Advertisement
ಬೆಳ್ತಂಗಡಿ: ಮುಂಡಾಜೆ – ಸತ್ಯನಪಲ್ಕೆ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಸಂಚಾರಕ್ಕೆ ಯೋಗ್ಯ ರಸ್ತೆಯನ್ನಾಗಿಸಬೇಕೆಂಬ ನಿಟ್ಟಿನಲ್ಲಿ ಮುಂಡಾಜೆಯ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ, ಸತ್ಯನಪಲ್ಕೆ ಲಕ್ಷ್ಮೀ ನಿವಾಸದ ಶ್ರುತಿಕಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿಯವರ ಕಚೇರಿಯ ಅಧಿಕಾರಿ ರಾಜೀವ್ ರಂಜನ್ ಕುಶ್ವಹ್ ಅವರು ಉತ್ತರಿಸಿದ್ದು, ಪತ್ರದ ಉಲ್ಲೇಖದಂತೆ ರಸ್ತೆ ಅಭಿವೃದ್ಧಿ ಬಗ್ಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವ ರಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬರೆದಿದ್ದು ಇದನ್ನು ಪರಿಶೀಲನೆ ನಡೆಸಿ ಕೈಗೊಳ್ಳುವ ಕ್ರಮವನ್ನು ಮನವಿದಾರರಿಗೆ ಅಂತೆಯೇ ವಿಭಾಗ ಅಧಿಕಾರಿಗಳ ಕಚೇರಿಗೆ ತಿಳಿಸುವಂತೆ ಸೂಚಿಸಲಾಗಿದೆ.ಮುಂಡಾಜೆ – ಕಲ್ಮಂಜ – ಧರ್ಮಸ್ಥಳ ಗ್ರಾಮಗಳನ್ನು ಸಂಪರ್ಕಿಸುವ ಈ ಸಂಪರ್ಕ ರಸ್ತೆ ತೀವ್ರ ಹದಗೆಟ್ಟಿರುವ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆಯೂ ನಡೆದಿತ್ತು. ರಸ್ತೆಯ ದುಸ್ಥಿತಿಯ ಬಗ್ಗೆ ಗ್ರಾಮಸಭೆಯಲ್ಲಿ ಹಲವು ವರ್ಷಗಳಿಂದ ಪ್ರಸ್ತಾವಿಸಲಾಗಿತ್ತು.
Related Articles
ಸ್ವಂತ ವಾಹನ ಇದ್ದವರಿಗೆ ವಾಹನ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ರಸ್ತೆಯಲ್ಲಿ ವಾಹನ ಓಡಿಸುವಂತಿಲ್ಲ. ರಸ್ತೆ ಅಷ್ಟು ಹದಗೆಟ್ಟಿದೆ. ಮಕ್ಕಳನ್ನು ದ್ವಿಚಕ್ರದಲ್ಲಿ ಕುಳ್ಳಿರಿಸಿ ಶಾಲೆಗೆ ಬಿಡುವಂತಿಲ್ಲ. ರಸ್ತೆಯೇ ನಾಪತ್ತೆಯಾಗಿದ್ದು ಕೆಸರಿನಿಂದ ನಡೆದಾಡಲು ಸಾಧ್ಯವಿಲ್ಲ. ಈ ರಸ್ತೆಯಲ್ಲಿ ವಾಹನಗಳು ಸರ್ಕಸ್ ಮಾಡಿಕೊಂಡೇ ಸಂಚರಿಸುತ್ತವೆ. ಹೊಂಡ ಗುಂಡಿಗಳಿಂದಲೇ ತುಂಬಿರುವ ರಸ್ತೆಯನ್ನು ಸಾರ್ವಜನಿಕರು ಶಪಿಸುವಂತಾಗಿದೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಸೇರಲು ಕೂಡ ಸಾಧ್ಯವಾಗುತ್ತಿಲ್ಲ. ಈ ರಸ್ತೆಯ ದುರವಸ್ಥೆ ಕುರಿತು ‘ಉದಯವಾಣಿ’ ಹಲವು ಬಾರಿ ವರದಿ ಮಾಡಿ ಇಲಾಖಾಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆದಿತ್ತು.
Advertisement
ರಸ್ತೆಗೆ ಟೆಂಡರ್ ಪ್ರಕ್ರಿಯೆ ಪೂರ್ಣ ಮುಂಡಾಜೆ- ಕಲ್ಮಂಜ- ಧರ್ಮಸ್ಥಳ ರಸ್ತೆಗೆ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್)ಯಿಂದ 7 ಕೋಟಿ ರೂ. ಮಂಜೂರುಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಅನುಷ್ಠಾನಕ್ಕೆ ಬರಲಿದೆ.
– ಕೆ. ವಸಂತ ಬಂಗೇರ, ಶಾಸಕರು, ಬೆಳ್ತಂಗಡಿ – ಗುರು ಮುಂಡಾಜೆ