Advertisement

ಹಾದಿ ತಪ್ಪುತ್ತಿವೆಯೇ ವಿದ್ಯಾರ್ಥಿ ಚಳುವಳಿಗಳು?

03:50 AM Feb 28, 2017 | Harsha Rao |

ಬಹುಪಾಲು ತಥಾಕಥಿತ ವಿದ್ಯಾರ್ಥಿ ನಾಯಕರುಗಳಿಗೆ ಸ್ವಂತಿಕೆಯ ದೂರದರ್ಶಿತ್ವ ಇಲ್ಲ; ಅವರು ತಮ್ಮ ಮುಂದಿನ ಹಾದಿಯ ಬಗ್ಗೆ ತಮಗೆ ಬೆಂಬಲ ನೀಡುವ ರಾಜಕೀಯ ಪಕ್ಷಗಳ ಇಲ್ಲವೇ ರಾಜಕಾರಣಿಗಳ ಕಡೆಗೆ ನೋಡುತ್ತಾರೆ. ಇಂತಹ ಸನ್ನಿವೇಶಗಳಿಗಾಗಿಯೇ ಕಾಯುತ್ತಿರುವ ಸಮಯಸಾಧಕ ರಾಜಕಾರಣಿಗಳು ಈ ಬಗೆಯ ವಿದ್ಯಾರ್ಥಿ ಮುಖಂಡರುಗಳನ್ನು ಸುಲಭವಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಎಲ್ಲಿಯವರೆಗೆ ವಿದ್ಯಾರ್ಥಿ ಸಂಘಟನೆಗಳು ರಾಜಕೀಯ ಪಕ್ಷಗಳ ಹಿತಾಸಕ್ತಿಗಳಿಂದ ಮುಕ್ತವಾಗಿರುವುದಿಲ್ಲವೋ ಅಲ್ಲಿಯವರೆಗೆ ನಿಜದರ್ಥದ ವಿದ್ಯಾರ್ಥಿ ಚಳುವಳಿಗಳನ್ನು ನಿರೀಕ್ಷಿಸುವುದು ಕಷ್ಟ.

Advertisement

ತರಗತಿಗಳೆಲ್ಲ ಶಾಂತವಾಗಿ ನಡೆಯುತ್ತಿದ್ದವು. ವಿದ್ಯಾರ್ಥಿಗಳು, ಅಧ್ಯಾಪಕರು ಅವರವರ ಕೆಲಸಗಳಲ್ಲಿ ತಲ್ಲೀನರಾಗಿದ್ದರು. ಇದ್ದಕ್ಕಿದ್ದಂತೆ ಹೊರಗಿನ ರಸ್ತೆಯಲ್ಲಿ ಗೌಜು ಗಲಾಟೆ. ಕೊಂಚ ಹೊತ್ತಲ್ಲೇ ಆ ಸದ್ದು ಕಾಲೇಜಿನ ಮಹಾದ್ವಾರದಲ್ಲಿ! ಇನ್ನೂ ಐದು ನಿಮಿಷ ಕಳೆದಾಗ, ಗದ್ದಲ ಕಾಲೇಜಿನ ಮೈದಾನದಲ್ಲೇ ಕೇಳಿಸತೊಡಗಿತು. ಒಂದಷ್ಟು ಯುವಕರು ಘೋಷಣೆಗಳನ್ನು ಕೂಗುತ್ತಾ ಧಡಧಡನೆ ಮೆಟ್ಟಿಲೇರಿ ಕಾರಿಡಾರುಗಳಲ್ಲಿ ಓಡಾಡಲಾರಂಭಿಸಿದರು. ತರಗತಿ ಕೊಠಡಿಗಳಿಗೂ ಪ್ರವೇಶಿಸಿ ಅಧ್ಯಾಪಕರುಗಳನ್ನೆಲ್ಲ ಪಾಠ ನಿಲ್ಲಿಸುವಂತೆ ಸೂಚಿಸಿ, ತಮ್ಮೊಡನೆ ಪ್ರತಿಭಟನೆಗೆ ಬರುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು. 

ಮೇಸ್ಟ್ರೆಗಳು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಲ್ಲದೆ ಬೇರೆ ದಾರಿಯಿರಲಿಲ್ಲ. ಒಂದಷ್ಟು ವಿದ್ಯಾರ್ಥಿಗಳು ಆ ಯುವಕರ ಗುಂಪನ್ನು ಸೇರಿಕೊಂಡರೆ, ಇನ್ನೂ ಒಂದಷ್ಟು ಮಂದಿ ಅಲ್ಲಿ ಇಲ್ಲಿ ಚದುರಿಕೊಂಡರು. ಕೆಲವರು ಮನೆಯ ಹಾದಿ ಹಿಡಿದರೆ ಇನ್ನು ಕೆಲವರು ಸುಲಭದ ಕಾಲಯಾಪನೆಯ ಖುಷಿಯಲ್ಲಿ ಮಾಯವಾದರು. ಅಲ್ಲಿಗೆ ಆ ದಿನದ ಪಾಠಪ್ರವಚನಗಳು ಮುಕ್ತಾಯವಾದಂತೆಯೇ!

“ಏನ್‌ ವಿಷ್ಯಾನಪ್ಪಾ?’ ಅಂತ ಆಮೇಲೆ ಎದುರಿಗೆ ಸಿಕ್ಕಿದ ಒಂದೆರಡು ಹುಡುಗ- ಹುಡುಗಿಯರನ್ನು ಸುಮ್ಮನೇ ವಿಚಾರಿಸಿದೆ. “ಏನೋ ಗೊತ್ತಿಲ್ಲ ಸಾರ್‌. ಅವರೆಲ್ಲ ಬರೊÅà ಅಂತ ಎಳಕೊಂಡು ಹೋದ್ರು. ನಾವೂ ಬೇರೆ ದಾರಿ ಇಲೆª ಧಿಕ್ಕಾರ ಹೇಳ್ಕೊಂಡು ಸ್ವಲ್ಪ ದೂರ ಹೋಗಿ ಬಂದ್ವಿ’ ಅಂತ ಅಮಾಯಕರಾಗಿ ಮುಖ ಮುಖ ನೋಡಿಕೊಂಡರು ಆ ವಿದ್ಯಾರ್ಥಿಗಳು.

ವರ್ಷದಲ್ಲಿ ಕನಿಷ್ಠ ನಾಲ್ಕೋ ಐದೋ ಬಾರಿ ಇಂತಹ ಘಟನೆಗಳು ನಡೆಯುವುದು ಈಚೀಚೆಗೆ ಸಾಮಾನ್ಯ. ತಾವೇನು ಮಾಡುತ್ತಿದ್ದೇವೆ ಎಂಬುದನ್ನು ಸಂಘಟಕರಾಗಲೀ, ಭಾಗವಹಿಸಿದವರಾಗಲೀ ತಿಳಿದುಕೊಂಡಂತೆ ಇರುವುದಿಲ್ಲ. ಮರುದಿನ ಪತ್ರಿಕೆಗಳಲ್ಲಿ ಮೂರು ಕಾಲಂ ಸುದ್ದಿ ಬಂದಲ್ಲಿಗೆ ಅವರಿಗೆ ಒಂದು ರೀತಿಯ ಸಮಾಧಾನ.

Advertisement

ವಿದ್ಯಾರ್ಥಿ ಸಂಘಟನೆಗಳಾಗಲೀ, ಅವರ ಆಂದೋಲನಗಳಾಗಲೀ, ಮರಳಿನಿಂದ ನೀರು ಹಿಂಡುವ ಕೆಲಸ ಮಾಡುತ್ತಿವೆ ಎಂದು ನಾನು ಹೇಳುತ್ತಿಲ್ಲ. ವಿದ್ಯಾರ್ಥಿ ಚಳುವಳಿಗಳಿಗೆ ನಮ್ಮ ಇತಿಹಾಸದಲ್ಲಿ ಅವುಗಳದ್ದೇ ಆದ ಸ್ಥಾನ ಇದೆ. ಸ್ವಾತಂತ್ರ್ಯ ಹೋರಾಟದಿಂದ ತೊಡಗಿ ಇಂದಿನವರೆಗೂ ಹತ್ತು ಹಲವು ಆಂದೋಲನಗಳಲ್ಲಿ ವಿದ್ಯಾರ್ಥಿ ಶಕ್ತಿಯ ಅನಾವರಣವಾಗಿದೆ. ಪ್ರಜಾnವಂತರು ಎಚ್ಚರಗೊಳ್ಳಬೇಕಾದ ಹತ್ತೆಂಟು ವಿಚಾರಗಳು ಬಂದಾಗಲೆಲ್ಲ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಬೀದಿಗಿಳಿದು ಹೋರಾಡಿದ್ದಾರೆ; ಪ್ರತಿಭಟನೆಯನ್ನು ದಾಖಲಿಸಿದ್ದಾರೆ; ತಮ್ಮ ಸಹವರ್ತಿಗಳಲ್ಲಿ ಇನ್ನಷ್ಟು ತಿಳುವಳಿಕೆ ಹಾಗೂ ಜಾಗೃತಿಯನ್ನು ಮೂಡಿಸಲು ಯತ್ನಿಸಿದ್ದಾರೆ.

ಆದರೆ ವರ್ಷಗಳು ಕಳೆದಂತೆ ಪರಿಸ್ಥಿತಿ ಹಾಗೆಯೇ ಉಳಿದುಕೊಂಡಿದೆಯೇ ಎಂದು ಯೋಚಿಸುವ ಅನಿವಾರ್ಯತೆ ಬಂದಿದೆ. ವಿದ್ಯಾರ್ಥಿ ಸಂಘಟನೆಗಳು ಕೈಗೆತ್ತಿಕೊಳ್ಳುತ್ತಿರುವ ವಿಷಯಗಳು ಮತ್ತು ಬಹುತೇಕ ಹೋರಾಟಗಳು ಸಾಗುತ್ತಿರುವ ದಿಕ್ಕು ನೋಡಿದರೆ ಇಂತಹ ದಿಗಿಲು ಕಾಡುವುದು ಸಹಜವೇ ಆಗಿದೆ.

ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳಾಗಿಯೇ ಉಳಿದಿವೆಯೇ ಎಂಬುದು ಮೊತ್ತಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ. ಬಹುಪಾಲು ಸಂಘಟನೆಗಳೂ ರಾಜಕೀಯ ಪಕ್ಷಗಳ ಮುಖವಾಣಿಗಳಾಗಿವೆ ಅಥವಾ ಸ್ವತಃ ರಾಜಕೀಯ ಪಕ್ಷಗಳೇ ಆಗಿಬಿಟ್ಟಿವೆ. ಈ ಸಂಘಟನೆಗಳ ಮುಂದಾಳುಗಳಿಗೆ ತಮ್ಮ ಸಹಪಾಠಿಗಳ ಅಭ್ಯುದಯಕ್ಕಿಂತಲೂ ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಳನ್ನು ತೃಪ್ತಿಗೊಳಿಸಿಕೊಳ್ಳುವುದು ಮತ್ತು ಭವಿಷ್ಯದ ರಾಜಕೀಯ ಕನಸುಗಳಿಗೆ ಬುನಾದಿ ಹಾಕಿಕೊಳ್ಳುವುದೇ ಹೆಚ್ಚು ಮುಖ್ಯವಾಗಿದೆ. ಇಂತಹ ಸಂಘಟನೆಗಳು ಮತ್ತು ಮುಖಂಡರುಗಳ ನಡುವೆ ವೃತ್ತಿಪರ ರಾಜಕಾರಣಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಸುಲಭವಾಗಿದೆ. ಹೀಗಾಗಿ ಕ್ಯಾಂಪಸ್‌ ಒಳಗಿನ ಯಾವುದೇ ಘಟನೆಯೂ ಕ್ಷಣಮಾತ್ರದಲ್ಲಿ ರಾಜಕೀಯಗೊಳ್ಳುತ್ತದೆ ಮತ್ತು ಬೇಕುಬೇಕಾದ ಬಣ್ಣಗಳನ್ನು ಪಡೆದುಕೊಳ್ಳುತ್ತದೆ. 

ಕ್ಯಾಂಪಸ್‌ನೊಳಗೆ ಹುಟ್ಟಿಕೊಳ್ಳುವ ಸಮಸ್ಯೆಗಳ ಬಗ್ಗೆ ತಮ್ಮ ಸಹಪಾಠಿಗಳನ್ನು ಶಿಕ್ಷಿತರನ್ನಾಗಿಸುವ ಕೆಲಸವನ್ನು ಸಂಘಟನೆಗಳು ಮಾಡುತ್ತಿಲ್ಲ. ಬದಲಾಗಿ ಯಾವುದಾದರೊಂದು ರೀತಿಯಲ್ಲಿ ಎಲ್ಲರನ್ನೂ ಒಂದು ಕುರುಡು ಪ್ರವಾಹದಲ್ಲಿ ಕೊಂಡೊಯ್ಯುವ ಅವಸರವಷ್ಟೇ ಅವರಲ್ಲಿ ಕಾಣುತ್ತಿದೆ. ತಾವು ಮಾಡುತ್ತಿರುವ ಆಂದೋಲನದ ಹಿನ್ನೆಲೆ- ಮುನ್ನೆಲೆಗಳನ್ನು ತಮ್ಮ ಸಹವರ್ತಿಗಳಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡುವುದಕ್ಕಿಂತಲೂ ತಾವು ಅರ್ಥ ಮಾಡಿಕೊಂಡಿರುವ ರೀತಿಯಲ್ಲಿ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. 

ಸಂಘಟನೆಗಳಲ್ಲಿ ಒಂದು ಬಗೆಯ ತೀವ್ರಗಾಮಿತ್ವ ಬೆಳೆಯುತ್ತಿದೆಯೇ ಹೊರತು ತಾವು ಸಾಗಬೇಕಾಗಿರುವ ದಾರಿಯ ಬಗ್ಗೆ ದೂರಗಾಮಿ ಚಿಂತನೆಗಳಿಲ್ಲ. “ಒಂದು ಸಂಘಟನೆ ಎರಡು ಹೆಜ್ಜೆ ಮುಂದಕ್ಕೆ ಹೋದರೆ ಪ್ರತಿಸ್ಪರ್ಧಿ ಸಂಘಟನೆ ಹನ್ನೆರಡು ಹೆಜ್ಜೆ ಮುಂದೆ ಹೋಗಬೇಕೆಂಬ ಸ್ಪರ್ಧೆ ಮಾತ್ರ ಕಾಣುತ್ತಿದೆ. ವಿದ್ಯಾರ್ಥಿಗಳನ್ನು ಬಲವಂತವಾಗಿ ತರಗತಿಗಳಿಂದ ಹೊರಗೆ ಕಳುಹಿಸಿ “ಈ ದಿನ ನಿಮಗೆ ಫ‌ುಲ್‌ ಫ್ರೀಡಂ… ನಿಮಗೆ ಇಷ್ಟ ಬಂದಂತೆ ಇರಿ’ ಎಂದು ಹೇಳಿದ ಕೂಡಲೇ ಸಂಘಟನೆಗಳ ಅಥವಾ ಹೋರಾಟದ ಉದ್ದೇಶ ಸಾರ್ಥಕವಾಯಿತೇ? ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿಗೆ ತಾವು ತರಗತಿ ಬಹಿಷ್ಕರಿಸಿದ್ದೇಕೆಂಬ ತಿಳುವಳಿಕೆ ಇದೆ?’

ಇನ್ನೊಂದು ಆತಂಕಕಾರಿ ಸಂಗತಿಯೆಂದರೆ, ಎಲ್ಲ ಕ್ಷೇತ್ರಗಳಂತೆ ವಿದ್ಯಾರ್ಥಿ ಸಂಘಟನೆಗಳೂ ಜಾತೀಯತೆಯ ಕಪಿಮುಷ್ಟಿಯಲ್ಲಿ ನಲುಗುತ್ತಿರುವುದು. ವಿದ್ಯಾರ್ಥಿ ಸಂಘಟನೆಗಳ ಒಳಗೆ “ವಿದ್ಯಾರ್ಥಿಗಳು’ ಎಂಬ ಒಂದೇ ಜಾತಿಯ ಸದಸ್ಯರಿಲ್ಲ; ಅಲ್ಲಿಯೂ ವಿವಿಧ ಜಾತಿಗಳ, ಉಪಜಾತಿಗಳ ಬಣಗಳು ಹುಟ್ಟಿಕೊಂಡಿವೆ. ಒಂದು ಕಡೆ ರಾಜಕೀಯ ತಾಸಕ್ತಿಗಳು ಚಳುವಳಿಗಳನ್ನು ಒಡೆಯುತ್ತಿದ್ದರೆ ಇನ್ನೊಂದೆಡೆ ಜಾತಿ ಲೆಕ್ಕಾಚಾರಗಳು ವಿದ್ಯಾರ್ಥಿಗಳನ್ನು ದಶದಿಕ್ಕುಗಳಿಗೆ ಚದುರಿಸಿವೆ. ಕ್ಯಾಂಪಸ್‌ ಒಳಗಿನ ಜಾತಿಯ ಬೀಜಗಳಿಗೆ ನೀರೆರೆಯುವ ಕೆಲಸಗಳನ್ನು ಅಧ್ಯಾಪಕರೂ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಎಲ್ಲವನ್ನೂ ಜಾತಿಯ ಆಧಾರದಲ್ಲೇ ಅಳೆದು ತೂಗುತ್ತಿರುವ ವಿಶ್ವವಿದ್ಯಾನಿಲಯಗಳ ಅನೇಕ ಅಧ್ಯಾಪಕರುಗಳು ತಮ್ಮ ವಿದ್ಯಾರ್ಥಿಗಳಲ್ಲಿ ಇನ್ನೆಂತಹ ಜಾತ್ಯತೀತ ಮನೋಭಾವವನ್ನು ಮೂಡಿಸಬಲ್ಲರು?

ವಿದ್ಯಾರ್ಥಿ ಸಂಘಟನೆಗಳು ಇನ್ನಾದರೂ ರಾಜಕೀಯ ಬಿಟ್ಟು ನಿಜವಾದ ಸಮಸ್ಯೆಗಳತ್ತ ಗಮನ ಹರಿಸದೇ ಇದ್ದರೆ, ರಾಜಕೀಯ ಪಕ್ಷಗಳು- ಜಾತಿ ಸಂಘಟನೆಗಳ ಹಿತಾಸಕ್ತಿಗಳಿಗೆ ಬಲಿಯಾಗುವುದರ ವಿರುದ್ಧ ಎಚ್ಚರಗೊಳ್ಳದೇ ಹೋದರೆ, “ವಿದ್ಯಾರ್ಥಿ ಚಳುವಳಿ’ ಎಂಬ ಭವ್ಯ ಕಲ್ಪನೆ ಬಹುಬೇಗನೆ ಇತಿಹಾಸದ ಪುಟಗಳಲ್ಲಿ ಸೇರಿಹೋಗುವುದರಲ್ಲಿ ಸಂಶಯವಿಲ್ಲ. 

– ಸಿಬಂತಿ ಪದ್ಮನಾಭ ಕೆ., ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next