Advertisement

ಶಿಕ್ಷಕರ ದಿನಾಚರಣೆ: ಕೋವಿಡ್ ಕಾಲ ಶಾಲಾ ಪಾಠದ ಜೊತೆಗೆ ಜೀವನದ ಪಾಠಗಳನ್ನೂ ಕಲಿಸುತ್ತಿದೆ

03:52 PM Sep 04, 2020 | keerthan |

ಕೋವಿಡ್-19 ಸಮಸ್ಯೆಯಿಂದ ಪ್ರಪಂಚವೇ ತಲ್ಲಣಗೊಂಡಿರುವಾಗ ಮಕ್ಕಳ ಶಿಕ್ಷಣದ ಮೇಲೆ ಗಮನಾರ್ಹವಾದ ಬದಲಾವಣೆಯನ್ನು ಉಂಟು ಮಾಡುವುದರಲ್ಲಿ ಎರಡು ಮಾತಿಲ್ಲ. ಮಕ್ಕಳಿಗಾಗಿ ಆನ್ಲೈನ್ ಮತ್ತು ರೆಕಾರ್ಡೆಡ್ ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆ ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗಾಗಿ ವಿದ್ಯಾಗಮ ಎನ್ನುವ ವಿನೂತನ ಕಾರ್ಯಕ್ರಮ ಜಾರಿಗೆ ತಂದಿರುವುದು ಶ್ಲಾಘನೀಯ.

Advertisement

ಈ ಮೂಲಕ ಕೊವಿಡ್ ಮಧ್ಯೆಯೂ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿರಂತರತೆ ಹಾಗೂ ಕಲಿಕೆಯಲ್ಲಿ ತಂತ್ರಜ್ಞಾನದ ಸದ್ಬಳಕೆಯಾಗುತ್ತಿದೆ .ಶಿಕ್ಷಣವು ವಿದ್ಯಾಗಮದ ಮೂಲಕ ಮಕ್ಕಳ ಮನೆ ಬಾಗಿಲಿಗೆ ಬಂದು ನಿಂತಿದೆ. ಮಕ್ಕಳು ಮನೆಯಲ್ಲಿದ್ದರೆ ಆದರೆ ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು .ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಹಲವಾರು ಸವಾಲು ಸಮಸ್ಯೆಗಳ ಮಧ್ಯೆಯೂ ಶಿಕ್ಷಕರಾದ ನಾವು ನಮ್ಮ ಪ್ರೀತಿಯ ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. ಔಪಚಾರಿಕ ಶಿಕ್ಷಣದಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಶಾಲಾ ಆವರಣದಲ್ಲಿ ತರಗತಿ ಕೋಣೆಯ ಒಳಗೆ ಪುಸ್ತಕ, ಸೀಮೆ ಸುಣ್ಣ, ಕರಿಹಲಗೆ ಇತರ ಕಲಿಕಾ ಸಾಮಗ್ರಿಗಳ ನಡುವೆ ನಡೆಯುತ್ತಿದ್ದ ಶಿಕ್ಷಣ ಇದೀಗ ವಠಾರದಲ್ಲಿ, ಮರದ ನೆರಳಿನಲ್ಲಿ, ಉದ್ಯಾನವನಗಳಲ್ಲಿ, ಸಮುದಾಯ ಭವನಗಳಲ್ಲಿ ಅಥವಾ ಇನ್ಯಾರದೋ ಮನೆಯ ಜಗುಲಿಯಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳ ನಡುವೆ ನಡೆದರೆ ಇನ್ನೊಂದು ಕಡೆ ಮೊಬೈಲ್, ಲ್ಯಾಪ್ ಟಾಪ್ ಗಳ ಮೂಲಕ ನಡೆಯುತ್ತಿದೆ

ಕಾಲ ಬದಲಾಗಿದೆಯೋ ಅಥವಾ ಪ್ರಸ್ತುತ ಸ್ಥಿತಿಗತಿಗಳು ಪರಿಸ್ಥಿತಿಯನ್ನು ಬದಲಾಯಿಸಿತೊ ತಿಳಿಯದು.  ಶಾಲಾ ಕಟ್ಟಡ ಮಕ್ಕಳ ಬರುವಿಕೆಗಾಗಿ ಕಾಯುತ್ತಿವೆ. ತರಗತಿ ಕೋಣೆಗಳ ಬೆಂಚುಗಳು ತನ್ನ ಮೇಲೆ ಕುಳಿತುಕೊಳ್ಳುವ ವಿದ್ಯಾರ್ಥಿಯನ್ನು ಎದುರು ನೋಡುತ್ತಿದೆ. ಶಾಲಾ ಮೈದಾನ, ಮೆಟ್ಟಿಲುಗಳು ಹಾವಸೆ ಹುಲ್ಲುಗಳಿಂದ ತುಂಬಿ ಹೋಗಿವೆ. ಶಾಲಾ ಗಂಟೆ ಸದ್ದು ಮಾಡಲು ಕಾಯುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನಂತಹ ಲಕ್ಷಾಂತರ ಶಿಕ್ಷಕರು ತಮ್ಮ ಪ್ರೀತಿಯ ಮಕ್ಕಳಿಗಾಗಿ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.

ಶಿಕ್ಷಣ ಯಾವಾಗಲೂ ದ್ವಿಮುಖ ಪ್ರಕ್ರಿಯೆಯಾಗಿರಬೇಕು. ಅದು ನೇರ ಸಂವಹನದ ಮೂಲಕ ತರಗತಿ ಕೋಣೆಯಲ್ಲಿ ನಡೆಯಬೇಕು. ಆದರೆ ಈ ಕೋವಿಡ್ ಸುದೀರ್ಘ ರಜೆಯನ್ನು ಮಕ್ಕಳಿಗೆ ನೀಡಿದಂತಾಗಿದೆ. ಮಕ್ಕಳು ತಮ್ಮ ಮನೆಯಲ್ಲಿ ಒತ್ತಾಯದ ರಜೆಯನ್ನು ಕಳೆಯುತ್ತಿದ್ದಾರೆ.

ಆದರೆ ಇವೆಲ್ಲವುದರ ಹೊರತಾಗಿ ವಿದ್ಯಾಗಮದಂತಹ ವಿನೂತನ ಯೋಜನೆಯ ಮೂಲಕವಾಗಿ ಮಕ್ಕಳಲ್ಲಿ ಸ್ವಲ್ಪ ಮಟ್ಟಿಗಾದರೂ ಸ್ವಕಲಿಕೆ ಆಗುತ್ತಿದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಸೇತು ಬಂದ, ಸಂವೇದ ಎಂಬ ಶೈಕ್ಷಣಿಕ ಕಾರ್ಯಕ್ರಮಗಳು ದೂರದರ್ಶನ ಚಂದನ ವಾಹಿನಿಯಲ್ಲಿ ಬಿತ್ತರಗೊಳ್ಳುತ್ತಿವೆ.

Advertisement

ಕೋವಿಡ್ ಸಮಯದಲ್ಲಿ ಪಾಲಕರ ಆರ್ಥಿಕತೆ ಕುಸಿದಿರುವ ಸಂದರ್ಭದಲ್ಲಿ ಮತ್ತು ಆನ್ಲೈನ್ ನೆಟ್ವರ್ಕ್ ಸಿಗದಿರುವ ಕಾರಣವಾಗಿಯೂ ಸರ್ಕಾರಿ ಶಾಲೆಗಳ ದಾಖಲಾತಿ ಸಂಖ್ಯೆ ಹೆಚ್ಚಾಗಿ ಖಾಸಗಿ ಶಾಲೆಗಳಿಗೆ ಹೊಡೆತ ಬಿದ್ದಿದೆ. ಶಾಲೆಗಳು ತೆರೆಯದ ಕಾರಣ ಮಕ್ಕಳ ಸಾಮಾಜಿಕ ಸಂವಹನ ಸಾಧ್ಯವಾಗದೆ ಮಕ್ಕಳು ಪರಿತಪಿಸುವಂತಾಗಿದೆ. ಉದ್ಯೋಗದ ಹುಡುಕಾಟದಲ್ಲಿದ್ದ ಪದವಿಯ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಕೋವಿಡ್ ಎನ್ನುವಂತಹ ಈ ವೈರಸ್ ಶಾಲಾ ಪಾಠದ ಜೊತೆಗೆ ಜೀವನದ ಪಾಠಗಳನ್ನು ಮಕ್ಕಳಿಗೆ ಸ್ವಲ್ಪ ಮಟ್ಟಿಗಾದರೂ ಹೇಳಿಕೊಡುತ್ತಿದೆ ಎಂದರೆ ತಪ್ಪಾಗಲಾರದು.

ಆಶಾ ಅಂಬೆಕಲ್ಲು
 ಶಿಕ್ಷಕಿ, ಸುಳ್ಯ 

Advertisement

Udayavani is now on Telegram. Click here to join our channel and stay updated with the latest news.

Next