Advertisement

ಅಂತರ್ಜಾಲ ಅರಸುತ್ತ ಮರವೇರಿದ ವಿದ್ಯಾರ್ಥಿ!

08:46 AM May 18, 2020 | Sriram |

ಬೆಳ್ತಂಗಡಿ: ಕೋವಿಡ್‌ ವೈರಸ್‌ ಶೈಕ್ಷಣಿಕ ರಂಗದ ಮೇಲೂ ಪರಿಣಾಮ ಬೀರಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೆಲವು ಕಾಲೇಜುಗಳು ಆನ್‌ಲೈನ್‌ ವೇದಿಕೆಗಳ ಮೂಲಕ ಪಾಠಪ್ರವಚನ ಮುಂದುವರಿಸಿವೆ. ಆದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್‌ನದ್ದೇ ಸಮಸ್ಯೆ. ಇಲ್ಲೊಬ್ಬ ವಿದ್ಯಾರ್ಥಿ ಏನೇ ಆದರೂ ತರಗತಿಗಳನ್ನು ತಪ್ಪಿಸಬಾರದೆಂದು ನೆಟ್‌ವರ್ಕ್‌ ಅರಸುತ್ತ ಮರವೇರಿ ಕುಳಿತ ಕಥೆ ಇದು!

Advertisement

ಶಿರಸಿ ಮೂಲದ ಶ್ರೀರಾಮ್‌ ಉಜಿರೆ ಎಸ್‌ಡಿಎಂ ಕಾಲೇಜಿನ ಸಮಾಜ ಕಾರ್ಯ ವಿಭಾಗದ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿ ನಿಲಯದ‌ಲ್ಲಿ ವಾಸ್ತವ್ಯ ಹೂಡಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತರಗತಿಗಳು ಸ್ಥಗಿತಗೊಂಡಾಗ ಸುರಕ್ಷೆ ದೃಷ್ಟಿಯಿಂದ ವಿದ್ಯಾರ್ಥಿಗಳೆಲ್ಲರನ್ನು ಅವರ ಊರಿಗೆ ಕಳುಹಿಸಿದರು. ಆದರೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಾರದೆಂದು ಆನ್‌ಲೈನ್‌ ಮೂಲಕ ತರಗತಿಗಳನ್ನು ಆರಂಭಿಸಿದ ವಿದ್ಯಾ ಸಂಸ್ಥೆಯು ಇರುವಲ್ಲಿಂದಲೇ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿತು. ಆದರೆ ಶ್ರೀರಾಮ್‌ ಇರುವ ಶಿರಸಿಯ ಬಕ್ಕಳದಲ್ಲಿಇಂಟರ್‌ನೆಟ್‌ ಸಂಪರ್ಕದ್ದೇ ಸಮಸ್ಯೆ. ಹಾಗಾಗಿ ತರಗತಿಯಲ್ಲಿ ಭಾಗಿಯಾಗುವುದು ಸಾಧ್ಯವಾಗಲಿಲ್ಲ.

ಪರಿಶ್ರಮಕ್ಕೆ ಸಿಕ್ಕಿತು ಫಲ
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಛಲದಿಂದ ನೆಟ್‌ವರ್ಕ್‌ ಸಿಗುವ ಸ್ಥಳಕ್ಕಾಗಿ ತನ್ನ ಮನೆಯ ಸುತ್ತ ಹುಡುಕಾಟ ನಡೆಸಿದರು. ಕೊನೆಗೆ ಒಂದು ಕಿ.ಮೀ. ದೂರದಲ್ಲಿರುವ ಮರದ ಬಳಿ ನೆಟ್‌ವರ್ಕ್‌ ಲಭಿಸಿತು. ಕೇವಲ ಧ್ವನಿ ಕರೆಗಳನ್ನು ಸ್ವೀಕರಿಸಲು ಮಾತ್ರ ಸೀಮಿತವಾಗಿತ್ತು. ಅಂತರ್ಜಾಲ ಸಂಪರ್ಕ ಕಷ್ಟವಾಗಿತ್ತು. ಮರವೇರಿದರೆ ಅಂತರ್ಜಾಲ ಸಂಪರ್ಕವೂ ಸಾಧ್ಯವಾದೀತೇನೋ ಎಂಬ ಊಹೆಯಿಂದ ಮರವೇರಿದರು. ಪರಿಶ್ರಮಕ್ಕೆ ಫಲ ಸಿಕ್ಕಿಯೇ ಬಿಟ್ಟಿತು. ಅಂದಿನಿಂದ ಪ್ರತಿದಿನ ಮನೆಯಿಂದ ಒಂದು ಕಿ.ಮೀ. ದೂರದಲ್ಲಿರುವ ಈ ಸ್ಥಳಕ್ಕೆ ಬಂದು ಮರವೇರಿ ಕುಳಿತು ಅಂತರ್ಜಾಲ ಸಂಪರ್ಕ ಸಾಧಿಸಿ ತರಗತಿಗೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಹಜ ಸ್ಥಿತಿ ಇರುವ ಸಂದರ್ಭದಲ್ಲಿಯೇ ತರಗತಿ ಗಳಿಗೆ ಹಾಜರಾಗಲು ಹಿಂದೆಮುಂದೆ ನೋಡುವ ವಿದ್ಯಾರ್ಥಿಗಳ ನಡುವೆ ಈ ವಿದ್ಯಾರ್ಥಿಯ ಶ್ರದ್ಧೆಯನ್ನು ನೋಡಿ ವಿದ್ಯಾಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದ್ದಲ್ಲದೆ, ಇತರ ವಿದ್ಯಾರ್ಥಿಗಳಿಗೆ ಮಾದರಿ ಎಂದು ಕೊಂಡಾಡಿದೆ.

ಲಾಕ್‌ಡೌನ್‌ನಿಂದಾಗಿ ಎಂದಿನಂತೆ ತರಗತಿ ನಡೆಸಲಾಗದಿದ್ದರೂ ಕಾಲೇಜುಗಳು ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗ ಳೊಂದಿಗೆ ಸಂಪರ್ಕ ಸಾಧಿಸಲು ಸರ್ವ ಪ್ರಯತ್ನ ಮಾಡುತ್ತಿವೆ. ಉಜಿರೆಯ ಎಸ್‌ಡಿಎಂ ಕಾಲೇಜು ಗ್ರಾಮಾಂತರ ಪ್ರದೇಶದಲ್ಲಿದ್ದರೂ ತಂತ್ರಜ್ಞಾನ ಬಳಕೆಯಲ್ಲಿ ಹಿಂದೆಬಿದ್ದಿಲ್ಲ. ವಿದ್ಯಾರ್ಥಿಗಳ ಸ್ಪಂದನೆಯೂ ಉತ್ತಮವಾಗಿದೆ. ಅವರೆಲ್ಲರ ನಡುವೆ ಗ್ರಾಮೀಣ ಭಾಗದ ಶ್ರೀರಾಮ್‌ ಹೆಗಡೆ ಕಷ್ಟ ಪಟ್ಟು ಪಾಠ ಕೇಳುತ್ತಿದ್ದಾರೆ.
– ಸುವೀರ್‌ ಜೈನ್‌, ಪ್ರಾಧ್ಯಾಪಕರು, ಸಮಾಜ ಕಾರ್ಯ ವಿಭಾಗ

Advertisement

ನಮ್ಮೂರಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲದ್ದರಿಂದ ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸಲು ಅಸಾಧ್ಯ. ಸಮೀಪದ ಬೆಟ್ಟ ಹತ್ತಿ ಮರವೇರಿದರೆ ಮಾತ್ರ ಸಂಪರ್ಕ ಸಾಧ್ಯವಾಗುತ್ತದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದಾದರೆ ನನಗಿರುವ ಮಾರ್ಗ ಇದೊಂದೇ. ಸೋಂಕಿನಿಂದ ದೂರ ಇದ್ದು, ಕಾಲೇಜಿನ ಚಟುವಟಿಕೆಗಳಿಗೆ ಈ ರೀತಿಯಲ್ಲಿ ಹತ್ತಿರವಾಗುತ್ತಿದ್ದೇನೆ.
– ಶ್ರೀರಾಮ್‌ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next