Advertisement

ಸಹಪಾಠಿಗಳ ರ್ಯಾಗಿಂಗ್‌ಗೆ ವಿದ್ಯಾರ್ಥಿನಿ ನೇಣಿಗೆ ಶರಣು

12:05 PM Feb 08, 2018 | Team Udayavani |

ಬೆಂಗಳೂರು: ಸಹಪಾಠಿಗಳ ರ್ಯಾಗಿಂಗ್‌ ನಿಂದ ಬೇಸತ್ತ ಕೆ.ಎಸ್‌.ಲೇಔಟ್‌ನ ದಯಾನಂದ ಸಾಗರ ಕಾಲೇಜಿನ ಪ್ರಥಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಚನ್ನಸಂದ್ರದ ಶಬರಿ ಅಪಾರ್ಟ್‌ಮೆಂಟ್‌ ನಿವಾಸಿ, ಬ್ಯಾಂಕ್‌ ಉದ್ಯೋಗಿ ಚಂದ್ರಶೇಖರ್‌ ಮತ್ತು ಲತಾ ದಂಪತಿ ಪುತ್ರಿ ಮೇಘನಾ (18) ಮೃತ ವಿದ್ಯಾರ್ಥಿನಿ. ತಮ್ಮ ಮಗಳ ಸಾವಿಗೆ ಕಾಲೇಜಿನ ಸಹಪಾಠಿಗಳು ಮತ್ತು ಕಾಲೇಜಿನ ಉಪನ್ಯಾಸಕ ರಾಜಕುಮಾರ್‌ ಹಾಗೂ ಆಡಳಿತ ಮಂಡಳಿ ಕಾರಣ ಎಂದು ಮೇಘನಾ ಪೋಷಕರು ರಾಜಾರಾಜೇಶ್ವರಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಹುಟ್ಟು ಅಂಧರಾಗಿರುವ ಚಂದ್ರಶೇಖರ್‌ ವಿಜಯ ನಗರ ಕಾರ್ಪೋರೇಷನ್‌ ಬ್ಯಾಂಕ್‌ ವ್ಯವಸ್ಥಾಪಕರಾಗಿದ್ದು, ಪತ್ನಿ ಲತಾ ಸಹಕಾರ ಬ್ಯಾಂಕ್‌ನಲ್ಲಿ ಉದ್ಯೋಗಿ. ಇವರಿಗೆ ಭಾವನಾ ಮತ್ತು ಮೇಘನಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಮೇಘನಾ ದಯಾನಂದ ಸಾಗರ ಕಾಲೇಜಿನಲ್ಲಿ ಪ್ರಥಮ ವರ್ಷದ ಕನ್‌ಸ್ಟ್ರಕ್ಷನ್‌ ಮತ್ತು ಟೆಕ್ನಾಲಜಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಹೋದರಿ ಭಾವನಾ ಡಿಪ್ಲೋಮಾ ಓದುತ್ತಿದ್ದಾರೆ.

ಬುಧವಾರ ಎಂದಿನಂತೆ ಲತಾ, ಪತಿ ಚಂದ್ರಶೇಖರ್‌ರನ್ನು ಕೆಲಸಕ್ಕೆ ಬಿಟ್ಟು ತಾವು ಕೆಲಸಕ್ಕೆ ತೆರಳಿದ್ದರು. ಇತ್ತ ಭಾವನಾ ಕಾಲೇಜಿಗೆ ಹೋಗಿದ್ದರು. ಮೇಘನಾ ಕೂಡ ಕಾಲೇಜಿಗೆ ಹೋಗಿ, ವಾಪಸ್‌ 2 ಗಂಟೆಗೆ ಮನೆಗೆ ಬಂದಿದ್ದಾರೆ. 4 ಗಂಟೆ ಸುಮಾರಿಗೆ ಮನೆಗೆ ಬಂದ ಭಾವನಾ, ಮೇಘನಾ ಕೊಠಡಿ ಬಾಗಿಲು ಬಡಿದಿದ್ದಾರೆ. ಎಷ್ಟು ಕೂಗಿದರೂ ಪ್ರತಿಕ್ರಿಯೆ ಬಾರದಿದ್ದನ್ನು ನೋಡಿ, ನೆರೆಹೊರೆಯವರ ಸಹಾಯದಿಂದ ಬಾಗಿಲು ತೆರೆದಾಗ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಪೋಷಕರಿಗೆ, ಪೊಲೀಸರಿಗೆ ತಿಳಿಸಿದ್ದಾರೆ.

ಎಚ್‌ಒಡಿ, ಸಹಪಾಠಿಗಳೇ ಕಾರಣ: ತಮ್ಮ ಪುತ್ರಿ ಸಾವಿಗೆ ಸಹಪಾಠಿಗಳು ,ಕಾಲೇಜಿನ ಆಡಳಿತ ಮಂಡಳಿ ಹಾಗೂ ಎಚ್‌ಒಡಿ ರಾಜಕುಮಾರ್‌ ನಿರ್ಲಕ್ಷ್ಯವೇ ಕಾರಣ ಎಂದು ಮೇಘನಾ ಪೋಷಕರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಮೇಘನಾ ಕಾಲೇಜಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಹೀಗಾಗಿ ಎದುರು ಗುಂಪಿನ ವಿದ್ಯಾರ್ಥಿಗಳು ಮೇಘನಾ ಜತೆ ಜಗಳವಾಡಿ, ದೂರವಿಟ್ಟಿದ್ದರು. ಜತೆಗೆ ಯಾವುದೇ ಅಸೈನ್‌ಮೆಂಟ್‌ ಕೊಡದೆ, ಕೆಟ್ಟ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೇಘನಾ ಬೇಸರದಿಂದ ಮನೆಯಲ್ಲೇ ಇರುತ್ತಿದ್ದಳು ಎಂದು ತಿಳಿಸಿದ್ದಾರೆ.

Advertisement

ನಿರ್ಲಕ್ಷ್ಯ: ಸಹೋದರಿ ಭಾವನಾ ಕಾಲೇಜಿಗೆ ಹೋಗಿ ಸಹಪಾಠಿಗಳಲ್ಲಿ ಸಾಮರಸ್ಯ ತರಲು ಯತ್ನಿಸಿದ್ದರು. ಆದರೆ ಮೇಘನಾ ಸಹಪಾಠಿಗಳು ಗರ್ವದಿಂದ ಮಾತನಾಡಿದ್ದರು. ಈ ಕುರಿತು ಎಚ್‌ಒಡಿ ರಾಜ ಕುಮಾರ್‌ ಗಮನಕ್ಕೆ ತಂದರೆ,ಅವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಪೋಷಕರು ದೂರಿದ್ದಾರೆ. 

ಮೇಘನಾಳ ಮಾನಸಿಕ ಸ್ಥಿತಿ ಕಂಡು ಧೈರ್ಯ ತುಂಬಿದ್ದ ತಾಯಿ ಲತಾ ಹಾಗೂ ಸಹೋದರಿ ಭಾವನಾ ಇಷ್ಟವಿಲ್ಲದಿದ್ದರೆ ಕಾಲೇಜು ಬಿಡುವಂತೆ ಸೂಚಿಸಿದ್ದರು. ಇಲ್ಲವಾದರೆ ಒಂದು ವಾರ ಕಾಲೇಜಿಗೆ ಹೋಗುವುದು ಬೇಡ ಎಂದು ಸಲಹೆ ನೀಡಿದ್ದರು. ಆದರೆ, ಆಕೆ ಓದಲು ಹಠ ಹಿಡಿದು ಕಾಲೇಜಿಗೆ ಹೋದ ಮೇಘನಾ ಸಾವಿನ ದಾರಿ ಹಿಡಿದಿದ್ದಾಳೆ. ಇದಕ್ಕೆ ಆಕೆಯ ಸಹಪಾಠಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ತಂದೆ ಚಂದ್ರಶೇಖರ್‌ ಆರೋಪಿಸಿದರು.

ಕೌನ್ಸೆಲಿಂಗ್‌ ಮಾಡಿದ್ದರೂ ಸರಿ ಹೋಗಿಲ್ಲ  ನಮ್ಮ ಕಾಲೇಜಿನಲ್ಲಿ ಚುನಾವಣೆ, ಶ್ರೀಮಂತರ ಮಕ್ಕಳು ಮತ್ತು ಮೆರಿಟ್‌ ವಿದ್ಯಾರ್ಥಿಗಳೆಂಬ ಬೇದಭಾವವಿಲ್ಲ. ವಿದ್ಯಾರ್ಥಿಗಳು ತರಗತಿಯಲ್ಲಿ ಯಾವುದೇ ಗಲಾಟೆ ಮಾಡಿಕೊಂಡಿಲ್ಲ. ಕಾಲೇಜಿನ ಕ್ಯಾಂಪಸ್‌ನಿಂದ ಹೊರಗಡೆ ಮಾಡಿಕೊಂಡ ಜಗಳಕ್ಕೆ ನಾವು ಹೊಣೆ ಅಲ್ಲ. ವಿದ್ಯಾರ್ಥಿನಿ ಮೇಘನಾ 1ನೇ ಸೆಮಿಸ್ಟರ್‌ನಲ್ಲಿ 2 ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಾರೆ. ಹೀಗಾಗಿ ಆಕೆಗೆ ಕೌನ್ಸೆಲಿಂಗ್‌ ಕೂಡ ಮಾಡಲಾಗಿತ್ತು. ಆದರೆ, ಆಕೆ ಸರಿ ಹೋಗಿಲ್ಲ. ಎಚ್‌ಒಡಿ ರಾಜಕುಮಾರ್‌ 31 ವರ್ಷದಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದು, ಸಣ್ಣ ಆರೋಪವೂ ಅವರ ಮೇಲೆ ಇಲ್ಲ ಎಂದು ದಯಾನಂದ ಸಾಗರ ಕಾಲೇಜು ಪ್ರಾಂಶುಪಾಲ ಡಾ.ಸಿ.ಪಿ.ಎಸ್‌. ಪ್ರಕಾಶ್‌ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next