ಕಾರವಾರ: ಕ್ರಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಗೀತಾ ಸಾವಿಗೆ ಕಾರಣ ಎನ್ನಲಾದ ಡಾ.ಶಿವಾನಂದ ಕುಡ್ತಲಕರ್ ಬಿಎಂಎಸ್ ಡಿಪ್ಲೊಮಾ ಮುಗಿಸಿ, ಎಂಬಿಬಿಎಸ್ ನ್ನು ಹೇಗೆ ಮಾಡಿದರು, ಹೇಗೆ ಹೆರಿಗೆ ತಜ್ಞರಾದರು ಎಂದು ತನಿಖೆಯಾಗಬೇಕು . ಅಲ್ಲದೆ ಕೋಟ್ಯಾಂತರ ರೂ. ಆಸ್ತಿ ಮಾಡಿದ್ದು ಈ ಬಗ್ಗೆ ಸರಕಾರ ತನಿಖೆ ಮಾಡಬೇಕೆಂದು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಆಗ್ರಹಿಸಿದರು.
ಕಾರವಾರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಾಮಾಜಿಕ ಹೋರಾಟಗಾರರ ಮೇಲೆ ಹಣಕ್ಕಾಗಿ ಅಪಾದಿಸುತ್ತಾರೆಂದು ಪತ್ರಿಕಾ ಹೇಳಿಕೆ ನೀಡಿ,ನಮ್ಮ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ. ಸರ್ಕಾರಿ ನೌಕರನಾಗಿ, ಅದು ತನಿಖೆ ಎದುರಿಸುತ್ತಿರುವಾಗ, ಯಾರ ಅನುಮತಿ ಪಡೆದು ಪತ್ರಿಕಾ ಹೇಳಿಕೆ ನೀಡಿದರು ಎಂದು ಪ್ರಶ್ನಿಸಿದರು.
ಶಿವಾನಂದ ಕುಡ್ತಲಕರ್ ವೈದ್ಯನಾಗಲು ಅನರ್ಹ ಎಂದು ಡಾ.ಎನ್.ವಿ.ನಾಯಕ ಎಪ್ರಿಲ್ 2019 ರಂದು ಅಂದಿನ ಕ್ರಿಮ್ಸ್ ನಿರ್ದೇಶಕ ಶಿವಾನಂದ ದೊಡ್ಮನಿ ಅವರಿಗೆ ದೂರು ಸಲ್ಲಿಸಿದ್ದರು. ಇದು ಈ ವೈದ್ಯನ ಅರ್ಹತೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ
ಅಲ್ಲದೆ ಅಂದಿನ ಕ್ರಿಮ್ಸ ನಿರ್ದೇಶಕ ಶಿವಾನಂದ ದೊಡ್ಮನಿ ಅವರು ಈಗ ಅಪಾದನೆ ಎದುರಿಸುತ್ತಿರುವ ಶಿವಾನಂದ ಕುಡ್ತರಕರ್ ಬಗ್ಗೆ 12 ದೂರುಗಳನ್ನು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಅವರಿಗೆ ನೀಡಿದ್ದರು . ಆಗಲೇ ಇವರನ್ನು ವರ್ಗಾಯಿಸಿದ್ದರೆ, ಬಾಣಂತಿ ಜೋವ ಉಳಿಯುತ್ತಿತ್ತು. 12 ವರ್ಷದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಗೂಟ ಹೊಡೆದುಕೊಂಡ ಕುಳಿತ ಇವರಿಗೆ ಸರ್ಕಾರ ಶಿಕ್ಷೆ ಕೊಡುವತನಕ ಹೋರಾಟ ಮುಂದುವರಿಯಲಿದೆ. ಅಲ್ಲದೆ ನಾವು ಅನೈತಿಕ ಚಟುವಟಿಕೆ ನಡೆಸುತ್ತೇವೆ ಎಂದು ಡಾ.ಕುಡ್ತರಕರ್ ಅಪಾದಿಸಿದ್ದಾರೆ. ಅದನ್ನು ಸಾಬೀತು ಮಾಡಬೇಕು. ಅಲ್ಲದೇ ಈ ಮಾನಹಾನಿ ಅಪಾದನೆ ಮಾಡಿದ್ದಕ್ಕೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಅಲ್ಲದೇ ಇವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸುತ್ತೇವೆ ಎಂದು ರಾಘು ನಾಯ್ಕ ಹೇಳಿದರು.
ಬಾಣಂತಿ ಸಾವಿನಿಂದ ಆಕೆಯ ಎರಡು ಮಕ್ಕಳು ಅನಾಥವಾಗಿವೆ. ಆ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರಿ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು. ಸಾಮಾಜಿಕ ಕಾರ್ಯಕರ್ತ ವಿಲ್ಸನ್, ರಾಹುಲ್ ನಾಯ್ಕ ಉಪಸ್ಥಿತರಿದ್ದರು.