Advertisement

ಪ್ರವೇಶಕ್ಕೆ ವಿದ್ಯಾರ್ಥಿಗಳ ಸಾಲು ಹಾಸ್ಟೆಲ್ನಲ್ಲಿ ಜಾಗಕ್ಕೆ ಬರ..!

09:20 AM Jun 16, 2019 | mahesh |

ಸುಳ್ಯ: ಪ್ರವೇಶಾತಿಗೆ ವಿದ್ಯಾರ್ಥಿ ಗಳಿದ್ದರೂ ಎಲ್ಲರಿಗೂ ಅವಕಾಶ ನೀಡಲು ಸರಕಾರಿ ಹಾಸ್ಟೆಲ್ಗಳಲ್ಲಿ ಸ್ಥಳಾವಕಾಶದ ಕೊರತೆ ಇರುವ ಅಂಶ ಪ.ಜಾತಿ/ಪಂಗಡ ಕುಂದುಕೊರತೆ ಸಭೆಯಲ್ಲಿ ಬೆಳಕಿಗೆ ಬಂದಿದೆ.

Advertisement

ತಾಲೂಕು ಮಟ್ಟದ ಪ. ಜಾತಿ/ಪಂಗಡ ಕುಂದು ಕೊರತೆ ಸಮಿತಿ ಸಭೆ ತಹಶೀಲ್ದಾರ್‌ ಕುಂಞಿ ಅಹ್ಮದ್‌ ಅವರ ಅಧ್ಯಕ್ಷತೆ ಯಲ್ಲಿ ಶನಿವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ವಿಷಯ ಪ್ರಸ್ತಾವಿಸಿದ ದಲಿತ ಮುಂದಾಳು ನಂದರಾಜ ಸಂಕೇಶ, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಅನೇಕ ವಿದ್ಯಾರ್ಥಿಗಳಿಗೆ ಈ ಬಾರಿ ಹಾಸ್ಟೆಲ್ನಲ್ಲಿ ಪ್ರವೇಶ ಸಿಕ್ಕಿಲ್ಲ. ಸ್ಥಳೀಯರನ್ನು ಕಡೆಗಣಿಸಿ ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದರು. ಇದಕ್ಕೆ ಇತರೆ ದಲಿತ ಮುಖಂಡರು ಧ್ವನಿಗೂಡಿಸಿದರು. ಈ ವಿಚಾರ ಕೆಲ ಹೊತ್ತು ಚರ್ಚೆಗೆ ವೇದಿಕೆ ಕಲ್ಪಿಸಿತ್ತು.

ಸಮಾಜ ಕಲ್ಯಾಣ ಇಲಾಖೆ ಸಹಾಯಕಿ ನಿರ್ದೇ ಶಕಿ ಲಕ್ಷ್ಮೀದೇವಿ ಉತ್ತರಿಸಿ, ತಾಲೂಕಿನಲ್ಲಿ 11 ಹಾಸ್ಟೆಲ್ಗಳಿವೆ. ಸರಕಾರ ನಿಗದಿ ಪಡಿಸಿದ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹು ದಷ್ಟೆ. ಮೆಟ್ರಿಕ್‌ ಅನಂತರದ ಹಾಸ್ಟೆಲ್ಗಳಲ್ಲಿ ಸ್ಥಳದ ಅಭಾವ ಇಲ್ಲ.

ಆದರೆ ಮೆಟ್ರಿಕ್‌ ಪೂರ್ವ ಹಾಸ್ಟೆಲ್ಗಳಲ್ಲಿ ಬೇಡಿಕೆಕ್ಕಿಂತ ಅಧಿಕ ಅರ್ಜಿ ಬರುತ್ತಿದೆ. ಪರಿಶಿಷ್ಟ ಜಾತಿ ವಿಭಾಗಕ್ಕೆ ಸೇರಿದ ಒಂದು ಹಾಸ್ಟೆಲ್ ಮಾತ್ರ ಇದೆ. ಹಾಗಾಗಿ ಈಗಿರುವ ಹಾಸ್ಟೆಲ್ ಮೆಲ್ದರ್ಜೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊರ ಜಿಲ್ಲೆಯ ಓರ್ವ ವಿದ್ಯಾರ್ಥಿಗೆ ಅವಕಾಶ ನೀಡಿದ್ದು, ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದವರು ಉತ್ತರಿಸಿದರು.

Advertisement

ಪ್ರವೇಶಾತಿ ಸಂಖ್ಯೆ ಇಳಿಸಿದ್ದೇಕೆ?
ಈ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನಂದರಾಜ ಸಂಕೇಶ, ಕೊಪ್ಪಳ ಜಿಲ್ಲೆಯ 10 ವಿದ್ಯಾರ್ಥಿಗಳನ್ನು ಸೇರಿಸಲಾಗಿದೆ. ಮರ್ಕಂಜ ಭಾಗದ ಪರಿಶಿಷ್ಟ ಜಾತಿಯ ಮೂವರು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಕಳೆದ ಬಾರಿ 150 ಮಂದಿಗೆ ಪ್ರವೇಶ ಇತ್ತು. ಈ ಬಾರಿ 75ಕ್ಕೆ ಇಳಿಸಿದ್ದು ಏಕೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿ, ಹೊರ ಜಿಲ್ಲೆಯ ಓರ್ವ ವಿದ್ಯಾರ್ಥಿಗೆ ಮಾತ್ರ ಅವಕಾಶ ನೀಡಿರುವ ಬಗ್ಗೆ ದಾಖಲೆ ನೀಡಲಾಗುವುದು. ಹಾಸ್ಟೆಲ್ ವಿದ್ಯಾರ್ಥಿಗಳ ಸಂಖ್ಯೆ ಸರಕಾರ ಹಂತದಲ್ಲಿ ನಿಗದಿಯಾಗುತ್ತದೆ ಹೊರತು ಸ್ಥಳೀಯ ಮಟ್ಟದಲ್ಲಿ ಅಲ್ಲ ಎಂದರು.

ಚರ್ಚೆ ಆಲಿಸಿದ ತಹಶೀಲ್ದಾರ್‌ ಕುಂಞಿ ಅಹ್ಮದ್‌, ಪ್ರವೇಶ ಬಯಸಿದ ಎಲ್ಲರಿಗೂ ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಹಾಸ್ಟೆಲ್ಗಳ ಸಾಮರ್ಥ್ಯ ಸಂಖ್ಯೆ ಪರಿಗಣಿಸಲಾಗುವುದು ಮೇಲ್ದರ್ಜೆಗೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

75 ಲಕ್ಷ ರೂ. ಎಲ್ಲಿ ಹೋಯಿತು?
ಸುಳ್ಯ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್‌ ಭವನಕ್ಕೆ ಮೊದಲ ಹಂತದಲ್ಲಿ 75 ಲಕ್ಷ ರೂ. ಬಿಡುಗಡೆಗೊಂಡು ಕಾಮಗಾರಿ ಆಗಿದೆ. ಎರಡನೇ ಹಂತದಲ್ಲಿ 25 ಲಕ್ಷ ರೂ. ಅನುದಾನ ಬಿಡುಗಡೆಗೊಂಡು ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಸಮಾಜ ಕಲ್ಯಾಣ ಇಲಾಧಿಕಾರಿ ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆನಂದ ಬೆಳ್ಳಾರೆ, ಅಚ್ಯುತ ಮಲ್ಕಜೆ, ಶೀನಪ್ಪ ಬಯಂಬು, ನಂದರಾಜ ಮೊದಲಾದವರು, ಮೊದಲು ಹಂತದಲ್ಲಿ ಬಿಡುಗಡೆಗೊಂಡಿರುವ 75 ಲಕ್ಷ ರೂ. ಹಣ ಕಾಮಗಾರಿಗೆ ಖರ್ಚಾಗಿಲ್ಲ. ಜಿ.ಪಂ. ಅಧ್ಯಕ್ಷರು ಪರಿಶೀಲನೆ ಸಂದರ್ಭದಲ್ಲಿಯೂ ತನಿಖೆಗೆ ಆಗ್ರಹಿಸಿದ್ದರು. ಈ ಹಣದಲ್ಲಿ ಭಾರೀ ಗೋಲ್ಮಾಲ್ ಆಗಿದೆ ಎಂದು ಆರೋಪಿಸಿದರು.

ನಿರ್ಮಿತ ಕೇಂದ್ರದ ಅಧಿಕಾರಿ ಉತ್ತರಿಸಿ, 75 ಲಕ್ಷ ರೂ.ನಲ್ಲಿ 64 ಲ.ರೂ. ಖರ್ಚಾಗಿದೆ. ಉಳಿದ ಹಣ ಇದೆ. ಅವ್ಯವಹಾರ ಆಗಿಲ್ಲ ಎಂದು ಸಮರ್ಥಿಸಿ ಕೊಂಡರು. ಖರ್ಚಾದ ಹಣದ ಅರ್ಧದಷ್ಟು ಕೆಲಸ ಆಗಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿ ಅನುಷ್ಠಾನದ ಕುರಿತು ಸಂಪೂರ್ಣ ವರದಿ ನೀಡುವಂತೆ ತಹಶೀಲ್ದಾರ್‌ ಅವರು ನಿರ್ಮಿತಿ ಕೇಂದ್ರದ ಎಂಜಿನಿಯರ್‌ಗೆ ಸೂಚಿಸಿದರು.

ವಿವಿಧ ಕುಂದುಕೊರತೆ ಪ್ರಸ್ತಾವ
ಪೆರುವಾಜೆ ಪದವಿ ಕಾಲೇಜು ಬಳಿ ಹಾಸ್ಟೆಲ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಪರಿಶಿಷ್ಟ ಜಾತಿ-ಪಂಗಡದವರಿಗೆ ಉದ್ಯೋಗಕ್ಕಾಗಿ ರಿಯಾಯಿತಿ ನೆಲೆಯಲ್ಲಿ ಬ್ಯಾಂಕ್‌ ಸಾಲ ಒದಗಿಸಬೇಕು ಎಂದು ಕೆ.ಕೆ.ನಾಯ್ಕ, ಅಂಗವಿಕಲರ ಕಲ್ಯಾಣಕ್ಕೆ ಗ್ರಾ.ಪಂ.ನಲ್ಲಿ ಫಂಡ್‌ ಮೀಸಲಿಡಬೇಕು ಎಂದು ಪುಟ್ಟಣ್ಣ ವಲಿಕಜೆ, ಅರಣ್ಯ ಸನಿಹದಲ್ಲಿ ವಾಸಿಸುತ್ತಿರುವ ಮಲೆಕುಡಿಯ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಬಗ್ಗೆ ತೇಜಕುಮಾರ್‌, ಡಿಸಿ ಮನ್ನಾ ಜಮೀನನ್ನು ಗ್ರಾಮ ಪಂಚಾಯತ್‌ಗೆ ನೀಡದೆ ದಲಿತರಿಗೆ ನೀಡುವಂತೆ ಹಾಗೂ ಮೊಗ್ರ ಬಳಿಯ ಎಡೋಣಿ ಹೊಳೆಗೆ ಅಡಿಕೆ ಪಾಲ ನಿರ್ಮಿಸುವಂತೆ ಅಚ್ಯುತ ಮಲ್ಕಜೆ, ಪಾಟಾಜೆ ಬಳಿ ತಾ.ಪಂ. ರಸ್ತೆ ನಿರ್ಮಾಣದ ಸಂದರ್ಭ ಕೆರೆ ಮುಚ್ಚಿದ್ದು ಅದನ್ನು ತೆರವು ಮಾಡುವಂತೆ ಸುಂದರ ಪಾಟಾಜೆ, ಪ.ಜಾತಿಗೆ ಸಂಬಂಧಿಸಿ ಒಂದೇ ನಿಗಮ ಇರಬೇಕು ಎಂದು ದಾಸಪ್ಪ ಅಜ್ಜಾವರ, ಸಾಕಷ್ಟು ಆಸ್ತಿ ಹೊಂದಿರುವ ಓರ್ವರಿಗೆ 94ಸಿ ಅಡಿ ಹಕ್ಕುಪತ್ರ ನೀಡಿದ್ದು ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಿದಾಗ ನೀಡಿಲ್ಲ ಎನ್ನುವ ಉತ್ತರ ಬಂದಿರುವ ಬಗ್ಗೆ ಆನಂದ ಬೆಳ್ಳಾರೆ ಮೊದಲಾದವರು ವಿಷಯ ಪ್ರಸ್ತಾಪಿಸಿದರು.

ಆನಂದ ಬೆಳ್ಳಾರೆ, ತೇಜಕುಮಾರ್‌, ಸರಸ್ವತಿ ಬೊಳಿಯಮಜಲು, ಸಂಜಯ್‌ ಕುಮಾರ್‌, ದಾಸಪ್ಪ ಮತ್ತಿತರರು, ಎಸ್‌.ಪಿ. ಕಚೇರಿಯ ಸಭೆಯಲ್ಲಿ ನಡೆಯುವ ಸಭೆಯ ಮಾಹಿತಿ ನಮಗೆ ಸರಿಯಾಗಿ ಬರುತ್ತಿದೆ. ಆದರೆ ಇಲ್ಲಿ ಬರುತ್ತಿಲ್ಲ. ಕೊನೆ ಕ್ಷಣದಲ್ಲಿ ಹೇಳಿದರೆ ನಾವು ಹೇಗೆ ತಯಾರಾಗಿ ಬರುವುದು ಎಂದು ಪ್ರಶ್ನಿಸಿದರು. ಸಭೆ ಮಾಹಿತಿ ಇಮೈಲ್ ಮೂಲಕ ಕಳುಹಿಸಿ, ವಾಟ್ಸಾಪ್‌ ಗ್ರೂಪ್‌ ಕೂಡಾ ರಚಿಸಿ ಮಾಹಿತಿ ನೀಡಿ ಎಂದು ತಹಶೀಲ್ದಾರ್‌ ಸಮಾಜಕಲ್ಯಾಣಾಧಿಕಾರಿಗೆ ಸೂಚಿಸಿದರು. ಬಳಿಕ ಸಭೆ ಮುಂದುವರಿಯಿತು.

ಆಕ್ಷೇಪ: ಮನವೊಲಿಕೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆಗೆ ದಲಿತ ಮುಖಂಡರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಮುಖಂಡರು ಸಭೆಯ ಆರಂಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು. ದಲಿತ ಮುಖಂಡರಾದ ನಾರಾಯಣ ಜಟ್ಟಿಪಳ್ಳ, ಸರಸ್ವತಿ ಬೊಳಿಯಮಜಲು ಸಭಾಂಗಣದ ಹೊರಗೆ ನಿಂತಿದ್ದರು. ಸಭೆಯಲ್ಲಿದ್ದ ಅಚ್ಯುತ ಮಲ್ಕಜೆ ವಿಷಯ ಪ್ರಸ್ತಾವಿಸಿ ಇಂದಿನ ಸಭೆಯ ನೋಟಿಸು ಎಲ್ಲ ಮುಖಂಡರಿಗೂ ಹೋಗಿಲ್ಲ. ಹಾಗಾಗಿ ಅವರು ಹೊರಗಡೆ ನಿಂತಿದ್ದಾರೆ. ವಿಳಾಸ ಕೂಡ ತಪ್ಪಾಗಿ ಮುದ್ರಿತವಾಗಿದೆ ಎಂದರು. ನಾನು ಬಂದ ಬಳಿಕ ಮೊದಲ ಬಾರಿ ಸಭೆ ನಡೆಯುತ್ತಿದೆ. ಇಲ್ಲಿ ಅರ್ಥಪೂರ್ಣ ಸಭೆ ನಡೆಯಬೇಕು. ಅಂಬೇಡ್ಕರ್‌ ಆಶಯಗಳು ಈಡೇರಬೇಕು. ಮುಂದೆ ಗೊಂದಲಗಳಾಗದಂತೆ ನೋಡಿಕೊಳ್ಳುತ್ತೇನೆ ಎಂದ ತಹಶೀಲ್ದಾರ್‌, ಎಲ್ಲರನ್ನು ಸಭೆಗೆ ಬರುವಂತೆ ವಿನಂತಿಸಿದರು.

ತಾ| ಕಚೇರಿ ಮುಂಭಾಗ ಅಂಬೇಡ್ಕರ್‌ ಪ್ರತಿಮೆ?
ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿ 3 ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಆದರೆ ಇನ್ನೂ ಆಗಿಲ್ಲ. ನಿಮ್ಮ ಅವಧಿಯಲ್ಲಾದರೂ ಇದು ಸಾಧ್ಯವಾಗಲಿ ಎಂದು ದಲಿತ ಮುಖಂಡರು ತಹಶೀಲ್ದಾರ್‌ಗೆ ಹೇಳಿದರು. ಈ ಕುರಿತು ತಹಶೀಲ್ದಾರ್‌ ಅವರು ನಗರ ಪಂಚಾಯತ್‌ ಅಧಿಕಾರಿಗಳಿಂದ ಮಾಹಿತಿ ಬಯಸಿದಾಗ ಸಮರ್ಪಕ ಉತ್ತರ ಬರಲಿಲ್ಲ. ಪೈಚಾರ್‌ ಅಥವಾ ಜಾಲ್ಸೂರಿನಲ್ಲಿ ಪ್ರತಿಮೆ ಸ್ಥಾಪಿಸಿದರೆ ಒಳ್ಳೆಯದು ಎಂದು ದಲಿತ ಮುಖಂಡರು ಸಲಹೆ ನೀಡಿದರು. ಅಲ್ಲಿ ಹೆದ್ದಾರಿ ಸಮಸ್ಯೆ ಬರಬಹುದು. ಒಮ್ಮೆ ಸ್ಥಾಪಿಸಿ ಮತ್ತೆ ತೆಗೆಯುವಂತಾಗಬಾರದು ಎಂದು ತಹಶೀಲ್ದಾರ್‌ ಹೇಳಿದರು. ತಾಲೂಕು ಕಚೇರಿ ಪಕ್ಕದಲ್ಲೇ ಪ್ರತಿಮೆ ಸ್ಥಾಪಿಸಿದರೆ ಒಳ್ಳೆಯದಲ್ಲವೇ ಎನ್ನುವ ಮುಖಂಡರ ಸಲಹೆಯನ್ನು ತಹಶೀಲ್ದಾರ್‌ ಒಪ್ಪಿದರು. ಈ ಕುರಿತು ಒಂದು ಮನವಿ ಸಲ್ಲಿಸಿ. ಇಚ್ಛಾಶಕ್ತಿಯಿಂದ ಕೆಲಸ ನಡೆಯಬೇಕು ಎಂದ ತಹಶೀಲ್ದಾರ್‌, ಪ್ರತಿಮೆಗೆ ಹಣ ಹೊಂದಿ ಸುವಂತೆ ಸಮಾಜ ಕಲ್ಯಾಣಾಧಿ ಕಾರಿಯವರಿಗೆ ಸೂಚಿಸಿದರು. ಸಹಾಯಕ ನಿರ್ದೇಶಕ ಭವಾನಿಶಂಕರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next