇಟಿನೀಡಿ ಲಸಿಕೆ ಹಾಕಿ, ವಿವಿಧ ವ್ಯವಸ್ತೆಗಳು ಮಾಡಿಕೊಡಲಾಗುವುದ್ದು, ಸಾಧನೆಯ ವರದಿ ನೀಡುವಂತೆ ಶಿಕ್ಷಕರಿಗೆ ತಹಸೀಲ್ದಾರ ಸೂಚಿಸಿದ ಪ್ರಂಸಗ ನಡೆಯಿತು.
-ದುರ್ಯೋಧನ ಹೂಗಾರ