ಇನ್ನೇನು ಈ ವಾರ್ಷಿಕ ಪರೀಕ್ಷೆಯೊಂದು ಮುಗಿದರೆ ರಜೆಗೆ ಅಜ್ಜಿ ತೋಟಕ್ಕೋ, ಮಾವನ ಊರಿಗೋ, ಚಿಕ್ಕಮ್ಮನ ಮನೆಗೋ ಹೋಗಬೇಕು ಅನ್ನೋ ಖುಷಿಯಲ್ಲಿದ್ದ ಪ್ರಾಥಮಿಕ ಶಾಲೆ ಮಕ್ಕಳು, ಅಂತಿಮ ಪರೀಕ್ಷೆಯೊಂದು ಮುಗಿದರೆ ನಾವಿನ್ನು ಕಾಲೇಜಿನ ಯುವಕರು ಎಂಬ ಹುಮ್ಮಸ್ಸಿನಲ್ಲಿದ್ದ ಎಸೆಸೆಲ್ಸಿ ವಿದ್ಯಾರ್ಥಿಗಳು, ವರ್ಷವಿಡೀ ಓದಿ ತಲೆಯಲ್ಲಿ ತುಂಬಿಸಿಕೊಂಡಿದ್ದನ್ನು ಒಂದೊಂದಾಗಿ ಉತ್ತರ ಪತ್ರಿಕೆಯಲ್ಲಿ ಬಿಡಿಸಿಟ್ಟರೇ ಸಾಕು ಅನ್ನೋ ಆತಂಕದಲ್ಲಿದ್ದ ಪಿಯುಸಿ ವಿದ್ಯಾರ್ಥಿಗಳು, ಸಾಂಸ್ಕೃತಿಕ ಚಟುವಟಿಕೆಗಳು, ಅಸೈನ್‌ಮೆಂಟ್‌ಗಳಲ್ಲಿ ವ್ಯಸ್ತರಾಗಿದ್ದ ಪದವಿ ವಿದ್ಯಾರ್ಥಿಗಳು, ಉನ್ನತ ವ್ಯಾಸಂಗದ ಉನ್ನತ ಕನಸುಗಳನ್ನು ಹೊತ್ತ ಕಣ್ಣುಗಳು ಹೀಗೇ. ಎಲ್ಲರೂ ತಮ್ಮದೇ ಖುಷಿ, ಆತಂಕ, ಹುಮ್ಮಸ್ಸು, ಕನಸುಗಳೊಡನೆ ನೂರೆಂಟು ಯೋಜನೆಗಳನ್ನು ಹಾಕಿಕೊಂಡು ಓಡುತ್ತಿರುವಾಗ ಕೊರೊನಾ ಹಾವಳಿ ಶುರುವಾಯಿತು.
ವೈರಸ್‌ನೊಂದಿಗೆ ಹೋರಾಡಲು ಲಾಕ್‌ಡೌನ್ ಒಂದೇ ಅಸ್ತ್ರ ಎಂದಾಗ ಎಲ್ಲ ಕ್ಷೇತ್ರಗಳು ಮಕಾಡೆ ಮಲಗಿ ಬಿಟ್ಟವು. ಶಿಕ್ಷಣ ಕ್ಷೇತ್ರದಲ್ಲಂತೂ ಸಲ್ಲದ ಗೊಂದಲ, ಆತಂಕಗಳನ್ನು ಸೃಷ್ಟಿಸಿತು. ಮುಗಿಯದ ಪಾಠಗಳು, ನಡೆಯದ ಪರೀಕ್ಷೆಗಳು ಎಲ್ಲವೂ ವಿದ್ಯಾರ್ಥಿಗಳ ನೆಮ್ಮದಿ ಕೆಡಿಸಿದವು. ಆದರೂ ಇವತ್ತೋ ನಾಳೆಯೋ ಮತ್ತೆ ಎಲ್ಲವೂ ಮೊದಲಿನಂತಾದೀತು. ಮತ್ತೆ ಸೂರ್ಯ ಹುಟ್ಟಿಯಾನು ಎಂಬ ಆಶಾದಾಯಕ ಭರವಸೆ ಇತ್ತು. ಆದರೆ ಆ ಆಸೆ ಈಡೇರಲು ಎಂಟು – ಒಂಬತ್ತು ತಿಂಗಳೇಬೇಕಾಯಿತು. ಅಂತೂ ಶಾಲೆಗಳೆಲ್ಲ ತೆರೆದು ರಸ್ತೆ ಮೇಲೆ ಆ್ಯಂಬುಲೆನ್ಸ್‌ಗಳ ಬದಲು ಶಾಲಾ ವಾಹನಗಳ ಓಡಾಟ ಆರಂಭವಾಗಿತ್ತು. ಬಿಕೋ ಎನ್ನುತ್ತಿದ್ದ ಕ್ಯಾಂಪಸ್‌ಗಳೆಲ್ಲ ಮತ್ತೆ ಬಣ್ಣ-ಬಣ್ಣದಿಂದ ತುಂಬಿ ತುಳುಕತೊಡಗಿತ್ತು. ಎಲ್ಲವೂ ಸರಾಗವಾಗಿ ಸಾಗುತ್ತಿದೆ ಎನ್ನುವಾಗ, ಕೊರೊನಾ ಎರಡನೇ ಅಲೆ ಬಂತು. ಮತ್ತೆ ಶುರುವಾಯಿತು ಆನ್‌ಲೈನ್ ಕ್ಲಾಸ್‌ಗಳು. ವಿದ್ಯಾರ್ಥಿಗಳ ಅವನತಿಗೆ ಕಾರಣ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಮೊಬೈಲ್, ಇಂಟರ್‌ನೆಟ್, ಕಂಪ್ಯೂಟರ್ ಇಂದು ಕಲಿಕೆಯ ಸಾಧನಗಳಾಗಿವೆ. ವಿದ್ಯಾರ್ಥಿಗಳ ಗೊಂದಲಗಳನ್ನು ದೂರಮಾಡಲು, ಅವರ ಆತ್ಮವಿಶ್ವಾಸ ಕುಂದದಂತೆ ನೋಡಿಕೊಳ್ಳಲು ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಆನ್‌ಲೈನ್ ಎಂಬ ಅಸ್ತ್ರ ಬಳಸಿ ಪಾಠಗಳನ್ನು ನಡೆಸಿದ್ದರಾದರೂ ಅವು ಎಲ್ಲ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿಲ್ಲ ಎಂಬುದು ವಿಷಾದಕರ ಸಂಗತಿ. ವಾಹನಗಳೇ ಹೋಗಲಾರದ ಅದೆಷ್ಟೊ ಗುಡ್ಡಗಾಡು ಪ್ರದೇಶದ ಹಳ್ಳಿಗಳಿಗೆ ನೆಟ್‌ವರ್ಕ್ ಹೋಗುವುದು ಕಷ್ಟ ಸಾಧ್ಯವೇ…! ಪರೀಕ್ಷೆ ಶುಲ್ಕ ಕಟ್ಟಲೂ ಪರದಾಡುವ ವಿದ್ಯಾರ್ಥಿಗಳಿಗೆ ಮೊಬೈಲ್, ಲ್ಯಾಪ್‌ಟಾಪ್ ಸೌಲಭ್ಯ ಸಿಗುವುದಾದರೂ ಹೇಗೆ? ಹೋಗಲಿ ಎಲ್ಲ ಸೌಲಭ್ಯ ಹೊಂದಿದ ವಿದ್ಯಾರ್ಥಿಗಳಿಗಾದರೂ ಪಾಠ ತಲುಪುತ್ತಿದೆಯಾ? ಮಕ್ಕಳ ಪರಿಸ್ಥಿತಿ ಮತ್ತು ಮನಸ್ಥಿತಿಗೆ ಇಳಿದು ಪಾಠ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ಶಕ್ತಿ ಗೂಗಲ್ ಮೀಟ್‌ಗಾಗಲಿ, ಝೂಮ್ ಆ್ಯಪ್‌ಗಾಗಲಿ ಇದೆಯೇ?
ಆನ್‌ಲೈನ್ ಕ್ಲಾಸ್‌ಗಳ ಗೊಂದಲ ಒಂದೆಡೆಯಾದರೆ, ಪರೀಕ್ಷೆಗಳ ಕುರಿತು ಸಿಗಲಾರದ ಸೂಕ್ತ ಮಾಹಿತಿ ಇನ್ನೊಂದೆಡೆ. ಇನ್ನೂ ಪ್ರಾಥಮಿಕ ಶಾಲೆ ಮಕ್ಕಳ ಕಥೆಯೇ ಬೇರೆ. ಕೆಲವು ಪ್ರತಿಷ್ಠಿತ ಖಾಸಗಿ ಶಾಲೆಗಳಂತೂ ಈ ವರ್ಷ ಆನ್‌ಲೈನ್ ಕ್ಲಾಸ್‌ಗಳಿಗೆಂದೇ ಲಕ್ಷ-ಲಕ್ಷ ಫೀಸ್ ಕಟ್ಟಿಸಿಕೊಂಡಿವೆ. ಇನ್ನೂ ಹಳ್ಳಿಗಾಡಿನಲ್ಲಿರುವ ಮಕ್ಕಳಿಗಂತೂ ಯಾವ ಆನ್‌ಲೈನ್ ಕ್ಲಾಸ್ ಇಲ್ಲ, ಶಾಲೆಯ ನೆನಪೂ ಇಲ್ಲ. ಕೊರೊನಾ ಎರಡನೇ ಅಲೆ ಮೊದಲಿಗಿಂತಲೂ ಭೀಕರವಾಗಿದ್ದು, ತನ್ನ ಸಂಬಂಧಿಕರ, ಸಮವಯಸ್ಕರ, ಗುರುಗಳ, ಸಹಪಾಠಿಯ ಸಾವಿನ ಸುದ್ದಿ ಮಾನಸಿಕವಾಗಿ ಕುಗ್ಗಿಸುತ್ತಿದೆಯಲ್ಲದೇ ಅವರ ಧೈರ್ಯವನ್ನು ನುಂಗಿಬಿಡುತ್ತಿದೆ. ಇಂತಹ ಮಾನಸಿಕ ಸ್ಥಿತಿ ಅವರನ್ನು ಓದಿಗೆ ಎಂದೂ ಪ್ರೇರೇಪಿಸಲಾರದು. ನಮ್ಮ ಉಳಿವಿಗಾಗಿ ಸರಕಾರ ತೆಗೆದುಕೊಳ್ಳುತ್ತಿರುವ ತುರ್ತುಕ್ರಮಗಳಿಗೆ ಸಹಕಾರ ನೀಡೊಣ. ತಮ್ಮ ಜೀವವನ್ನು ಲೆಕ್ಕಿಸದೇ ಶ್ರಮಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸೋಣ. ಇಂದಿನ ವಿದ್ಯಾರ್ಥಿಯಾದ ನಾವು ನಮ್ಮ ದೇಶದ ಭವಿಷ್ಯ ಎಂಬುದನ್ನು ಅರಿತು ಜವಾಬ್ದಾರಿಯುತವಾಗಿ ಮುನ್ನಡೆಯೊಣ. ಎಂತಹುದೇ ಸ್ಥಿತಿಯಲ್ಲಿಯೂ ಎಲ್ಲವೂ ಮತ್ತೆ ಸರಿಹೋಗುವುದು, ಸೂರ್ಯ ಮತ್ತೆ ಹುಟ್ಟುತ್ತಾನೆ, ಅವನ ಕಾಂತಿಯ ಕಿರಣ ಮತ್ತೆ ಜಗವನ್ನೆಲ್ಲ ಬೆಳಗುವುದೆಂಬ ಆಶಾ ಕಿರಣವೊಂದು ಬತ್ತದಿರಲಿ… ಮುಂಜಾವಿನ ಶಾಲೆಯ ಪ್ರಾರ್ಥನೆ ಧ್ವನಿಸುವ ವೇಳೆ ಬಹುಬೇಗ ಬರಲಿ. ಏಕಾಂಗಿಯಾದ ಶಾಲಾ ಮೈದಾನ ರಂಗಿನ ಚಿಟ್ಟೆಗಳಿಂದ ಕೂಡಲಿ… ಕಾಲೇಜಿನ ಕಾರಿಡಾರ್‌ಗಳಲ್ಲಿ ಕಲರವ ಹಬ್ಬಲಿ. ಇಷ್ಟು ದಿನ ಸುಮ್ಮನಿದ್ದ ಟೀಚರ್ ಕೋಲಿಗೆ ಮತ್ತೆ ಕೆಲಸ ಸಿಗಲಿ.
ಸುಷ್ಮಾ ಮ. ಸವಸುದ್ದಿ
ವಿವಿ, ವಿಜಯಪುರ