ಬೆಳ್ಳಾರೆ: ಶಾಲೆಗೆ ರಜೆ ಇದ್ದಾಗ ಕೇಟರಿಂಗ್‌ನಲ್ಲಿ ದುಡಿಯುತ್ತಿದ್ದ, ಸರಕಾರಿ ಶಾಲೆಯಲ್ಲಿ ಓದಿದರೂ ತಾಲೂಕಿನ ಮೂರನೇ ಟಾಪರ್ ಆದ, ತಾಲೂಕಿನ ಸರಕಾರಿ ಶಾಲೆಗೆ ಪ್ರಥಮ ಸ್ಥಾನಿಯಾಗಿರುವ ಮುರುಳ್ಯದ ಮಹಮ್ಮದ್ ಮಝೀಫ್ ಎಸ್‌ಎಸ್‌ಎಲ್‌ಸಿಯಲ್ಲಿ 610 (ಶೇ. 97.6) ಅಂಕ ಗಳಿಸಿದ್ದಾರೆ.
ಈತ ಮುರುಳ್ಯ ಗ್ರಾಮದ ರಾಗಿ ಪೇಟೆ ಟಿ. ಮಹಮ್ಮದ್ ಮತ್ತು ಸಮೀನಾ ಆರ್. ದಂಪತಿಯ ಪುತ್ರ. ಎಣ್ಮೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ.
ಸರಕಾರಿ ಶಾಲೆಯಲ್ಲಿ ಓದಿದ ಮಹಮ್ಮದ್ ಮಝೀಫ್ನ ಸಾಧನೆ ಗಮನಾರ್ಹವಾದುದು. ಈ ಸಾಧನೆಯ ಹಿಂದೆ ಕೋಚಿಂಗ್ ನೆರವಿಲ್ಲ. ಇಲ್ಲಿನ ಅಧ್ಯಾಪಕರು ಉತ್ತಮ ಫಲಿತಾಂಶಕ್ಕಾಗಿ ಮಾಡಿದ ಪ್ರಯತ್ನಕ್ಕೆ ನಿರೀಕ್ಷೆಗೂ ಮೀರಿ ಪ್ರತಿಫಲ ಮಝೀಫ್ ಮೂಲಕ ಲಭಿಸಿದೆ.
ಶಿಕ್ಷಕರ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದ ಮಝೀಫ್ ತನ್ನ ಸಾಧನೆಗೆ ಶಿಕ್ಷಕರ ಹಾಗೂ ಹೆತ್ತವರ ಸಹಕಾರ ಕಾರಣ ಎನ್ನುತ್ತಾರೆ. ಪಠ್ಯ ಪುಸ್ತಕದ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದ ಮಝೀಫ್ ಅಂದಂದಿನ ಪಾಠವನ್ನು ಅವತ್ತೇ ಮನನ ಮಾಡಿ ಕಲಿಯುತ್ತಿದ್ದರಂತೆ. ಅದುವೇ ಗರಿಷ್ಠ ಅಂಕ ಗಳಿಕೆಯ ಮೂಲ ಎನ್ನುತ್ತಾರೆ. ಗಣಿತದಲ್ಲಿ ಆತ ಗಳಿಸಿದ್ದು ಪೂರ್ಣ 100 ಅಂಕ.
ಅಪ್ಪ ಮದ್ರಸ ಶಿಕ್ಷಕ
ಮುರುಳ್ಯ ಗ್ರಾಮದ ರಾಗಿಪೇಟೆಯಲ್ಲಿ ಸಣ್ಣ ಮನೆ ಮಾತ್ರ ಹೊಂದಿರುವ ಮಹಮ್ಮದ್ ಮಝೀಫ್ನ ತಂದೆ ಉಪ್ಪಿನಂಗಡಿಯ ಮದ್ರಸದಲ್ಲಿ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ತಂದೆಯ ಸಂಭಾವನೆಯೇ ಈ ಮನೆಯ ಆದಾಯದ ಮೂಲ. ಮಗ ಪ್ರತಿಭಾವಂತನಾದರೂ ಸರಕಾರಿ ಶಾಲೆಯಲ್ಲಿ ಓದಿಸಿದ್ದಾರೆ. ಆದರೆ ಸರಕಾರಿ ಶಾಲೆಯಲ್ಲೂ ಉತ್ತಮ ಶಿಕ್ಷಣ ದೊರೆತರೆ ಗಣನೀಯ ಸಾಧನೆ ಮಾಡಬಹುದು ಎಂಬುದಕ್ಕೆ ಮಝೀಫ್ ಸಾಕ್ಷಿಯಾಗಿದ್ದಾರೆ. ಪಿಯುಸಿ ವಿಜ್ಞಾನ ವಿಷಯದಲ್ಲಿ ಶಿಕ್ಷಣ ಮುಂದುವರಿಸಿ ಉತ್ತಮ ಶೈಕ್ಷಣಿಕ ಜೀವನ ಸಾಗಿಸುವ ಕನಸು ಮಝೀಫ್ನದು.
ಉಮೇಶ್ ಮಣಿಕ್ಕಾರ