Advertisement

ವಿದ್ಯಾರ್ಥಿಗಳ ಪೊಲೀಸ್‌ ಸೇವೆ

06:00 AM Nov 16, 2018 | Team Udayavani |

ಇಂದಿನ ಅನೇಕ ಮಕ್ಕಳ ಮೇಲೆ ಆಲಸಿಗಳು, ಕೇವಲ ಪುಸ್ತಕ ಹಿಡಿದುಕೊಂಡು ದಿನ ದೂಡುತ್ತಾರೆ, ಒಂದೂ ಕೆಲಸವೂ ಅರಿಯದು ಎಂಬ ಆರೋಪವಿದೆ. ಅದರಲ್ಲೂ ಇಂದಿನ ಯುವಜನತೆಯ ಬಗ್ಗೆ ಹೆಚ್ಚಾಗಿ ಉದಾಸೀನದ ಪ್ರತಿಕ್ರಿಯೆಗಳೇ ವ್ಯಕ್ತವಾಗುತ್ತವೆ. ಆದರೆ, ಇದೇ ಯುವಜನತೆ ತಮ್ಮ ಸ್ವಇಚ್ಛೆಯಿಂದ ಪೊಲೀಸ್‌ ಕರ್ತವ್ಯಗಳನ್ನು ನಿರ್ವಹಿಸಿ ಸಾಮಾಜಿಕ ಸೇವೆಯನ್ನು ಮಾಡಿದ ನಿದರ್ಶನ ಇಲ್ಲಿದೆ.

Advertisement

ರಸ್ತೆಗಳಲ್ಲಿ ನಾವೂ ನೀವೂ ಸಂಚರಿಸುವಾಗ ಒಂದಷ್ಟು ಪೊಲೀಸರ ತಂಡ ಅಲ್ಲಲ್ಲಿ  ಶ್ವೇತವಸ್ತ್ರಧಾರಿಗಳಾಗಿ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಪರಿಶೀಲಿಸುತ್ತಿರುತ್ತಾರೆ. ಲೈಸೆ ಇದೆಯೇ, ಹೆಲ್ಮೆಟ್‌ ಧರಿಸಿದ್ದಾರೆಯೆ, ಸೀಟ್‌ ಬೆಲ್ಟ… ಧರಿಸಿದ್ದಾರೆಯೇ, ಹಿಂಬದಿ ಸವಾರರು ಸರಿಯಾಗಿದ್ದಾರೆಯೇ? ಗಮನಿಸಿ ವಿಶಿಲ್‌ ಹೊಡೆಯುತ್ತ, ನಿಯಮ ಉಲ್ಲಂ ಸಿದವರಿಗೆ ದಂಡವೋ ಅಥವಾ ಬುದ್ಧಿಮಾತನ್ನೋ ಹೇಳಿ ತಿದ್ದುತ್ತಿರುತ್ತಾರೆ. ಇದೇ ಕರ್ತವ್ಯಬದ್ಧ ಕೆಲಸವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ ಎಂದರೆ ಶ್ರೀಸಾಮಾನ್ಯನೊಬ್ಬ ನಂಬಲು ಹಿಂದೇಟು ಹಾಕಬಹುದು. ಆದರೂ ಹದಿನೆಂಟರ ಹರೆಯದ ವಿದ್ಯಾರ್ಥಿಗಳ ಸಮೂಹವೊಂದು ಈ ಕರ್ತವ್ಯ ಪೂರೈಸಿ ಸೈ ಎನಿಸಿಕೊಂಡಿದ್ದಾರೆ. 

ಇಂದು ಸುಖೀ ಜೀವನವನ್ನು ಬಯಸುವವರ ಸಂಖ್ಯೆಯೇ ಹೆಚ್ಚು. ಅದರಲ್ಲೂ ಮಕ್ಕಳು ಆರಾಮಕ್ಕಾಗಿ ಹಂಬಲಿಸುವುದು ಸಾಮಾನ್ಯವೇ. ಆದರೆ ಈ ತಂಡದ ಮಕ್ಕಳು ಕಾಲೇಜಿನಲ್ಲಿ ಓದಿ, ಮನೆಯಲ್ಲಿ ವಿರಮಿಸುವ ಬದಲು ರಸ್ತೆ ನಿರ್ವಹಣಾ ಕೆಲಸಕ್ಕೆ ಹಾಜರಾದರು. ಪುಸ್ತಕ ಹಿಡಿಯಬೇಕಾದ ಕೈಗಳು ಆರಕ್ಷಕ ಕರ್ತವ್ಯವನ್ನು ನಿರ್ವಹಿಸುವ ಮೂಲಕ ನಿಯಂತ್ರಣ ತರಬೇತಿಯೊಡನೆ ಸಾಮಾಜಿಕ ಸೇವೆಯ ಮೆರೆದರು. ಪುಟ್ಟ ಕೈಗಳು ಕೈಯಲ್ಲಿ ವಿಶಲ್‌ ಹಿಡಿದು, ರಸ್ತೆ ಸವಾರರನ್ನು ನಿಯಂತ್ರಿಸುತ್ತಿದ್ದರು. ಇದು ಇತ್ತೀಚೆಗೆ ಉಜಿರೆ-ಧರ್ಮಸ್ಥಳ ರಸ್ತೆಯಲ್ಲಿ ವಿದ್ಯಾರ್ಥಿಗಳಿಂದ ನಡೆದಂತಹ ಸೇವೆ ಇದು. ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಉಜಿರೆಯ ರೋವರ್ಸ್‌-ರೇಂಜರ್ಸ್‌ ವಿಭಾಗದ ನಲವತ್ತು ವಿದ್ಯಾರ್ಥಿಗಳನ್ನೊಳಗೊಂಡ ತಂಡವೇ ಈ ಕೆಲಸದ ರೂವಾರಿಗಳು. 

ಯೋಚನೆ-ಯೋಜನೆ
ಒಂದು ಬಾರಿ ಕಾಲೇಜಿಗೆ ಬೆಳ್ತಂಗಡಿ ಪೋಲಿಸ್‌ ಅಧಿಕಾರಿಗಳಾದ ಒಡಿಯಪ್ಪ ಗೌಡ ಭೇಟಿ ನೀಡಿ,  ಟ್ರಾಫಿಕ್‌ ಪೋಲಿಸ್‌ ಕರ್ತವ್ಯ,  ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು. ಅದಾಗಲೇ ರೋವರ್ಸ್‌- ರೇಂಜರ್ಸ್‌ ಮಕ್ಕಳಿಗೆ ಕುತೂಹಲ ಪ್ರಾರಂಭವಾಯಿತು. ನಲವತ್ತು ವಿದ್ಯಾರ್ಥಿಗಳು ತಮ್ಮ ಯೋಚನೆಯನ್ನು ತಂಡದ ರೇಂಜರ್‌ ಲೀಡರ್‌ ಅಂಕಿತಾ. ಎಂ. ಕೆ. ಅವರಿಗೆ ತಿಳಿಸಿ ಟ್ರಾಫಿಕ್‌ ಪೊಲೀಸರಾಗಿ ನಾವೂ ಕರ್ತವ್ಯ ನಿರ್ವಹಿಸಬೇಕೆಂದು ಒಲವು ತೋರಿದರು. ಮಕ್ಕಳ ಆಸಕ್ತಿಯನ್ನು ಗಮನಿಸಿದ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ಬಳಗ ಪೋಲಿಸ್‌ ಅಧಿಕಾರಿಗಳಿಂದ ಅನುಮತಿ ಪಡೆದು ಒಂದು ವಾರಗಳ ಕಾಲ ವಿದ್ಯಾರ್ಥಿಗಳು ರಸ್ತೆ ನಿಯಂತ್ರಣ ಕೆಲಸದಲ್ಲಿ ಕೈ ಜೋಡಿಸಲು ಸಮ್ಮತಿಸಿದರು. 

ಕಾರ್ಯ ವೈಖರಿ
ಪ್ರತೀ ತಂಡದಲ್ಲಿ ಆರರಿಂದ ಏಳು ವಿದ್ಯಾರ್ಥಿಗಳು ಸೇರಿಕೊಂಡು 6 ತಂಡಗಳು ರಚನೆಯಾಯಿತು. ಒಂದು ವಾರ ದಿನಕ್ಕೊಂದು ತಂಡದಂತೆ ವಿದ್ಯಾರ್ಥಿಗಳು ಬೆಳಿಗ್ಗೆ 9ರಿಂದ 11 ಗಂಟೆ ತನಕ ಹಾಗೂ ಸಾಯಂಕಾಲ 4 ಗಂಟೆಯಿಂದ 6 ಗಂಟೆ ತನಕ ರಸ್ತೆಯಲ್ಲಿ ಪೊಲೀಸ್‌ಗಳಾದರು. ಪಕ್ಕಾ ಪೊಲೀಸರಂತೆ ತರಬೇತಿ ಪಡೆದು ಲೈಸೆ ಪರಿಶೀಲನೆ, ಹೆಲ್ಮೆಟ್‌, ಸೀಟ್‌ ಬೆಲ್ಟ… ಪರಿಶೀಲನೆ ನಡೆಸಿ, ಬುದ್ಧಿ ಮಾತು ಅಥವಾ ಆಯಾ ತಪ್ಪುಗಳಿಗನುಗುಣವಾಗಿ ದಂಡ ವಿಧಿಸಿದ್ದೂ ಇದೆ. 

Advertisement

ಒಂದು ವಾರದ ಕೆಲಸ ತುಂಬಾನೇ ಖುಷಿ ನೀಡಿದೆ. ಮತ್ತೂಮ್ಮೆ ಇದೇ ರೀತಿ ನಾವು ಪೊಲೀಸ್‌ಗಳಾಗಿ ರಸ್ತೆಯಲ್ಲಿ ನಿಲ್ಲಬೇಕು ಎನಿಸುತ್ತದೆ. ಈ ಮೂಲಕ ವಾಹನ ಸವಾರರ ನಿಯಮದ ಜೊತೆ ಪೊಲೀಸ್‌ ಕರ್ತವ್ಯದ ಬಗ್ಗೆಯೂ ಅರಿವಾಗಿದೆ. ನಾವು ರಸ್ತೆಯಲ್ಲಿ ಪೊಲೀಸ್‌ ರೂಪದಲ್ಲಿ ನಿಂತಿದ್ದ ವೇಳೆ ಅನೇಕರು ನಮಗೆ ಗೌರವಿಸುತ್ತಿದ್ದರು. ಇನ್ನು ಅನೇಕರು ಮಕ್ಕಳೆಂದು ಸೀದಾ ಹೋಗುತ್ತಿದ್ದರು. ಕೆಲವರು ನಿಯಮ ತಿಳಿಸಿದ್ದಕ್ಕೆ ಕೃತಜ್ಞತೆ ಹೇಳುತ್ತಿದ್ದರು. ನಮ್ಮೊಡನೆ ಪೊಲೀಸರು ಕೂಡಾ ಇದ್ದು ಸಹಕರಿಸಿದ್ದಾರೆ. ಜೊತೆಗೆ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವರ್ಗ ವಿಶೇಷವಾಗಿ ಅಧ್ಯಾಪಕ ಸ್ಮಿತೇಶ್‌ ಎಸ್‌. ಬಾಯರ್‌ ಹಾಗೂ ರೇಂಜರ್‌ ಲೀಡರ್‌ ಅಂಕಿತಾ ಎಂ. ಕೆ. ನಮ್ಮೊಡನಿದ್ದು ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಒಟ್ಟಿನಲ್ಲಿ ನಾವು ಸಮಯವನ್ನು ಉತ್ತಮ ಕೆಲಸಕ್ಕಾಗಿ ವಿನಿಯೋಗಿಸಿದ್ದೇವೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ, ಕಾಲೇಜಿನ ವಿದ್ಯಾರ್ಥಿಗಳಾದ ಸುಶಾಂತ್‌ ಮತ್ತು ಶ್ರೇಷ್ಠ. 

ಈ ರೀತಿಯ ಹೊಸ ಪ್ರಾಯೋಗಿಕ ಕಾರ್ಯ ಉಜಿರೆ ವಿದ್ಯಾರ್ಥಿಗಳ ಮೂಲಕ ಆರಂಭವಾಗಿ ಯಶಸ್ವಿ ಕಂಡಿತು. ಸೇವೆ ಅಲ್ಪಕಾಲಿಕವಾಗಿದ್ದರೂ ಆ ಅನುಭವ ಮಾತ್ರ ದೀರ್ಘಾವಧಿ ಹೊಂದಿರುವುದು ಖಂಡಿತ. ಇಂತಹ ಪ್ರಯೋಗಾತ್ಮಕ ಕಾರ್ಯಗಳು ಇನ್ನಷ್ಟು ಯುವಕರಿಂದ ಮೂಡಿ ಬರಬೇಕು, ಈ ಮೂಲಕ ಸ್ವಸ್ಥ ಸಮಾಜದ ಭದ್ರ ಬುನಾದಿಗಳಾಗಿ ಯುವಜನತೆ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ. 

ಪ್ರಜ್ಞಾ ಬಿ.
ದ್ವಿತೀಯ ಪತ್ರಿಕೋದ್ಯಮ ವಿಭಾಗ ಎಸ್‌ ಡಿ ಎಮ್‌ ಸಿ ಉಜಿರೆ 

Advertisement

Udayavani is now on Telegram. Click here to join our channel and stay updated with the latest news.

Next