Advertisement
ಕೂಳೂರಿನಲ್ಲಿ ನಾಪತ್ತೆ ತಂದೆ ಮತ್ತು ಮಗ ಶುಕ್ರವಾರ ವಿಮಾನ ಮೂಲಕ ಮಂಗಳೂರಿಗೆ ಬಂದಿದ್ದು, ಮಣಿಪಾಲಕ್ಕೆಂದು ಬಜಪೆಯ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಸಂಜೆ 4.20 ಗಂಟೆಗೆ ಕೂಳೂರು ಮಾರ್ಗವಾಗಿ ತೆರಳಿದ್ದರು. ಈ ವೇಳೆ ಕೂಳೂರಿನಲ್ಲಿ ಹೊಟೇಲ್‌ನಲ್ಲಿ ಚಹಾ ಸೇವನೆ ಬಳಿಕ ತಂದೆ ದೇವ್ ಕುಮಾರ್ ಬಿಲ್ ಪಾವತಿಸಿ ಹೊರ ಬರುವಷ್ಟರಲ್ಲಿ ಅಭಿಜಿತ್ ಕಾಣೆಯಾಗಿದ್ದ.
ಪುತ್ರನ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಸ್ಥಳೀಯರಿಗೆ ವಿಷಯ ತಿಳಿಸಿ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಕಾವೂರು ಪೊಲೀಸ್ ಠಾಣೆಯಲ್ಲಿ ಅವರು ನಾಪತ್ತೆ ದೂರು ದಾಖಲಾಗಿಸಿದ್ದರು.
ಭಯ ಕಂಡುಬಂದಿತ್ತು
ವಿಮಾನ ನಿಲ್ದಾಣದಿಂದ ಕೂಳೂರಿಗೆ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗ ಅಭಿಜಿತ್‌ನ ಮೊಬೈಲ್‌ಗೆ ಕರೆ ಬಂದಿದ್ದು, ಮಾತನಾಡುತ್ತಿದ್ದಾಗ ಆತನ ಮುಖದಲ್ಲಿ ಭಯ ಗೋಚರಿಸಿತ್ತು ಎಂದು ತಂದೆ ದೇವ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಆತನನ್ನು ಯಾರಾದರೂ ಕರೆದುಕೊಂಡು ಹೋಗಿರಬಹುದೇ ಎಂಬ ಸಂಶಯ ಹುಟ್ಟುಹಾಕಿದೆ. ಆತನು ಮೊಬೈಲ್‌ನಲ್ಲಿ ಆನ್‌ಲೈನ್ ಆಟ ಆಡುತ್ತಿದ್ದ ಎಂಬ ಮಾಹಿತಿಯನ್ನೂ ತಂದೆಯೇ ನೀಡಿದ್ದಾರೆ. ಮಣಿಪಾಲ ಕಾಲೇಜಿಗೆ ಸೇರುವವರಿದ್ದರೇ?
ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿಗೆ ಸೇರಲು ಅಭಿಜಿತ್ ತನ್ನನ್ನು ಕರೆ ತಂದಿರುವುದಾಗಿ ದೇವ್ ಕುಮಾರ್ ತಿಳಿಸಿದ್ದಾರೆ. ಆದರೆ ಅಲ್ಲಿ ಪ್ರವೇಶ ಮುಕ್ತಾಯವಾಗಿದೆ. ಆತ ಸುಳ್ಳು ಹೇಳಿದನೇ ಎಂಬ ಗುಮಾನಿ ವ್ಯಕ್ತವಾಗಿದೆ.
Related Articles
ಅಭಿಜಿತ್ ಪ್ರತಿಭಾವಂತ ಹುಡುಗ. ಅವನ ಗುಣ ನಡತೆ ಕೂಡ ಉತ್ತಮವಾಗಿದ್ದು, ಯಾವುದೇ ಅನುಮಾನಕ್ಕೂ ಎಡೆಮಾಡುವ ವರ್ತನೆಗಳು ಅವನಲ್ಲಿ ಕಂಡು ಬರುತ್ತಿರಲಿಲ್ಲ. ಹೀಗಿರುವಾಗ, ಅವನು ಯಾರದೋ ಒತ್ತಡಕ್ಕೆ ಸಿಲುಕಿ ಅಪಾಯದಲ್ಲಿರುವ ಸಾಧ್ಯತೆಯಿದೆ ಎಂದು ಪೋಷಕರು “ಉದಯವಾಣಿ’ಗೆ ತಿಳಿಸಿದ್ದಾರೆ.
Advertisement
ಲ್ಯಾಪ್‌ಟಾಪ್ ಚಾಲೂ ಸ್ಥಿತಿ ಯಲ್ಲಿ ಕಳೆದ ಮೂರು ದಿನಗಳಿಂದ ಪೊಲೀಸರು ಆತನ ಶೋಧ ಕಾರ್ಯ ನಡೆಸುತ್ತಿದ್ದು, ಎಲ್ಲಿಯೂ ಪತ್ತೆಯಾಗಿಲ್ಲ. ಆತನ ಕೈಯಲ್ಲಿ ಲ್ಯಾಪ್‌ಟಾಪ್ ಇದ್ದು, ರವಿವಾರ ಮಧ್ಯಾಹ್ನ ಅದರ ಮೂಲಕ ಇಂಟರ್‌ನೆಟ್ ಆ್ಯಕ್ಸೆಸ್ ಮಾಡಿ ಆನ್‌ಲೈನ್ ಲಾಗ್ ಇನ್ ಮಾಡಿರುವ ಸಂಗತಿ ತನಿಖೆ ನಡೆಸುತ್ತಿರುವ ಪೊಲೀಸರ ಗಮನಕ್ಕೆ ಬಂದಿದೆ. ಆದರೆ ಲ್ಯಾಪ್‌ಟಾಪ್ ಬಳಕೆ ಮಾಡಲು ಆತನು ಉಚಿತ ವೈಫೈ ಸೌಲಭ್ಯ ಇರುವ ರೈಲು ನಿಲ್ದಾಣ, ಬಸ್ ನಿಲ್ದಾಣ ಅಥವಾ ಮಾಲ್‌ಗಳನ್ನು ಆಶ್ರಯಿ ಸಿರುವ ಸಾಧ್ಯತೆ ಇದೆ. ಹೀಗಾಗಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಉಚಿತ ವೈಫೈ ಸೇವೆ ಲಭ್ಯವಿರುವ ರೈಲು ನಿಲ್ದಾಣ, ಕೆಲವು ಮಾಲ್‌ಗಳು ಸಹಿತ ಅನೇಕ ಕಡೆಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆೆ.