Advertisement
ಶಿರಸಿಯಲ್ಲಿ ಒಂದಷ್ಟು ಶಾಲೆಗಳಿವೆ. ಇಲ್ಲಿನ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿ ಊಟಕ್ಕೆ ಬೇಕಾದ ಥರಹೇವಾರಿ ತರಕಾರಿಗಳನ್ನು ತಾವೇ ಬೆಳೆದುಕೊಳ್ಳುತ್ತಾರೆ. ಇದು ಸರಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಕರು ಕಲಿಸಿದ ಹಸಿರು ಪಾಠದ ಪ್ರತಿಫಲ. ಶಿರಸಿ ನಗರದ ಆಝಾದ್‌ನಗರ, ಬನವಾಸಿಯ ಅಜ್ಜರಣಿ ಶಾಲೆ, ಹೆಬ್ಬತ್ತಿ, ಶೀಗೇಹಳ್ಳಿ, ಹೀಗೆ ಮಧ್ಯಾಹದ ಬಿಸಿ ಊಟಕ್ಕೆ ತರಕಾರಿ ಬೆಳೆಯುವ ಶಾಲೆಗಳ ಪಟ್ಟಿ ಬೆಳೆಯುತ್ತದೆ. ಅಕ್ಟೋಬರ್ ರಜೆಯ ಬಳಿಕ ಮತ್ತು ಫೆಬ್ರವರಿ ಮಾರ್ಚ್ ಒಳಗೆ ಎರಡು ಸಲ ತರಕಾರಿ ಬೇಸಾಯ ಮಾಡುವ ಶಾಲೆಗಳೂ ಇವೆ. ಒಂದೂ ಎರಡು, ಬಾಳೆಲೆ ಹರಡು… ಪದ್ಯದ ಪ್ರಾಕ್ಟಿಕಲ್ ರೂಪದಂತೆ, ಬಿಸಿ ಊಟಕ್ಕೆ ತಾಜಾ ತಾಜಾ ಹಸಿರು ತರಕಾರಿಯನ್ನು ವಿದ್ಯಾರ್ಥಿಗಳೇ ಬೆಳೆಸಿ, ಬಳಸುತ್ತಿರುವುದು ಮಾದರಿ ಪ್ರಯತ್ನ.
ಕಿಚನ್ ಗಾರ್ಡನ್ ಮಾಡುತ್ತಿರುವ ಶಾಲೆಗಳ ಶಿಕ್ಷಕರು, ತರಕಾರಿ ಬೇಸಾಯದ ಮಡಿ ಮಾಡುವ ಬಗೆಯನ್ನು ಮಕ್ಕಳಿಗೆ ಕಲಿಸಿದರು. ಸ್ವತಃ ತಾವೂ ಗುದ್ದಲಿ ಹಿಡಿದು ಅಗೆದರು. ಮರುದಿನವೇ ಮನೆಯಲ್ಲಿ ಮಕ್ಕಳ ಅಮ್ಮಂದಿರು ಕಾಯ್ದಿಟ್ಟ ತರಕಾರಿ ಬೀಜಗಳನ್ನು ತರಿಸಿದರು. ಮಕ್ಕಳ ಎಳೆಯ ಕೈಗಳಲ್ಲಿ ಮುೂಲಂಗಿ, ಗೋಳಿ, ಹರಿವೆ, ಮೆಣಸು, ಬೀಟರೂಟ್ ಸೌತೆಯ ಬೀಜ ಹಾಕಿಸಿ ಕಿಚನ್ ಗಾರ್ಡನ್‌ಗೆ ಶುಭಾರಂಭ ಮಾಡಿಸಿಯೇ ಬಿಟ್ಟರು. ಕೊತ್ತಂಬರಿ ಬೆಳಸುವುದನ್ನು ಹೇಳಿಕೊಟ್ಟರು. ಗೊಬ್ಬರ ಹಾಕಿದ ಬಳಿಕ ನೀರು ಹಾಕುವ ಬಗೆಗೂ ಹೇಳಿದ್ದಷ್ಟೇ ಅಲ್ಲ; ಅದಕ್ಕೊಂದು ಪುಟಾಣಿ ಬೇಲಿ ಕಟ್ಟಿಸಿದ್ದೂ ಆಯಿತು. ದಿನಾ ಶಾಲೆಗೆ ಬರುತ್ತಿದ್ದ ಮಕ್ಕಳು ಪಾಳಿಯಲ್ಲಿ ನೀರು ಹಾಕಿದರು. ಮೊಳಕೆ ಬಂದು, ಎರಡು ಎಲೆ ಚಿಗುರಿದಾಗ ಮಕ್ಕಳ ಮುಖಗಳೂ ಅರಳಿದವು. ಆಮೇಲೆ ಮಧ್ಯಾಹ್ನದ ಬಿಸಿ ಬಿಸಿ ಊಟಕ್ಕೆ ಅಲ್ಲ: ಮಕ್ಕಳೇ ಬೆಳೆದ ತರಕಾರಿಗಳನ್ನೇ ಬಳಸಲಾಗುತ್ತದೆ. ಸಾಂಬಾರಿನಲ್ಲಿ ಸಿಗುವುದು ತಾವೇ ಕೈ ಕೆಸರು ಮಾಡಿಕೊಂಡು ಬೆಳೆಸಿದ ಥರಹೇವಾರಿ ತರಕಾರಿಗಳು ಎಂದು ಮಕ್ಕಳಿಗೆ ಹಿಗ್ಗು. ಅವರಿಗೆ ಈಗ ಕೃಷಿಯ ಮಹತ್ವ ಗೊತ್ತಾಗಿದೆ. ತಾಜಾ ತರಕಾರಿಯ ಸ್ವಾದವೂ ತಿಳಿದಿದೆ. ವಿಶೇಷ ಏನಪ್ಪಾ ಅಂದರೆ, ಅಲ್ಲೇ ಎಲ್ಲೋ ಆಟ ಆಡುತ್ತಿದ್ದ ಏಳನೇ ತರಗತಿಯ ವಿದ್ಯಾರ್ಥಿ ಕಮಲಾಕರನನ್ನೋ, ವಿನಯನನ್ನೋ ಕರೆದು, ಇಂಥ ತರಕಾರಿ ಬೇಕಿತ್ತಲ್ಲ ಮಗೂ ಅಂದರೆ ಸಾಕು, ಅದನ್ನೇ ಕೋಯ್ದು ತರುವ ಕಲೆ ಕೂಡ ಕರಗತವಾಗಿದೆ. ಯಾವ ತರಕಾರಿ ಭೂಮಿಯೊಳಗೂ, ಯಾವ ತರಕಾರಿ ಭೂಮಿಯ ಮೇಲಾºಗದಲ್ಲಿ ಬೆಳೆಯುತ್ತದೆ ಎಂಬ ಅರಿವು ಇದೆ. ಯಾವುದಕ್ಕೆ ನೀರು ಹೆಚ್ಚು ಬೇಕು ಎಂಬುದನ್ನೂ ಮಕ್ಕಳೇ ಹೇಳಬಲ್ಲರು. ಹಸಿರು ಸಿರಿಯ ನಡುವಿನ ಮಕ್ಕಳು ಹಸುರು ತರಕಾರಿ ಪ್ರಿಯರಾಗಿದ್ದಾರೆ.
Related Articles
ಶಾಲೆಯಲ್ಲಿ ಕಲಿತ ಕೃಷಿ ಪಾಠವನ್ನು ಮನೆಗೆ ಒಯ್ದಿದ್ದಾರೆ. ಪಾಟಿ ಚೀಲ ಜಗುಲಿಯಲ್ಲಿ ಇಟ್ಟು ಅಮ್ಮನ ಬಳಿಗೆ ಓಡಿ ಹೋಗಿ ನಾವೂ ತರಕಾರಿ ಬೆಳೆಸೋಣ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಅಪ್ಪನ ಬಳಿ ತರಕಾರಿ ಮಡಿ, ಪಾತಿ ಮಾಡಿಸಿ, ಬೀಜ ಹಾಕಿಸಿ, ಆರೈಕೆ ಶುರು ಮಾಡಿದ್ದಾರೆ. ಇರುವೆ, ಇಲಿ, ಹೆಗ್ಗಣಗಳು ಬಾರದಂತೆ ಎಚ್ಚರ ವಹಿಸಿದ್ದಾರೆ. ಅಮ್ಮ ಜತನ ಮಾಡಿಟ್ಟ ಬೀಜವನ್ನೇ ಬಳಸಿ ಮನೆ ಅಂಗಳದಲ್ಲೂ ಕೃಷಿಗೆ ಮುಂದಾಗಿದ್ದಾರೆ. ಅಜ್ಜರಣಿ, ಹೆಬ್ಬತ್ತಿ, ಶೀಗೇಹಳ್ಳಿ, ಆಜಾದ್ ನಗರದ ಸುತ್ತಲೂ ಈಗ ಮಕ್ಕಳೇ ಮಾಡ್ತಾರೆ . ನಮಗೇಕೆ ಆಗದು ಎಂದು ತಾರಸಿಯ ಮೇಲೂ ತರಕಾರಿ ಬೆಳಸಲು ಮುಂದಾದವರೂ ಇದ್ದಾರೆ. ನಲಿ-ಕಲಿಯ ಜೊತೆಗೆ ಕೃಷಿ ಖುಷಿಯೂ ಸೇರಿದೆ! ಶಿರಸಿಯ ಬಿಇಓ ಸದಾನಂದ ಸ್ವಾಮಿ ಅವರಿಗೆ ಮಾತ್ರ ಅಲ್ಲ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಊರಿನ ಜನಕ್ಕೆ, ಪಾಲಕರಿಗೆ, ಅಮ್ಮಂದಿರಿಗೂ, ಮಕ್ಕಳು ಶಿಕ್ಷಕರ ಜೊತೆ ಬೆಳೆಸಿದ ಕಿಚನ್ ಗಾರ್ಡನ್ ಖುಷಿ ಕೊಟ್ಟಿದೆ. ಶಾಲೆಗೆ ಬಂದು ತರಕಾರಿ ಗಾರ್ಡನ್ ನೋಡಿ ಹೋಗುವ ಮಾತೆಯರೂ ಇದ್ದಾರೆ. ಈ ಮೂಲಕ ಶಾಲೆಗಳಲ್ಲಿ ಪಾಲಕರು, ಶಿಕ್ಷಕರು ಹಾಗೂ ಮಕ್ಕಳ ಒಡನಾಟ ಬೆಸೆದು ಕೊಂಡಿದೆ
Advertisement
ಇದೇ ರೀತಿ ಬನವಾಸಿ ಸಮೀಪದ ಅಜ್ಜರಣ ಶಾಲೆಗೆ ಹೋದರೆ, ಅಲ್ಲಿ ವಿದ್ಯಾರ್ಥಿಗಳೇ ಬೆಳೆದ ಕೆಂಪು ಬಣ್ಣದ ಮೂಲಂಗಿ ನೋಡಬಹುದು. ಇದರಂತೆ, ಹೆಬ್ಬತ್ತಿ ಶಾಲೆಯ ವಿದ್ಯಾರ್ಥಿಗಳಾದ ಮನೀಷ ಪೂಜಾರಿ, ಸಂದೀಪ ಬೋವಿವಡ್ಡರ್, ಸಂಜನಾ ಶೆಟ್ಟಿ, ಗಣೇಶ, ವಿನಾಯಕ, ಗೀತಾ, ಕಮಲಾ, ಮಂಜುಳಾ, ಸುರೇಶ… ಹೀಗೆ ಒಂದಲ್ಲ, ಎರಡಲ್ಲ, ಬಹುತೇಕ ಮಕ್ಕಳು ತರಕಾರಿ ಬೇಸಾಯದ ಪಾಠವನ್ನು ಆಡುತ್ತಲೇ ಕಲಿಯುತ್ತಿದ್ದಾರೆ. ಮಕ್ಕಳ ಕಿಚನ್ ಗಾರ್ಡನ್‌ನ ಈ ಪ್ರಯತ್ನಕ್ಕೆ ಜಿಲ್ಲಾ ಪಂಚಾಯ್ತಿ ಸಿಇಓ ಅವರೂ ಹರ್ಷ ವ್ಯಕ್ತಪಡಿಸಿದ್ದಾರೆ. ನರೇಗ ಯೋಜನೆ ಅಡಿಯಲ್ಲಿ ಕ್ಲಸ್ಟರ್‌ನ ಒಂದು ಶಾಲೆಗೆ ಕಿಚನ್ ಗಾರ್ಡನ್ ಬೆಳೆಸಲು ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ಓದಿನ ಜೊತೆಗೆ ಮಕ್ಕಳಿಗೆ ಕೃಷಿಯ ನಂಟು ಗಾಢವಾಗುತ್ತದೆ ಎನ್ನುತ್ತಾರೆ ಶಿರಸಿ ಬಿ.ಇ.ಓ ಸದಾನಂದ ಸ್ವಾಮಿ.
ಹಾಲು ಎಲ್ಲಿಂದ ಬರುತ್ತದೆ ಅಂತ ಕೇಳಿದರೆ ಅಂಗಡಿಯಿಂದ ಅನ್ನೋ ಈ ಕಾಲದಲ್ಲಿ ಮಕ್ಕಳಿಗೆ ಈ ನೆಲದ ವಾಸನೆ ಮೂಡಿಸುವ ಪ್ರಯತ್ನ ಈ ರೀತಿ ನಡೆದಿದೆ!
ರಾಘವೇಂದ್ರ ಬೆಟ್ಟಕೊಪ್ಪ