Advertisement

ವಿದ್ಯಾರ್ಥಿಗಳಿಗೆ ಜ್ಞಾನವೃದ್ಧಿ ಕಾತರತೆ ಅವಶ್ಯ: ಪ್ರೊ|ಕೇಶವ ರಾಜಪುರೆ

02:50 PM Jul 22, 2022 | Team Udayavani |

ಹುಬ್ಬಳ್ಳಿ: ವಿದ್ಯಾರ್ಥಿಗಳಲ್ಲಿ ಜ್ಞಾನ ವೃದ್ಧಿಸಿಕೊಳ್ಳುವ ಕಾತುರತೆ ಇರಬೇಕು. ಪ್ರಶ್ನೆ ಕೇಳುವ ಮನೋಭಾವ ಹೊಂದಿರಬೇಕು. ಅಂದಾಗಲೇ ಹೊಸ ಹೊಸ ವಿಚಾರ, ಮಾಹಿತಿ ಪಡೆದುಕೊಳ್ಳಲು ಸಾಧ್ಯವೆಂದು ಕೊಲ್ಹಾಪುರ ಶಿವಾಜಿ ವಿವಿಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಕೇಶವ ರಾಜಪುರೆ ಹೇಳಿದರು.

Advertisement

ವಿದ್ಯಾನಗರದ ಶ್ರೀ ಕಾಡಸಿದ್ದೇಶ್ವರ ಕಲಾ ಕಾಲೇಜ್‌ ಮತ್ತು ಎಚ್‌.ಎಸ್‌. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಸಭಾಭವನದಲ್ಲಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ಕೇಂದ್ರ ಸರಕಾರದ ವಿಜ್ಞಾನ ಪ್ರಸಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಗುರುವಾರದಿಂದ ಆಯೋಜಿಸಲಾದ ಶೂನ್ಯ ನೆರಳು ದಿನ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಯುವಜನತೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು. ಇಂತಹ ಕಾರ್ಯಾಗಾರಗಳು ಯುವ ಉಪನ್ಯಾಸಕರಿಗೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗಲಿವೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ವೈಜ್ಞಾನಿಕ ಚಿಂತನೆ, ಪ್ರಜ್ಞೆ ಮೂಡಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಸಂಶೋಧನೆಗಳು ಮಾನವನ ಏಳ್ಗೆಗೆ ಮೀಸಲಾಗಿರಬೇಕು. ಕಂಪ್ಯೂಟರ್‌ ವಿಜ್ಞಾನ, ಅಟೊಮೇಶನ್‌, ಕೃತಕ ಬುದ್ಧಿಮತ್ತೆ, ಸಂವಹನ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಗಳು ನಡೆಯಬೇಕಾಗಿದೆ ಎಂದರು.

ಭೌತಶಾಸ್ತ್ರ ಕಠಿಣ, ಕಷ್ಟದಾಯಕ ವಿಷಯವಲ್ಲ. ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿಸಬೇಕು. ಆದರೆ ಕೆಲ ಶಿಕ್ಷಕರು ಈ ವಿಷಯ ಹೇಳಿಕೊಡುವಲ್ಲಿ ಎಡವಿದ್ದಾರೆ. ವಿಜ್ಞಾನ ಕಾರ್ಯಾಗಾರಗಳ ಮೂಲಕ ನಿಮ್ಮನ್ನೆ ನೀವು ಪ್ರೇರೇಪಿಸಿಕೊಳ್ಳಬೇಕು. ಹಲವು ಸಮಸ್ಯೆಗಳ ಬಗ್ಗೆ ಆಲೋಚನೆ ಮಾಡಿ ಪರಿಹಾರ ಕಂಡುಕೊಳ್ಳಿ. ನೂತನ ಶಿಕ್ಷಣ ನೀತಿ ಸಂಶೋಧನೆಗೆ ಒತ್ತು ನೀಡಿದೆ. ಮೂಲ ಸಂಶೋಧನೆಯು ಜ್ಞಾನ ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆಯೇ ಸಂಶೋಧನೆ ಮಾಡುವುದು ಉತ್ತಮ ಎಂದು ಹೇಳಿದರು.

ಕಾರ್ಯಾಗಾರ ಸಂಯೋಜಕ ಕೊಳ್ಳೆಗಾಲ ಶರ್ಮಾ ಮಾತನಾಡಿ, ಕೇಂದ್ರ ಸರಕಾರದ ಪ್ರಯತ್ನದಿಂದ ವಿಜ್ಞಾನವನ್ನು ಜನರಿಗೆ ಕನ್ನಡ ಭಾಷೆಯಲ್ಲಿ ಎಲ್ಲ ವಿಧದಲ್ಲಿ ಹೇಗೆ ತಲುಪಿಸಬಹುದು ಎಂಬುದನ್ನು “ಕುತೂಹಲಿ’ ಮೂಲಕ ತಿಳಿಸಲಾಗುತ್ತಿದೆ. ಕುತೂಹಲಿ ಮಾಸಿಕ ವಿಜ್ಞಾನ ಪತ್ರಿಕೆ ಹೊರತರಲಾಗಿದೆ. ಇದು ಎಲ್ಲರಿಗೂ ಉಚಿತವಾಗಿದ್ದು, ವಿಜ್ಞಾನದ ಇತ್ತೀಚಿನ ವಿಷಯಗಳ ಬಗ್ಗೆ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ. ವಿಜ್ಞಾನ ನಾಟಕೋತ್ಸವ ಪ್ರದರ್ಶಿಸಲಾಗುತ್ತಿದೆ ಎಂದರು.

Advertisement

ಕಾಲೇಜಿನ ಪ್ರಾಚಾರ್ಯೆ ಡಾ| ಉಮಾ ನೇರ್ಲೆ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಮತ್ತು ಎಸ್‌ ವಿವೈಎಂ ಸಂಸ್ಥೆಯ ಯೋಜನಾಧಿಕಾರಿ ಪ್ರವೀಣ ಕುಮಾರ ಸಯ್ಯಪ್ಪರಾಜು ಅವರು, ವರ್ಷದಲ್ಲಿ ಮೇ ಮತ್ತು ಆಗಸ್ಟ್‌ ತಿಂಗಳಲ್ಲಿ ಹೀಗೆ ಎರಡು ಬಾರಿ ಶೂನ್ಯ ನೆರಳು ದಿನ ಕಾಣಬಹುದು. ಆ. 10 ರಂದು ಮಧ್ಯಾಹ್ನ 12:35 ಗಂಟೆಗೆ ಶೂನ್ಯ ನೆರಳು ಗೋಚರಿಸಲಿದೆ ಎಂದು ಶೂನ್ಯ ನೆರಳು ದಿನದ ಮಹತ್ವ ಕುರಿತು ಪಿಪಿಟಿ ಮೂಲಕ ವಿವರಿಸಿದರು.

ಬೆಂಗಳೂರಿನ ಐಐಎದ ನಿವೃತ್ತ ಮುಖ್ಯ ವಿಜ್ಞಾನಿ ಡಾ| ಸಬ್ಯಸಾಚಿ ಚಟ್ಟರ್ಜಿ ಅವರು ಕ್ಯಾಲೆಂಡರ್‌ ಗಳ ತಯಾರಿಯ ಇತಿಹಾಸ ಕುರಿತು ಉಪನ್ಯಾಸ ನೀಡಿದರು. ಶುಕ್ರವಾರ ಐಎಸ್‌ಟಿಆರ್‌ಎಸಿಯ ವಿಜ್ಞಾನಿ ಡಾ| ಶ್ರೀನಾಥ ಆರ್‌. ಅವರು ಖಗೋಳ ಭೌತವಿಜ್ಞಾನ ಕುರಿತು ಉಪನ್ಯಾಸ ನೀಡಲಿದ್ದಾರೆ. ಕವಿವಿ ಮತ್ತು ರಾಣಿ ಚೆನ್ನಮ್ಮ ವಿವಿ ವ್ಯಾಪ್ತಿಯ ಶಾಲೆ-ಕಾಲೇಜುಗಳ ಅಂದಾಜು 100 ವಿಜ್ಞಾನ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿ ಶ್ರೀಹರಿ ಪ್ರಾರ್ಥಿಸಿದರು. ಕಾರ್ಯಾಗಾರದ ಸಂಚಾಲಕ ಡಾ| ಸಿ.ಎಸ್‌. ಹಿರೇಮಠ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಜಯಶ್ರೀ ಬಿರಾದಾರ ಪರಿಚಯಿಸಿದರು. ಕೆ.ಪಿ. ರೋಹಿಣಿ ನಿರೂಪಿಸಿದರು. ಲತಾ ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next