Advertisement

ವಿದ್ಯಾರ್ಥಿ ನಿಲಯ ಆರಂಭ ಮಾರ್ಗಸೂಚಿ ಗೊಂದಲ!

12:56 AM Nov 22, 2020 | sudhir |

ಬೆಂಗಳೂರು: ಕಾಲೇಜು ಆರಂಭವಾದ ಹಿಂದೆಯೇ ವಿದ್ಯಾರ್ಥಿ ನಿಲಯಗಳ ಬಾಗಿಲು ತೆರೆಯಲು ಸರಕಾರ ಸಿದ್ಧತೆ ನಡೆಸಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಇದೇ ವಿದ್ಯಾರ್ಥಿ ನಿಲಯಗಳು ಕ್ವಾರಂಟೈನ್‌ ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಾಗಿದ್ದು, ಬಳಸಲಾಗಿದ್ದ ಹಾಸಿಗೆ, ಹಾಸು, ದಿಂಬು, ಹೊದಿಕೆಗಳನ್ನು ತೊಳೆದು ಮರುಬಳಸಲು ನಿರ್ದೇಶನ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

Advertisement

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯ ಆರಂಭಕ್ಕೆ ರಾಜ್ಯ ಸರಕಾರ ಸುರಕ್ಷಾ ಮಾರ್ಗಸೂಚಿ (ಎಸ್‌ಒಪಿ) ಸಿದ್ಧಪಡಿ ಸಿ ದೆ. ಇದರಲ್ಲಿ ಬಳಕೆ ಮಾಡಿರುವ ಬಟ್ಟೆಗಳನ್ನು ಡಿಟರ್ಜಂಟ್‌ನೊಂದಿಗೆ ಬಿಸಿ ನೀರಿನಲ್ಲಿ ತೊಳೆದು ಮರು ಬಳಕೆ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ವಸತಿ ಶಾಲೆ ಅಥವಾ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್‌ ಇರುವ ವ್ಯಕ್ತಿ ವಾಸವಾಗಿದ್ದರೆ ಅಲ್ಲಿನ ಹಾಸಿಗೆ, ಹಾಸಿಗೆ ಹಾಸು, ದಿಂಬು, ದಿಂಬಿನ ಕವರ್‌, ಹೊದಿಕೆಗಳನ್ನು ಡೆಟಾಲ್‌ ಅಥವಾ ಸ್ಯಾವಲಾನ್‌ ಮಿಶ್ರಿತ ಬಿಸಿ ನೀರಿನಲ್ಲಿ ನೆನೆಸಿ, ಡಿಟರ್ಜಂಟ್‌ನಿಂದ ತೊಳೆದು, ಬಿಸಿಲಿನಲ್ಲಿ ಒಣಗಿಸಿ, ಇಸ್ತ್ರಿ ಮಾಡಿಸಿ, ಮರು ಬಳಕೆ ಮಾಡುವಂತೆ ಎಸ್‌ಒಪಿಯಲ್ಲಿ ಉಲ್ಲೇಖೀಸಲಾಗಿದೆ.

ಹಾಸ್ಟೆಲ್‌ನಲ್ಲೇ ಐಸೊಲೇಶನ್‌
ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಅಥವಾ ಸಿಬಂದಿಗೆ ಕೊರೊನಾ ಲಕ್ಷಣ ಕಂಡುಬಂದಲ್ಲಿ ತತ್‌ಕ್ಷಣವೇ ಸೂಕ್ತ ಚಿಕಿತ್ಸೆ ಪಡೆಯಲು ಸೂಚಿಸಬೇಕು. ಅಂಥ ವಿದ್ಯಾರ್ಥಿಗಳಿಗೆ ಒಂದು ಕೊಠಡಿಯನ್ನು ಐಸೊಲೇಶನ್‌ ಕೊಠಡಿಯಾಗಿ ಪರಿವರ್ತಿಸಬೇಕು. ಪಾಸಿಟಿವ್‌ ಇರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಉಳಿಯಲು ಅವಕಾಶ ನೀಡಬಾರದು, ತತ್‌ಕ್ಷಣ ಕೋವಿಡ್‌ ಕೇರ್‌ ಸೆಂಟರ್‌ ಅಥವಾ ಕೋವಿಡ್‌ ಆಸ್ಪತ್ರೆಗೆ ಸೇರಿಸಬೇಕು ಎಂದು ಸೂಚಿಸಲಾಗಿದೆ.

ಮುಚ್ಚಳಿಕೆ ಕಡ್ಡಾಯ
ಮಧುಮೇಹ, ಮೂತ್ರಪಿಂಡದ ಕಾಯಿಲೆ, ಹೃದ್ರೋಗ, ಕ್ಯಾನ್ಸರ್‌ ಇತ್ಯಾದಿ ಗಂಭೀರ ಕಾಯಿಲೆ ಅಥವಾ ಸಮಸ್ಯೆಯಿಂದ ವಿದ್ಯಾರ್ಥಿಗಳು ಬಳಲುತ್ತಿಲ್ಲ ಎಂಬ ಬಗ್ಗೆ ಮುಚ್ಚಳಿಕೆ ಪಡೆದ ಅನಂತರವೇ ಪ್ರವೇಶ ನೀಡಬೇಕು. ವಿದ್ಯಾರ್ಥಿ ನಿಲಯಕ್ಕೆ ಸೇರುವ ಬಗ್ಗೆ ಪಾಲಕರಿಂದಲೂ ಕಡ್ಡಾಯವಾಗಿ ಒಪ್ಪಿತ ಪತ್ರ ಪಡೆಯಬೇಕು. ಕೊರೊನಾ ಪರೀಕ್ಷೆ ಮಾಡಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುವಂತೆ ಎಸ್‌ಒಪಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

Advertisement

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next