ಚಾಮರಾಜನಗರ: ಆನ್ ಲೈನ್ ಪಾಠಕ್ಕೆ ಸ್ಮಾರ್ಟ್ ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯೋರ್ವಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ.
ಸಾಗಡೆ ಸರ್ಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ, ರಾಜೇಶ್ ಎಂಬುವರ ಪುತ್ರಿ ಹರ್ಷಿತಾ (15) ಮೃತಪಟ್ಟವಳು.
9ನೇ ತರಗತಿ ತೇರ್ಗಡೆಯಾಗಿ, ಈ ವರ್ಷ 10 ತರಗತಿಗೆ ಹರ್ಷಿತಾ ದಾಖಲಾಗಿದ್ದಳು.
ಶಾಲೆಯಲ್ಲಿ ಆನ್ ಲೈನ್ ಕ್ಲಾಸ್ ನಡೆಯುತ್ತಿದ್ದು, ಸಹಪಾಠಿಗಳ ಬಳಿ ಸ್ಮಾರ್ಟ್ ಫೋನ್ ಇದೆ. ತನಗೂ ಮೊಬೈಲ್ ಬೇಕು ಎಂದು ಮನೆಯಲ್ಲಿ ಹಟ ಮಾಡುತ್ತಿದ್ದಳು. ವೃತ್ತಿಯಲ್ಲಿ ಟೈಲರ್ ಆಗಿರುವ ರಾಜೇಶ್ ಅವರು, ಆರ್ಥಿಕವಾಗಿ ಸಬಲರಾಗಿರಲಿಲ್ಲ. ಸ್ವಲ್ಪ ದಿನಗಳ ನಂತರ ಮೊಬೈಲ್ ತೆಗೆದುಕೊಡುವುದಾಗಿ ಭರವಸೆ ನೀಡಿದ್ದರು ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
Related Articles
ಅಪ್ಪನ ಮಾತನ್ನು ಕೇಳದ ಹರ್ಷಿತಾ, ತನಗೆ ಈಗಲೇ ಫೋನ್ ಬೇಕು ಎಂದು ಒತ್ತಾಯಿಸಿ, ಬೆಳೆಗಳಿಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕವನ್ನು ಸೇವಿಸಿದ್ದಾಳೆ.
ತೀವ್ರವಾಗಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯನ್ನು ತಕ್ಷಣ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು.
ಆನ್ ಲೈನ್ ಪಾಠ ಕೇಳಲು ಮೊಬೈಲ್ ಕೊಡಿಸುವಂತೆ ಹರ್ಷಿತಾ ಕೇಳಿದ್ದಳು. ದುಡ್ಡು ಬಂದ ನಂತರ ಕೊಡಿಸುವುದಾಗಿ ಹೇಳಿದ್ದೆ ಎಂಬುದಾಗಿ ಹರ್ಷಿತಾ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಚಾಮರಾಜನಗರ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಲೋಹಿತ್ ಕುಮಾರ್ ತಿಳಿಸಿದ್ದಾರೆ
ಸಾಗಡೆ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಗಜೇಂದ್ರ ಪ್ರತಿಕ್ರಿಯಿಸಿ ನಾವು ಆನ್ ಲೈನ್ ತರಗತಿ ಮಾಡುತ್ತಿರಲಿಲ್ಲ. ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಊರಿಗೆ ಹೋಗಿ ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.