ಬೆಂಗಳೂರು: ತೆಲಂಗಾಣ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ, ವಿದ್ಯಾರ್ಥಿ ನಿಲಯದ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ. ತೆಲಂಗಾಣದ ಹೈದ್ರಾಬಾದ್‌ನ ಸಾಯಿ ಶರತ್(22) ಆತ್ಮಹತ್ಯೆ ಮಾಡಿ ಕೊಂಡ ವಿದ್ಯಾರ್ಥಿ. ಮೃತ ಸಾಯಿ ಶರತ್, ಹೈದ್ರಾಬಾದ್‌ನ ಕೋದಂ ಡರಾಮ ಎಂಬುವರ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇನ್‌ಫಾರ್ಮೆಷನ್ ಟೆಕ್ನಾಲಜಿ ಕಾಲೇಜಿನಲ್ಲಿ ಶರತ್ 4ನೇ ವರ್ಷದ ಇಂಟಿಗ್ರೇಟೆಡ್ ಕೋರ್ಸ್ ವ್ಯಾಸಂಗ ಮಾಡುತ್ತಿತ್ತ, ವಿದ್ಯಾರ್ಥಿನಿಲಯದಲ್ಲಿ ನೆಲೆಸಿದ್ದ. ಗುರುವಾರ ಸಂಜೆ ತನ್ನ ಸ್ನೇಹಿತನ ಹುಟ್ಟು ಹಬ್ಬದ ಪಾರ್ಟಿ ಮುಗಿಸಿಕೊಂಡು ರಾತ್ರಿ 10 ಗಂಟೆ ಸುಮಾರಿಗೆ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದ ಸಾಯಿ ಶರತ್, ಬೆಳಗ್ಗೆ 4.30ರ ಸುಮಾರಿಗೆ ಕಟ್ಟಡದ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬಿದ್ದ ಸದ್ದು ಕೇಳಿ ಭದ್ರತಾ ಸಿಬ್ಬಂದಿ ಕಟ್ಟಡದ ಬಳಿ ಪರಿಶೀಲಿಸಿದಾಗ ಸಾಯಿ ಶರತ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಶರತ್ ಮೃತಪಟ್ಟಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಠಾಣೆ ಇನ್ ಸ್ಪೆಕ್ಟರ್ ಮಲ್ಲೇಶ್ ಹಾಗೂ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆತ್ಮಹತ್ಯೆ ಪ್ರಕರಣ ಖಲಿಸಿ ಕೊಂಡಿದ್ದಾರೆ. ವಿದ್ಯಾರ್ಥಿನಿಲಯದಲ್ಲಿದ್ದ ಶರತ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸದಾ ಒಬ್ಬನೇ ಇರುತ್ತಿದ್ದ. ಕುಟುಂಬದ ಕುರಿತಾಗಲಿ, ವೈಯಕ್ತಿಕ ವಿಷಯವನ್ನಾಗಲಿ ಸಹಪಾಠಿಗಳ ಜತೆ ಹಂಚಿಕೊಳ್ಳುತ್ತಿರಲಿಲ್ಲ. ಯಾರೊಂದಿಗೂ ದ್ವೇಷ ಕಟ್ಟಿಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ ಎಂದು ಎಲೆಕ್ಟ್ರಾನಿಕ್‌ಸಿಟಿ ಠಾಣೆ ಪೊಲೀಸರು ತಿಳಿಸಿದ್ದಾರೆ.