Advertisement

ವಿದ್ಯಾರ್ಥಿಗಳು ವಿಷಯದ ಆಳ ಅರಿಯಲಿ

12:24 PM Jul 29, 2018 | Team Udayavani |

ಹುಣಸೂರು: ಜಾಗತೀಕರಣದ ವೇಗದ ಯುಗದಲ್ಲಿ ವಾಣಿಜ್ಯ ಶಾಸ್ತ್ರವು ಅತ್ಯಂತ ವೇಗವಾಗಿ ಮತ್ತು ನಿರಂತರ ಬದಲಾವಣೆ ಹೊಂದುತ್ತಿದ್ದು, ವಿದ್ಯಾರ್ಥಿಗಳು ವಿಷಯಗಳ ಆಳವನ್ನು ಅರಿಯದೇ ಅಂಕಗಳಿಗಾಗಿ ಮಾತ್ರ ವ್ಯಾಸಂಗ ಮಾಡುವ ಮನೋಭಾವನೆಯಿಂದ ಹೊರಬಂದು ಎಲ್ಲವನ್ನು ಅರಿತುಕೊಳ್ಳುವ ವಿದ್ಯಾರ್ಥಿಗಳಾಗಬೇಕು ಎಂದು ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ದೀಪುಕುಮಾರ್‌ ಸೂಚಿಸಿದರು.

Advertisement

ನಗರದ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಕಾಮರ್ಸ್‌ ಅಂಡ್‌ ಮ್ಯಾನೇಜ್‌ಮೆಂಟ್‌ ಪೋರಂನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿ ಮಾತನಾಡಿದರು.

ವಿಶ್ವದಲ್ಲಿ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಸಿದ್ಧಾಂತಗಳು ಜಾರಿಗೊಂಡ ನಂತರ ಮಾರುಕಟ್ಟೆಯ ಚಿತ್ರಣವೇ ಬದಲಾಯಿತು. ಇದಕ್ಕೆ ಭಾರತವೂ ಹೊರತಾಗಿರಲಿಲ್ಲ. ಈಗ ದೇಶದಲ್ಲಿ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಜಾರಿಗೊಂಡ ನಂತರವಂತೂ ವಾಣಿಜ್ಯ ವಿಭಾಗ ದಿನಕ್ಕೊಂದು ರೂಪ ಪಡೆಯುತ್ತಿದೆ. ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದ ವಿಷಯವಾರು ಪ್ರಾಮುಖ್ಯತೆಯನ್ನು ಆಳವಾಗಿ ಅಧ್ಯಯನ ಮಾಡುವುದು ಅನಿವಾರ್ಯವಾಗಿದೆ.

ಕೇವಲ ಅಂಕಗಳೇ ನಿಮ್ಮ ಐಕ್ಯೂವನ್ನು ನಿರ್ಧರಿಸುವುದಿಲ್ಲ. ಡೆಬಿಟ್‌ ಮತ್ತು ಕ್ರೆಡಿಟ್‌ ಎಂಟ್ರಿಯನ್ನು ಕಲಿಯುವುದೇ ದೊಡ್ಡ ವಿಷಯವಲ್ಲ. ತರಗತಿಯಲ್ಲಿ ನಡೆಯುವ ಪಾಠ ಕೇಳಿದ್ದು ಅರ್ಥವಾಗದಿದ್ದಲ್ಲಿ ಪ್ರಶ್ನಿಸುವ ಮನೋಭಾವನೆ ರೂಢಿಸಿಕೊಳ್ಳಿರಿ ಎಂದರು.

ಐಕ್ಯೂಎಸಿ ಸಂಚಾಲಕ ಪುಟ್ಟಶೆಟ್ಟಿ ಮಾತನಾಡಿ, ಅರ್ಥಶಾಸ್ತ್ರದೊಂದಿಗೆ ವಾಣಿಜ್ಯಶಾಸ್ತ್ರವೂ ಮಹತ್ತರ ಬದಲಾವಣೆಯತ್ತ ಮುಖ ಮಾಡಿದೆ. ಸಿಎ ವ್ಯಾಸಂಗ ಮಾಡಬೇಕೆನ್ನುವವರು ಅಷ್ಟೇ ಅವಿರತ ಶ್ರಮದೊಂದಿಗೆ ಅಧ್ಯಯನ ನಡೆಸಿದರೆ ಮಾತ್ರ ಸಾಧ್ಯವೆಂದರು. ಪ್ರಾಂಶುಪಾಲ ಜ್ಞಾನಪ್ರಕಾಶ್‌ ಮಾತನಾಡಿದರು. ಅಧ್ಯಾಪಕರುಗಳಾದ ಪ್ರತಿಭಾ, ಕಲಾಶ್ರೀ, ಶ್ರೀನಿವಾಸ್‌, ರಮಣಿನಾಯರ್‌ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next