Advertisement

ಬಸ್‌ಗಳಲ್ಲಿ ನೇತಾಡಿಕೊಂಡೇ ವಿದ್ಯಾರ್ಥಿಗಳ ಪ್ರಯಾಣ

12:36 PM Nov 11, 2022 | Team Udayavani |

ಕಾರ್ಕಳ: ಬಸ್‌ನಲ್ಲಿ ಸರಿಯಾಗಿ ನಿಲ್ಲುವುದಕ್ಕೂ ಜಾಗವಿಲ್ಲದೆ ವಿದ್ಯಾರ್ಥಿಗಳು ಬಸ್‌ನ ಫ‌ುಟ್‌ಬೋರ್ಡ್‌ನಲ್ಲೇ ನೇತಾಡಿಕೊಂಡು ಹೋಗುತ್ತಿರುವ ಅಪಾಯಕಾರಿ ದೃಶ್ಯ ಕಾರ್ಕಳ ಬಂಡಿಮಠದಿಂದ ಸರ್ವಜ್ಞ ವೃತ್ತದ ಬೈಪಾಸ್‌ ರಸ್ತೆ ಸಹಿತ ವಿವಿಧೆಡೆ ನಿತ್ಯವೂ ಕಂಡುಬರುತ್ತಿದೆ. ಇಲ್ಲಿ ಮಕ್ಕಳ ಭವಿಷ್ಯ, ಪ್ರಾಣ ಎರಡೂ ಅಪಾಯದ ಸ್ಥಿತಿಯಲ್ಲಿದೆ.

Advertisement

ಕಾರ್ಕಳ ತಾಲೂಕು ಕೇಂದ್ರಗಳಲ್ಲಿರುವ ವಿವಿಧ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದೂರ ದೂರುಗಳ ಹಳ್ಳಿಗಳಿಂದ ನೂರಾರು ಮಂದಿ ಶಾಲಾ ಮಕ್ಕಳು ವಿದ್ಯಾರ್ಜನೆಗೆಂದು ಬರುತ್ತಿರುತ್ತಾರೆ. ನಗರದ ಶಾಲಾ ಕಾಲೇಜುಗಳಿಗೆ ಕಲಿಯುತ್ತಿರುವ ಮಕ್ಕಳಿಗೆ ತಮ್ಮ ಗ್ರಾಮಗಳಿಂದ ಬರಲು ಸೂಕ್ತ ಸಾರಿಗೆ ವ್ಯವಸ್ಥೆಗಳಿಲ್ಲ. ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಸಾರಿಗೆ ಬಸ್‌ ಹಾಗೂ ಖಾಸಗಿ ಬಸ್‌, ಇನ್ನಿತರ ಖಾಸಗಿ ವಾಹನಗಳ ಮೂಲಕ ನಗರದ ಬಂಡಿಮಠ ಬಸ್‌ಸ್ಟಾಂಡ್‌, ಮುಖ್ಯ ಪೇಟೆಯಲ್ಲಿರುವ ಉಡುಪಿ ಬಸ್‌ಸ್ಟಾಂಡ್‌ ತಲುಪಿ ಅಲ್ಲಿಂದ ಪೇಟೆಯ ಆಸುಪಾಸಿನ ಶಾಲೆ, ಕಾಲೇಜುಗಳಿಗೆ ಕಲಿಕೆಗೆ ತೆರಳುತ್ತಾರೆ.

ವಿದ್ಯಾರ್ಥಿಗಳು ನಿತ್ಯವೂ ಶಾಲೆ ಕಾಲೇಜುಗಳಿಗೆ ಹೋಗಬೇಕಿದ್ದರೆ ಕೆಲವು ಮಾರ್ಗಗಳ ಬಸ್‌ಗಳಲ್ಲಿ ಮಕ್ಕಳು ಸರ್ಕಸ್‌ ಮಾಡಿಕೊಂಡೆ ತೆರಳುತ್ತಿರುತ್ತಾರೆ. ನಗರದಲ್ಲಿ ಗ್ರಾಮೀಣ ಸಾರಿಗೆ ಇಲ್ಲದೆ ಇರುವುದರಿಂದ ಇವರೆಲ್ಲ ಖಾಸಗಿ ಬಸ್‌ ಹಿಡಿದು ಪ್ರಯಾಣ ಬೆಳೆಸುತ್ತಾರೆ. ಕೆಲವು ರೂಟ್‌ ಗಳಲ್ಲಿ ಸೀಮಿತ ಬಸ್‌ ಓಡಾಡುವ ಕಾರಣ ಬಸ್‌ ಗಳ ಬಾಗಿಲುಗಳಲ್ಲಿ ನೇತಾಡಿಕೊಂಡೇ ತೆರಳುತ್ತಾರೆ.

ಕೂಗಳತೆ ದೂರದಲ್ಲಿ ಪೊಲೀಸ್‌ಠಾಣೆ

ಬಸ್‌ನ ಕೊರತೆಯಿಂದ ವಿದ್ಯಾರ್ಥಿಗಳ ಪರದಾಟ ಒಂದೆಡೆಯಾದರೆ ಜೀವದ ಜತೆ ನಿರ್ಲಕ್ಷ್ಯ ವಹಿಸುವುದು ಈ ಬಸ್‌ನ ಚಾಲಕ, ನಿರ್ವಾಹಕ, ಮಾಲಕರದ್ದು ಇಲ್ಲಿ ಕಂಡುಬರುತ್ತದೆ. ಪೊಲೀಸರ ನಿರ್ಲಕ್ಷ ಕೂಡ ಇಲ್ಲಿ ಎದ್ದು ಕಾಣುತ್ತಿದೆ. ತುಂಬಿ ತುಳುಕುವ ಬಸ್‌ನ ಬೋರ್ಡ್‌ನಲ್ಲಿ ಬೆಳಗ್ಗೆ ಹೊತ್ತು ವಿದ್ಯಾರ್ಥಿಗಳು ಪ್ರಯಾಣ ಬೆಳೆಸುತ್ತಿರುತ್ತಾರೆ. ಈ ದೃಶ್ಯ ಕೂಗಳತೆಯ ದೂರದಲ್ಲಿರುವ ಪೊಲೀಸ್‌ ಠಾಣೆಯ ಸಮೀಪ ಪ್ರತೀ ದಿನ ಬೆಳಗ್ಗೆ ಹೊತ್ತು ಗೋಚರಿಸುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯ, ಪ್ರಾಣ ಎರಡೂ ಈ ಬಸ್‌ಗಳ ಫ‌ುಟ್‌ಪಾತ್‌ ಬೋರ್ಡ್‌ ನಲ್ಲೆ ಇದೆ.

Advertisement

ಮಾತು ಮಾತಲ್ಲೆ ಬಾಕಿ!

ಉಡುಪಿ ಜಿಲ್ಲಾ ಪೊಲೀಸ್‌ ಈ ಹಿಂದೆ ನಡೆಸಿದ ಫೋನ್‌ ಇನ್‌ ಕಾರ್ಯಕ್ರಮದ ವೇಳೆ ಬಸ್‌ಗಳ ಪುಟ್‌ಬೋರ್ಡ್‌ನಲ್ಲಿ ಶಾಲಾ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುವ ಕುರಿತು ಸಾರ್ವಜನಿಕರು ದೂರು ನೀಡಿದ್ದರು. ಬಸ್‌ಗಳು ಕಡ್ಡಾಯವಾಗಿ ಬಾಗಿಲು ಹಾಕಿಕೊಂಡು ಸಂಚರಿಸುವ ಕುರಿತು ನಿರ್ದೇಶನ ನೀಡುವ ಬಗ್ಗೆ ಚಿಂತನೆ ನಡೆಸುವುದಾಗಿ ಭರವಸೆಯೂ ಅಂದು ದೊರಕಿತ್ತು. ಆದರೆ ವಾಸ್ತವದಲ್ಲಿ ಅದೆಲ್ಲವೂ ಹಾಗೆ ಮಾತಿನಲ್ಲೆ ಉಳಿದುಕೊಂಡಿದೆ.

ದುರಂತ ಸಂಭವಿಸುವ ಮುಂಚಿತ ಎಚ್ಚರ ವಹಿಸಿ

ಬಸ್‌ ತಿರುವು ಮುರುವಿನಲ್ಲಿ ತೀರಾ ಬಾಗಿಕೊಂಡು ಹೋಗುವಾಗ ಗಾಬರಿ ಹುಟ್ಟಿಸುತ್ತವೆ. ರಸ್ತೆ ಬದಿಗಳ ವಿದ್ಯುತ್‌ ಕಂಬಗಳಿಗೆ ಬಡಿದೇ ಬಿಟ್ಟಿತ್ತು ಅನ್ನುವಷ್ಟು ಬಾಗಿಕೊಂಡು ಸಾಗುವಾಗ ಶಾಲಾ ಮಕ್ಕಳ ಅರ್ಧ ಜೀವ ಹೋದಂತೆ ಭಾಸವಾಗುತ್ತದೆ. ಮಕ್ಕಳ ಜೀವ ರಕ್ಷಣೆ ಬಗ್ಗೆ ಶಾಲಾ ಆಡಳಿತಗಳಾಗಲಿ, ಪೊಲೀಸ್‌ ಇಲಾಖೆಯಾಗಲಿ. ಬಸ್‌ ಮಾಲಕರು, ಚಾಲಕರು, ನಿರ್ವಾಹಕರು ಯಾರು ಇಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ದುರಂತ ಸಂಭವಿಸುವ ಮೊದಲು ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ.

ವೀಡಿಯೋ ವೈರಲ್‌ ಆಗಿತ್ತು

ಪ್ರಯಾಣಿಕರಿಂದ ತುಂಬಿದ ಬಸ್‌ನಲ್ಲಿ ವಿದ್ಯಾರ್ಥಿಯೊಬ್ಬಳು ಕಿಲೋಮೀಟರ್‌ ದೂರ ಬಸ್‌ನ ಪುಟ್‌ ಬೋರ್ಡಿನಲ್ಲಿ ನೇತಾಡಿಕೊಂಡು ಕ್ರಮಿಸಿದ್ದ ಮಂಗಳೂರು ನಗರದ ಬಸ್‌ನ ದೃಶ್ಯ ವೀಡಿಯೋ ಕೆಲ ಸಮಯಗಳ ಹಿಂದೆ ವೈರಲ್‌ ಆಗಿ ಬಸ್‌ಅನ್ನು ತಡೆದು ದಂಡ ಹಾಕಿದ ಘಟನೆ ನಡೆದಿತ್ತು. ಆದರೇ ಕಾರ್ಕಳ ಬಂಡಿಮಠ ಬಸ್‌ನಿಲ್ದಾಣದಿಂದ ಸರ್ವಜ್ಞ ವೃತ್ತ ಮೂಲಕ ಬೈಪಾಸ್‌ ಮೂಲಕ ಸಂಚರಿಸುವ ಬಸ್‌ನಲ್ಲಿ ಇಂತಹ ದೃಶ್ಯಗಳು ನಿತ್ಯ ಕಂಡು ಬರುತ್ತಿದ್ದರೂ ಯಾವುದೇ ಕ್ರಮಗಳಿಲ್ಲ. ಪೊಲೀಸ್‌ ಇಲಾಖೆಯಗಖೀರುವ ಕೂಗಳತೆ ದೂರದಲ್ಲಿ ಈ ರೀತಿ ಹೆಣ್ಣು ಮಕ್ಕಳು ಬಸ್‌ನ ಡೋರ್‌ನಲ್ಲಿ ನೇತಾಡಿಕೊಂಡು ಹೋಗುತ್ತಿದ್ದರೂ ಇದುವರೆಗೂ ಯಾವ ಕ್ರಮಗಳನ್ನು ವಹಿಸಿಲ್ಲ ಎನ್ನುವುದು ನಾಗರಿಕರ ದೂರು.

ಸೂಕ್ತ ಕಾನೂನು ಕ್ರಮ: ಬಸ್‌ಗಲ್ಲಿ ಪ್ರಯಾಣಿಕರ ಸುರಕ್ಷತೆ ನಿರ್ಲಕ್ಷಿಸುವುದು ಅಪರಾಧ. ಅಂತವರ ಮೇಲೆ ನಿಗಾವಹಿಸಿ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು. -ಪ್ರಸನ್ನ ಎಂ.ಎಸ್‌., ಠಾಣಾಧಿಕಾರಿಗಳು ನಗರ ಠಾಣೆ ಕಾರ್ಕಳ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next